ಕರ್ನಾಟಕ

ಸಕ್ರೆಬೈಲಿನ ಮರಿಯಾನೆಗೆ ‘ಪುನೀತ್’ ಹೆಸರಿಟ್ಟ ಅರಣ್ಯ ಇಲಾಖೆ ಕಾರ್ಯಕ್ಕೆ ಸಂಸದ ಬಿ.ವೈ ರಾಘವೇಂದ್ರ ಮೆಚ್ಚುಗೆ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಶಿವಮೊಗ್ಗ: ಸಕ್ರೆಬೈಲಿನಲ್ಲಿ ನೇತ್ರಾವತಿ ಆನೆಯ ಮರಿಗೆ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಇಡುವುದರೊಂದಿಗೆ ಅರಣ್ಯ ಇಲಾಖೆಯು ವಿಶೇಷವಾಗಿ ಗೌರವಿಸಿರುವುದು ತಿಳಿದು ಸಂತೋಷವಾಯಿತು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದ ಬಿ.ವೈ ರಾಘವೇಂದ್ರ ಅವರು, ‘ವನ್ಯಜೀವಿಗಳ ಕುರಿತು ಪುನೀತ್ ರಾಜ್ ಕುಮಾರ್ ಅವರಿಗೆ ಅತೀವವಾದ ಕಾಳಜಿ ಮತ್ತು ಪ್ರೀತಿ ಇತ್ತು. ಕೆಲವು ತಿಂಗಳುಗಳ ಹಿಂದೆ ಅವರು ಸಾಕ್ಷ್ಯಚಿತ್ರದ ಚಿತ್ರೀಕರಣಕ್ಕೆ ಸಕ್ರೆಬೈಲಿಗೆ ಬಂದು ಇದೇ ಆನೆ ಮರಿಯನ್ನು ಪ್ರೀತಿಯಿಂದ ಮುದ್ದಾಡಿರುವುದು ಇನ್ನೂ ಕಣ್ಣ ಮುಂದೆ ಹಸಿರಾಗಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

 

ಇನ್ನು ರಾಜ್ಯದ ಅತಿದೊಡ್ಡ ಆನೆಗಳ ಬಿಡಾರ ಎಂಬ ಖ್ಯಾತಿಗೆ ಪಾತ್ರವಾದ ಸಕ್ರೆಬೈಲು ಗಾಜನೂರು ಅಣೆಕಟ್ಟೆಯ ಸಮೀಪದಲ್ಲಿದೆ. ಈ ಶಿಬಿರದಲ್ಲಿ ಆನೆಗಳ ತರಬೇತಿ ಹಾಗೂ ಪ್ರವಾಸಿಗರಿಗೆ ಆನೆ ಸವಾರಿ ಮೊದಲಾದ ಚಟುವಟಿಕೆಗಳು ನಡೆಯುತ್ತವೆ. ಈ ಬಿಡಾರದಲ್ಲಿ ಆನೆಗಳು ತಮ್ಮ ಪುಟ್ಟ ಮರಿಗಳೊಂದಿಗೆ ನೀರಿನಲ್ಲಿ ಸ್ನಾನ ಮಾಡುವುದನ್ನು ನೋಡುವುದೇ ಸೊಬಗು. ಎರಡು ತಿಂಗಳ ಹಿಂದೆಯಷ್ಟೇ (ಸೆ.1) ಡಾಕ್ಯುಮೆಂಟರಿ ಚಿತ್ರೀಕರಣಕ್ಕೆ ಜಿಲ್ಲೆಗೆ ಆಗಮಿಸಿದ್ದ ಅಪ್ಪು ಸಕ್ರೆಬೈಲು ಆನೆ ಬಿಡಾರಕ್ಕೆ ಆಗಮಿಸಿದ್ದರು. ಈ ವೇಳೆ ಪುನೀತ್ ರಾಜ್ ಕುಮಾರ್ ಈ ಮರಿ ಆನೆಯನ್ನು ಮುದ್ದಿಸಿದ್ದರು. ಹಾಗಾಗಿಯೇ ಸಕ್ರೆಬೈಲು ಆನೆ ಬಿಡಾರದಲ್ಲಿ ಬುಧವಾರ ನಡೆದ ತಾಯಿ‌ ಆನೆಯಿಂದ ಮರಿಯಾನೆಯನ್ನು ಬೇರ್ಪಡಿಸುವ ವೀನಿಂಗ್ ಕಾರ್ಯಕ್ರಮದಲ್ಲಿ ನೇತ್ರಾ ಆನೆಯಿಂದ ಮರಿಯನ್ನು ಬೇರ್ಪಡಿಸಲಾಗಿದ್ದು ಈ ವೇಳೆ ಮರಿಯಾನೆಗೆ ಪುನೀತ್ ಹೆಸರನ್ನು ನಾಮಕರಣ ಮಾಡಲಾಗಿತ್ತು.

 

Comments are closed.