ಕರಾವಳಿ

20 ತಿಂಗಳ ಬಳಿಕ ಅಂಗನವಾಡಿಗೆ ಚಿಣ್ಣರ‌ ಆಗಮನ | ಪುಟಾಣಿಗಳಿಗೆ ಆರತಿ ಬೆಳಗಿ ಸ್ವಾಗತಿಸಿದ ಕುಂದಾಪುರ ಸಿಡಿಪಿಒ (Video)

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಉಡುಪಿ: ಕೊರೊನಾ ಕಾರಣದಿಂದ ಸುಮಾರು 20 ತಿಂಗಳುಗಳಿಂದ ಮುಚ್ಚಿದ್ದ ಎಲ್ಲಾ ಅಂಗನವಾಡಿಗಳು ಇಂದು (ನ.8) ಆರಂಭಗೊಂಡಿದ್ದು ಸುದೀರ್ಘ ರಜೆಯ ಬಳಿಕ ಚಿಣ್ಣರು ಅಂಗನವಾಡಿಗೆ ಮರಳಿದ್ದಾರೆ.

ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳನ್ನ ವೆಲ್ ಕಮ್ ಮಾಡಲು ಅಂಗನವಾಡಿ ಆವರಣದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಶಾಲೆಗಳು ಮಕ್ಕಳಿಗೆ ಆಕರ್ಷವಾಗುವಂತಹ ರೀತಿಯಲ್ಲಿ ಶಾಲೆಗಳನ್ನು ಸಜ್ಜುಗೊಳಿಸಿದ್ದಾರೆ. ಪುಟಾಣಿಗಳನ್ನು ಪೋಷಕರು ಕರೆತಂದು ಅಂಗನವಾಡಿ ಕೇಂದ್ರಕ್ಕೆ ಬಿಟ್ಟರು.

ಉಡುಪಿ ಜಿಲ್ಲೆಯಲ್ಲಿ ಸಂಭ್ರಮ…
ಅಂಗನವಾಡಿ ಕೇಂದ್ರಕ್ಕೆ ಬಾಳೆ ಕಂಬ, ಕಲರ್ ಕಲರ್ ಬಲೂನ್, ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು.ಇನ್ನು ಕೆಲ ಶಾಳೆಗಳಲ್ಲಿ ಮಕ್ಕಳಿಗೆ ಇಷ್ಟವಾಗುವ ಗೊಂಬೆ, ಮಕ್ಕಳ ಆಟದ ಸಾಮಾಗ್ರಿಗಳನ್ನ ಇಟ್ಟು ಸ್ವಾಗತ ಮಾಡಲಾಗುತ್ತಿದೆ.ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು ಅಂಗನವಾಡಿ ಪ್ರಾರಂಭೋತ್ಸವದ ಹಿನ್ನೆಲೆ ಅಂಗನವಾಡಿ ಸಿಬ್ಬಂದಿಗಳು ಸಿಹಿತಿಂಡಿ, ಗುಲಾಬಿ ಹೂ ನೀಡಿ ಮಕ್ಕಳನ್ನು ಸ್ವಾಗತಿಸಿದರು.

ಆರತಿ ಬೆಳಗಿ ಸ್ವಾಗತಿಸಿದ ಸಿಡಿಪಿಒ
ಈ ಸಂದರ್ಭ ಕಟ್ಕೆರೆ ಹಾಗೂ ನೇರಂಬಳ್ಳಿ ಬ್ರಹ್ಮನಗುಡಿ ಅಂಗನವಾಡಿ ಕೇಂದ್ರಕ್ಕೆ ಕುಂದಾಪುರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (ಸಮಗ್ರ ಶಿಶು ಅಭಿವೃದ್ಧಿ ಯೋಜನೆ) ಯೋಜನಾಧಿಕಾರಿ ಶ್ವೇತಾ ಹಾಗೂ ಮೇಲ್ವಿಚಾರಕಿ ಸುಜಯಾ ಭೇಟಿ ನೀಡಿದ್ದು, ಮಕ್ಕಳಿಗೆ ಆರತಿ ಬೆಳಗಿ, ಸಿಹಿ ಹಂಚಿ, ಹೂ ನೀಡಿ ಪ್ರೀತಿಯಿಂದ ಬರಮಾಡಿಕೊಂಡರು. ಈ ವೇಳೆ ಕೋಣಿ ಗ್ರಾ.ಪಂ.ಅಧ್ಯಕ್ಷೆ ವಸಂತಿ, ಗ್ರಾ.ಪಂ.ಸದಸ್ಯ ಗಣಪತಿ ಶೇಟ್, ಸ್ತ್ರೀ ಶಕ್ತಿ ಸದಸ್ಯೆ ಮುಬೀನಾ, ಬಾಲ ವಿಕಾಸ ಸಮಿತಿಯ ಸದಸ್ಯ ಶ್ರೀಕಾಂತ, ಆಶಾ ಕಾರ್ಯಕರ್ತೆ ನಾಗರತ್ನ, ಕಟ್ಕೆರೆ ಅಂಗನವಾಡಿ ಕೇಂದ್ರದ ಸಹಾಯಕಿ ಬಾಬಿ ಮೊದಲಾದವರು ಉಪಸ್ಥಿತರಿದ್ದರು. ಕಟ್ಕೆರೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಭಾಗ್ಯ ಎಸ್. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನೇರಂಬಳ್ಳಿ ಭೇಟಿ ವೇಳೆ ಅಂಗನವಾಡಿ ಕಾರ್ಯಕರ್ತೆ, ಸಿಬ್ಬಂದಿ, ಪೋಷಕರಿದ್ದರು.

ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಸಿಡಿಪಿಒ ಶ್ವೇತಾ ಅವರು, ಒಂದೂವರೆ ವರ್ಷದಿಂದ ಅಂಗನವಾಡಿಗೆ ಮಕ್ಕಳು ಬಾರದಿದ್ದು ಅವರನ್ನು ಪೂರಕ ವಾತಾವರಣ ಸೃಷ್ಟಿಸಿ ಅಂಗನವಾಡಿ ಕೇಂದ್ರಕ್ಕೆ ಬರಮಾಡಿಕೊಳ್ಳುವ ಉದ್ದೇಶದಿಂದ ವಿಭಿನ್ನ ರೀತಿಯಲ್ಲಿ ಚಿಣ್ಣರನ್ನು ಸ್ವಾಗತಿಸಲಾಯಿತು. ಅಂಗನವಾಡಿ ಆರಂಭಕ್ಕೂ ಮುನ್ನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಎಲ್ಲಾ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ ಬೆಳಗ್ಗೆ 10 ರಿಂದ 12 ರವರೆಗೆ ಮಾತ್ರ ಅಂಗನವಾಡಿಯನ್ನು ತೆರೆಯಲು ಆದೇಶವಿದೆ. ಮುಂದಿನ ಸೂಚನೆವರೆಗೆ ಪೂರಕ ಪೌಷ್ಠಿಕ ಆಹಾರವನ್ನು/ಆಹಾರ ಪದಾರ್ಥಗಳನ್ನು ಮನೆಗೆ ನೀಡಲಾಗುವುದು. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ 2 ಹಂತದ ಕೊರೋನಾ ವ್ಯಾಕ್ಸಿನೇಷನ್‌ ಆಗಬೇಕೆಂದು ಸೂಚಿಸಲಾಗಿದೆ ಎಂದರು.

Comments are closed.