ಮೂಲ್ಕಿ: ಕಿನ್ನಿಗೋಳಿ ಸಮೀಪದ ಶ್ರೀ ರಾಮ ಮಂದಿರ ಬಳಿ ನ. 17 ರ ಬುಧವಾರ ರಾತ್ರಿ ಕಣಜದ ಹುಳು ಕಡಿದು ಗೃಹರಕ್ಷಕ ದಳ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ.ಕ ಟೀಲು ಬಳಿಯ ಎಕ್ಕಾರು ದೇವರಗುಡ್ಡೆ ನಿವಾಸಿ ಸಂತೋಷ್ (35) ಮೃತಪಟ್ಟವರು.

ಮಂಗಳೂರಿನ ಕಂಕನಾಡಿ ಠಾಣೆಯಲ್ಲಿ ಸಂತೋಷ್ ಗೃಹರಕ್ಷಕ ದಳದ ಸಿಬ್ಬಂದಿಯಾಗಿದ್ದರು. ಬುಧವಾರ ಸಂಜೆ ಶ್ರೀರಾಮ ಮಂದಿರ ಬಳಿ ಆಟೋದಲ್ಲಿ ಹೋಗುತ್ತಿದ್ದಾಗ ಕಣಜದ ಹುಳುಗಳ ದಾಳಿಗೊಳಗಾಗಿ ಕಿನ್ನಿಗೋಳಿ ಪರಿಸರದ ಶಾಲೆಯ ಕೆಲ ಮಕ್ಕಳು ಗಂಭೀರಾವಸ್ಥೆಯಲ್ಲಿದ್ದರು. ಇದನ್ನು ಕಂಡ ಸಂತೋಷ್ ಮಕ್ಕಳನ್ನು ಕಣಜದ ಹುಳುಗಳಿಂದ ರಕ್ಷಿಸಿ ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆನ್ನಲಾಗಿದೆ.
ಮಕ್ಕಳ ರಕ್ಷಣೆಯ ಸಂದರ್ಭ ಕಣಜದ ಹುಳು ಸಂತೋಷ್ ಅವರಿಗೂ ಕಡಿದಿದ್ದು, ಆದರೆ, ಅವರು ಯಾವುದೇ ಚಿಕಿತ್ಸೆ ಪಡೆಯದೆ ಮನೆ ಕಡೆ ತೆರಳಿದ್ದರೆನ್ನಲಾಗಿದೆ. ಮನೆಯಲ್ಲಿ ರಾತ್ರಿ ಸುಮಾರು 9 ಗಂಟೆಗೆ ಕುರ್ಚಿಯಲ್ಲಿ ಕುಳಿತ್ತಿದ್ದಾಗಲೇ ಅವರು ಮೃತಪಟ್ಟರು ಎಂದು ತಿಳಿದು ಬಂದಿದೆ.
ಆರು ಮಕ್ಕಳ ರಕ್ಷಣೆ ಮಾಡಿದ ಸಂತೋಷ್ ಅವರ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ. ಮೃತರು ತಾಯಿ, ಪತ್ನಿ, ಮೂವರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Comments are closed.