ಕರಾವಳಿ

‘ಏನು ಇಲ್ಲದವನ ಮುಂದೆ ಎಲ್ಲ ಇದ್ದವನ ಒಂದು ಆಟ’- ರಾತ್ರಿ ವಾಟ್ಸಾಪ್ ಸ್ಟೇಟಸ್ ಹಾಕಿದ ಮುದೂರಿನ ಯುವಕ ಬೆಳಿಗ್ಗೆ ಕಂಡಿದ್ದು ಹೆಣವಾಗಿ..!

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಕುಂದಾಪುರ ನಗರದ ಹೃದಯ ಭಾಗದಲ್ಲಿರುವ ಸಸ್ಯಹಾರಿ ಹೋಟೆಲ್‌ ಒಂದರಲ್ಲಿ ಕಾರ್ಮಿಕನಾಗಿದ್ದ ಯುವಕನೊಬ್ಬನ‌ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಆತ ತಂಗುವ ಕೊಠಡಿಯಲ್ಲಿ ಪತ್ತೆಯಾದ ಘಟನೆ ಗುರುವಾರ ಮುಂಜಾನೆ ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂಬುದು ಕಂಡುಬಂದಿದ್ದು ಮೃತನ ಪೋಷಕರು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆ‌ ಮಣಿಪಾಲ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ‌ ಮೃತದೇಹ‌ ರವಾನಿಸಲಾಗಿದೆ.

ಮೂಲತಃ ಜಡ್ಕಲ್ ಸಮೀಪದ ಮುದೂರು ಬಸ್ರಿಬೇರು ನಿವಾಸಿ ಪ್ರಶಾಂತ್ (19) ಮೃತ ಯುವಕ. ಈತ ಕಳೆದ ಮೂರು ವರ್ಷದಿಂದ ಕುಂದಾಪುರದ ಹೋಟೆಲಿನಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ.

ಘಟನೆ ವಿವರ…
ಬಸ್ರಿಬೇರಿನ ನಿವಾಸಿಗಳಾದ ಕೂಲಿ ಕೆಲಸ ಮಾಡಿಕೊಂಡಿರುವ ಲಚ್ಚು ನಾಯ್ಕ್, ಗೌರಿ ದಂಪತಿಗಳ ಮೂರು ಮಕ್ಕಳಲ್ಲಿ ಕೊನೆಯವನಾದ ಪ್ರಶಾಂತ್ ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸದ ಬಳಿಕ ಮನೆ ಜವಬ್ದಾರಿ ನಿರ್ವಹಣೆಗಾಗಿ ಹೋಟೆಲ್ ಕೆಲಸಕ್ಕೆ ಸೇರಿದ್ದ. ಒಂದಷ್ಟು ಸಮಯದ ನಂತರ ಮಹಾರಾಷ್ಟ್ರದ ಕಂಪೆನಿ ಕೆಲಸಕ್ಕೆಂದು ಹೋದಾಗ ಮೊದಲ ಅಲೆಯ ಕೊರೋನಾ‌ ಲಾಕ್ಡೌನ್ ಹಿನ್ನೆಲೆ ಒಂದೇ ವಾರಕ್ಕೆ ಊರಿಗೆ ಮರಳುವಂತಾಗಿತ್ತು.‌‌ ತದನಂತರ ಮತ್ತೆ ಅದೇ ಕುಂದಾಪುರದ ಹೋಟೆಲ್ ಕೆಲಸಕ್ಕೆ ಸೇರಿಕೊಂಡಿದ್ದ. ಮನೆಯವರು ಬಳಿ ಉತ್ತಮವಾಗಿಯೇ ಇದ್ದ ಆತ ಯಾವುದೇ ಗೊಂದಲ ಅಥವಾ ಸಮಸ್ಯೆಯಲ್ಲಿ ಇರಲಿಲ್ಲ. ಅ.20 ಬುಧವಾರ ಸಂಜೆ ವೇಳೆಗೆ ಮನೆಗೆ ಕರೆ ಮಾಡಿ ಲವಲವಿಕೆಯಿಂದಲೇ ಮಾತನಾಡಿದ್ದ ಆತ ಸಹೋದರನ ಖಾತೆಗೆ 5000 ಹಣ ಜಮಾ ಮಾಡಿದ್ದ. ಮಾತ್ರವಲ್ಲದೆ ಮುಂದಿನ ತಿಂಗಳು ಮನೆಗೆ ಬರುವುದಾಗಿ ತಿಳಿಸಿದ್ದ ಎಂದು ಪೋಷಕರು ತಿಳಿಸಿದ್ದಾರೆ. ಗುರುವಾರ ಮುಂಜಾನೆ ಹೋಟೆಲ್ ಕಡೆಯವರಿಂದ ಮನೆಯವರಿಗೆ ಕರೆ ಬಂದಿದ್ದು ಪ್ರಶಾಂತ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಲೆ ಪೋಷಕರು, ಸಂಬಂಧಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಇನ್ನು ಮಧ್ಯ ರಾತ್ರಿ ವೇಳೆ ಯುವಕ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದು ‘ ಏನು ಇಲ್ಲದವನ ಮುಂದೆ ಎಲ್ಲಾ ಇದ್ದವನ ಒಂದು ಆಟ’ ಎಂದು ಮಾರ್ಮಿಕವಾಗಿ ಬರೆದುಕೊಂಡಿದ್ದಾ‌ನೆ.

ಆತ್ಮಹತ್ಯೆ ಮಾಡಿಕೊಳ್ಳುವವನಲ್ಲ: ಪೋಷಕರು
ಮನೆಯ ನಿರ್ವಹಣೆಯಲ್ಲಿ ಆತ ಮೊದಲಿನಿಂದಲೂ ಸಹಕಾರಿಯಾಗಿದ್ದ. ಬುಧವಾರ ಕೂಡ ಹಣ ಕಳುಹಿಸಿ ಒಳ್ಳೇ ರೀತಿ ಮಾತನಾಡಿದ್ದ. ಆತ ಆತ್ಮಹತ್ಯೆ ಮಾಡಿಕೊಳ್ಳುವ ಯುವಕನಲ್ಲ. ಏನೋ ನಡೆದಿದೆ ಎನ್ನುವ ಅನುಮಾನವಿದೆ. ಪೊಲೀಸರು ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಪ್ರಶಾಂತ್ ಪೋಷಕರು ಕಣ್ಣೀರಿಟ್ಟಿದ್ದಾರೆ. ಆದರೆ ಇದೊಂದು ಆತ್ಮಹತ್ಯೆ ಎಂಬುದು‌ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅಸಹಜ ಸಾವು ಪ್ರಕರಣದಡಿ ದೂರು ದಾಖಲಿಸಿಕೊಂಡಿದ್ದು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆ ಮಣಿಪಾಲ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ವರದಿ‌ಬಂದ ಬಳಿಕ ನಿಜಾಂಶ ಹೊರಬೀಳಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

Comments are closed.