ಬೆಂಗಳೂರು: ಬಿಜೆಪಿಯವರಂತಹ ಜಾತಿವಾದಿಗಳು ಬೇರಾರು ಇಲ್ಲ, ಸಂವಿಧಾನ ಬದಲಾವಣೆ ಮಾಡ್ತೀನಿ ಎಂದು ಹೇಳಿದವರ ಪಕ್ಷಕ್ಕೆ ಸ್ವಾರ್ಥಕ್ಕಾಗಿ ಹಲವರು ಹೋಗ್ತಿದ್ದಾರೆ ಎಂದು ಭಾಷಣದಲ್ಲಿ ಹೇಳಿದ್ದೆ. ಆದರೆ ಬಿಜೆಪಿಯವರು ನನ್ನ ಹೇಳಿಕೆಯನ್ನು ತಮಗೆ ಬೇಕಾದಂತೆ ತಿರುಚಿ, ನನ್ನ ವಿರುದ್ಧ ಹೋರಾಟ ಮಾಡಿದ್ದಾರೆ. ನನ್ನ ಪ್ರತಿಕೃತಿ ಸುಟ್ಟ ತಕ್ಷಣ ನಾನು ಸುಟ್ಟೋಗಲ್ಲ. ನನ್ನ ಜನ, ನನ್ನ ಪ್ರೀತಿಸುವವರು ಸುಟ್ಟೋಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ‘ಎಲ್ಲರೂ ಸಮಾನವಾಗಿರಬೇಕು, ಜಾತಿ ವ್ಯವಸ್ಥೆ ಸಮಾಜದಿಂದ ದೂರವಾಗಬೇಕು, ಮನುಷ್ಯರಾಗಿ, ಸಮಾನರಾಗಿ ಬದುಕುವಂತಾಗಬೇಕು ಎಂಬ ನನ್ನ ನಿಲುವಿಗೆ ನಾನು ಈಗಲೂ ಬದ್ಧ’.
‘ಸಿದ್ದರಾಮಯ್ಯ ಕುರುಬ ಸಮಾಜಕ್ಕೆ ಏನು ಕೊಟ್ಟಿದ್ದಾರೆ? ಎಂದು ಕೆಲವರು ಕೇಳ್ತಾರೆ. ಒಂದು ಜಾತಿಯಲ್ಲಿ ಮಾತ್ರ ಬಡವರಿದ್ದಾರ? ಮುಖ್ಯಮಂತ್ರಿಯಾಗಿ ಒಂದು ಸಮಾಜದ ಅಭಿವೃದ್ಧಿ ಮಾತ್ರ ಬಯಸುವುದು ಸರಿಯೇ?
ಹೀಗಾಗಿ ಅವಕಾಶದಿಂದ ವಂಚಿತರಾದ ಎಲ್ಲ ಜನರ ಪರ ನಾನು ಕೆಲಸ ಮಾಡಿದ್ದೇನೆ’.
ಕೆಂಪೇಗೌಡರು, ಕಿತ್ತೂರು ರಾಣಿ ಚೆನ್ನಮ್ಮ, ಟಿಪ್ಪು, ಭಗೀರಥ, ಕೃಷ್ಣ, ವೇಮನ ಮತ್ತಿತರರ ಜಯಂತಿ ಆಚರಣೆ ಮಾಡಿದ್ದು ನಮ್ಮ ಸರ್ಕಾರ.
ಜಾತಿ, ಧರ್ಮಗಳನ್ನು ಮೀರಿ ಸಾಧನೆಯನ್ನು ಮಾಡಿದವರ ಜಯಂತಿ ಆಚರಣೆಗೆ ಜಾತಿ ಏಕೆ?
ಸಮಾಜದಲ್ಲಿ ಜಾತಿ ವಿಷಬೀಜ ಬಿತ್ತುವ ಕೊಳಕು ಮನಸ್ಸಿನವರಿಗೆ ಮಾತ್ರ ನಾನು ಜಾತಿವಾದಿಯಂತೆ ಕಾಣುವುದು. ನನ್ನನ್ನು ಜಾತಿವಾದಿ ಎನ್ನುವವರು ಅನ್ನಭಾಗ್ಯ, ಕ್ಷೀರ ಭಾಗ್ಯ, ಕೃಷಿ ಭಾಗ್ಯ, ಕ್ಷೀರಧಾರೆ, ವಿದ್ಯಾಸಿರಿ, ಸಾಲಮನ್ನಾ ಮುಂತಾದ ಯೋಜನೆಗಳ ಫಲಾನುಭವಿಗಳ ಬಳಿ ಸಿದ್ದರಾಮಯ್ಯ ಜಾತಿವಾದಿಯೇ ಎಂದು ಕೇಳಿನೋಡಿ.. ಎಂದು ಬರೆದುಕೊಂಡಿದ್ದಾರೆ.
Comments are closed.