
ಮಂಗಳೂರು : ಹರಿಪಾದಗೈದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ನಿರ್ಯಾಣೋತ್ತರದಲ್ಲಿ ಭಾರತ ಘನ ಸರಕಾರವು ಘೋಷಿಸಿದ ‘ಪದ್ಮವಿಭೂಷಣ’ ಪ್ರಶಸ್ತಿಯನ್ನು ತನ್ನ ಗುರುಗಳ ಪರವಾಗಿ ಸನ್ಮಾನ್ಯ ರಾಷ್ಟ್ರಪತಿಗಳಿಂದ ಸ್ವೀಕರಿಸಿ ಮಂಗಳೂರಿಗೆ ಆಗಮಿಸಿದ ಪರಮ ಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರನ್ನು ಕಲ್ಕೂರ ಪ್ರತಿಷ್ಠಾನದ ಆಯೋಜಕತ್ವದಲ್ಲಿ ಮಂಗಳೂರಿನ ನಾಗರೀಕರಿಂದ ಸ್ವಾಗತಿಸಲಾಯಿತು.
ಬೆಂಗಳೂರಿನಿಂದ ವಿಮಾನದ ಮೂಲಕ ಬಜ್ಪೆಗೆ ಆಗಮಿಸಿದ ಪೂಜ್ಯಶ್ರೀಗಳನ್ನು ಶಿವಳ್ಳಿ ಸ್ಪಂದನಾ ಹಾಗೂ ಕಾಸರಗೋಡು ಗಡಿನಾಡ ಸಾಂಸ್ಕೃತಿಕ ವೇದಿಕೆ ಬಂಧುಗಳು ಮೆರವಣಿಗೆಯೊಂದಿಗೆ ಮಂಗಳೂರಿಗೆ ಕರೆತಂದರು. ಕದ್ರಿ ಕಂಬ್ಳದಿಂದ ನವನೀತ ಶೆಟ್ಟಿ ಕದ್ರಿ ನೇತೃತ್ವದಲ್ಲಿ ವಾದ್ಯಘೋಷಗಳೊಂದಿಗೆ ಮೆರವಣಿಗೆಯ ಮೂಲಕ ‘ಮಂಜುಪ್ರಸಾದ’ದ ವಾದಿರಾಜ ಮಂಟಪದ ‘ವಿಶ್ವೇಶತೀರ್ಥ ವೇದಿಕೆ’ಗೆ ಬರಮಾಡಿಕೊಳ್ಳಲಾಯಿತು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ದಂಪತಿಗಳ ಸಹಿತ ಮಂಗಳೂರಿನ ನಾಗರೀಕ ಪ್ರಮುಖರು ಹಾಗೂ ಸಂಘಸಂಸ್ಥೆಗಳ ಪ್ರತಿನಿಧಿಗಳು ಸ್ವಾಮೀಜಿಯವರನ್ನು ಬರಮಾಡಿಕೊಂಡು ಪೂಜ್ಯ ಶ್ರೀಗಳಿಗೆ `ವಿಶ್ವೇಶತೀರ್ಥ ವೇದಿಕೆ’ಯಲ್ಲಿ ಗೌರವ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಕರ್ಣಾಟಕ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಪದ್ಮವಿಭೂಷಣ ಪ್ರಶಸ್ತಿಯು ಪೂಜ್ಯ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಲಭಿಸಿರುವುದು ಯತಿ ಪರಂಪರೆಗೆ ಸಂದ ಶ್ರೇಷ್ಠ ಗೌರವ ಎಂದರು.
ವಿಶ್ವ ಹಿಂದು ಪರಿಷತ್ನ ಅಧ್ಯಕ್ಷರಾದ ಎಂ.ಬಿ. ಪುರಾಣಿಕ್ ಶುಭ ಹಾರೈಸಿದರು.ಪೇಜಾವರ ಶ್ರೀಗಳು ಅನುಗ್ರಹ ಭಾಷಣ ಮಾಡುತ್ತಾ ಸಾಮಾನ್ಯವಾಗಿ ಕಲೆ, ಸಾಹಿತ್ಯ, ಶಿಕ್ಷಣ, ಸಂಸ್ಕೃತಿ ಹೀಗೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಸಲ್ಲುತ್ತಿದ್ದ ರಾಷ್ಟ್ರದ ಅತ್ಯುನ್ನತ್ತ ಪ್ರಶಸ್ತಿಯಾದ `ಪದ್ಮ ವಿಭೂಷಣವು’ ಸನ್ಮಾನ್ಯ ರಾಷ್ಟ್ರಪತಿಗಳು ಉಲ್ಲೇಖಿಸಿದಂತೆ ವಿಶ್ವೇಶತೀರ್ಥ ಶ್ರೀಪಾದರ ವ್ಯಕ್ತಿಗತ ಗುಣನಡತೆ ಹಾಗೂ ಶ್ರೇಷ್ಠತೆಗೆ ಸಂದ ಗೌರವವಾಗಿದೆ ಎಂದು ಬಣ್ಣಿಸಿದರು.
ತುಳಸಿ ಪೂಜೆ, ಗೋಪೂಜೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು. ಬಳಿಕ ಸ್ವಾಮೀಜಿಯವರು ಪೇಜಾವರ ಮೂಲ ಮಠಕ್ಕೆ ತೆರಳಿ ಮುಖ್ಯಪ್ರಾಣ ದೇವರ ಪೂಜೆ ಸಲ್ಲಿಸಿ ಅಲ್ಲಿಂದ ಪೆರ್ಣಂಕಿಲ ದೇವಸ್ಥಾನಕ್ಕೆ ಭೇಟಿಯಿತ್ತು, ಉಡುಪಿಗೆ ತೆರಳಿದರು.
ಕರ್ಣಾಟಕ ಬ್ಯಾಂಕ್ನ ಅಧ್ಯಕ್ಷ ಪಿ. ಜಯರಾಮ ಭಟ್, ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್., ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಶಾರದಾ ವಿದ್ಯಾಲಯ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಎಂ.ಬಿ. ಪುರಾಣಿಕ್, ಯುಗಪುರುಷ ಕಿನ್ನಿಗೋಳಿಯ ಭುವನಾಭಿರಾಮ ಉಡುಪ, ಪ್ರಭಾಕರ ರಾವ್ ಪೇಜಾವರ, ತಾರಾನಾಥ ಹೊಳ್ಳ, ಕದ್ರಿ ನವನೀತ ಶೆಟ್ಟಿ, ಪೂರ್ಣಿಮಾ ರಾವ್ ಪೇಜಾವರ, ರಾಮಕೃಷ್ಣ ಭಟ್ ಕದ್ರಿ, ಸುಧಾಕರ ರಾವ್ ಪೇಜಾವರ, ಆರ್.ಡಿ. ಶಾಸ್ತ್ರಿ, ಗುಜರಾತಿ ಸಮಾಜದ ಪಂಕಜ್ ವಸಾನಿ, ಶಿವಳ್ಳಿ ಸಂಪದ, ಹವ್ಯಕ ಸಮಾಜ, ಕದ್ರಿ ದೇವಳದ ಪ್ರಮುಖರು ಶರವು ದೇವಾಲಯದ ಪ್ರಮುಖರು, ಕೂಟ ಮಹಾ ಜಗತ್ತು, ಸಮತಾ ಬಳಗ, ಬಾಲಕರ ಶಾರದೆ ಚಿಲಿಂಬಿ (ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಂಸ್ಥೆ) ವಿಶ್ವಹಿಂದು ಪರಿಷತ್ತು, ಗೌಡ ಸಾರಸ್ವತ ಸಮಾಜ, ಮೊದಲಾದ ಸಂಘ ಸಂಸ್ಥೆಗಳ ಪ್ರತಿನಿಧಿಗಳೂ ಈ ಸಂದರ್ಭ ಉಪಸ್ಥಿತರಿದ್ದರು.
Comments are closed.