ಕರಾವಳಿ

ಮೀನುಗಾರರು ಹೆಚ್ಚಿರುವ ಗ್ರಾಮಗಳ ಅಭಿವೃದ್ದಿಗೆ 7.5 ಕೋಟಿ ಅನುದಾನ: ಕೇಂದ್ರ ಸಚಿವ ಡಾ. ಮುರುಗನ್

Pinterest LinkedIn Tumblr

ಉಡುಪಿ: ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಗ್ರಾಮಗಳನ್ನು ಗುರುತಿಸಿ, ಆ ಗ್ರಾಮಗಳಲ್ಲಿ ಮೀನುಗಾರರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಅಭಿವೃದ್ದಿಪಡಿಸಲು 7.5 ಕೋಟಿ ರೂ ಅನುದಾನ ನೀಡುವ ನೂತನ ಯೋಜನೆ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಮೀನುಗಾರಿಕೆ, ವಾರ್ತಾ ಮತ್ತು ಪ್ರಚಾರ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆಯ ರಾಜ್ಯ ಸಚಿವ ಡಾ. ಎಲ್. ಮುರುಗನ್ ಹೇಳಿದರು.

ಅವರು ಇಂದು ಮಲ್ಪೆ ಬಂದರಿಗೆ ಭೇಟಿ ನೀಡಿ,ಮೀನುಗಾರರರೊಂದಿಗೆ ನಡೆದ ಸಂವಾದ ನಡೆಸಿ, ಮಾತನಾಡಿದರು.

ಕೇಂದ್ರ ಸರ್ಕಾರದ ಮೂಲಕ ,ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮಗಳಲ್ಲಿ , ಮೀನುಗಾರರಿಗೆ ಅಗತ್ಯ ಮೂಲಭೂತ ಸೌಕರ್ಯ,ಮೀನುಗಾರಿಕಾ ಚಟುವಟಿಕೆ ಮತ್ತು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಅಭಿವೃದ್ದಿಗೆ ಅನುಕೂಲವಾಗುವ ಕಾಮಗಾರಿಗಳನ್ನು ಕೈಗೊಳ್ಳಲು 7.5 ಕೋಟಿ ರೂ ಗಳನ್ನು ನೀಡಲಾಗುವುದು, ಮೀನುಗಾರರ ಗ್ರಾಮಗಳನ್ನು ಗುರುತಿಸುವ ಕಾರ್ಯ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದರು.

ಕರ್ನಾಟಕದಲ್ಲಿ ಮೀನುಗಾರಿಕಾ ಚಟುವಟಿಕೆಗಳ ಅಭಿವೃಧ್ದಿಗಾಗಿ ಕೇಂದ್ರ ಸರ್ಕಾರದಿಂದ ಮುಂದಿನ 5 ವರ್ಷದಲ್ಲಿ 725 ಕೋಟಿ ರೂಗಳ ಹೊಡಿಕೆ ಮಾಡಲಾಗುವುದು. ಹೆಜಮಾಡಿಯಲ್ಲಿ ಬಂದರು ನಿರ್ಮಣ ಕಾರ್ಯಕ್ಕೆ ಈಗಾಗಲೇ ಅನುಮೋದನೆ ದೊರೆತಿದೆ. ಮೀನುಗಾರರ ಮಹಿಳೆಯರಿಗೆ ಸಮುದ್ರ ಪಾಚಿ ಬೆಳೆಸುವ ಯೋಜನೆ ರೂಪಿಸಲಾಗಿದ್ದು, ಈ ಮೂಲಕ ಆರ್ಥಿಕ ಸಬಲತೆ ನೀಡಲಾಗಿದೆ.

ದೇಶದ 5 ಬಂದರುಗಳನ್ನು ಅಂತರಾಷ್ಟ್ರೀಯ ಸೌಲಭ್ಯಗಳೊಂದಿಗೆ ಅಭಿವೃಧ್ದಿಪಡಿಸಲಾಗುತ್ತಿದೆ. ಈ ಬಂದರುನಲ್ಲಿ ಮೀನುಗಾರರಿಗೆ ಅಗತ್ಯ ಮೂಲ ಸೌಕರ್ಯ, ಆಸ್ಪತ್ರೆ, ಐಸ್ ಪ್ಲಾಂಟ್ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುವುದು. ದೇಶದ ಮೀನುಗಾರಿಕ ಕ್ಷೇತ್ರಕ್ಕೆ ಮೂಲ ಸೌಲಭ್ಯ ಒದಗಿಸಲು ಮತ್ತು ಸಮಗ್ರ ಅಭಿವೃಧಿಗೆ ಹಾಗೂ ಮೀನುಗಾರರ ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸಲು ಕೇಂದ್ರ ಸರ್ಕಾರ ಬದ್ದವಾಗಿದೆ ಎಂದರು.

ರಾಜ್ಯದ ಮೀನುಗಾರಿಕಗೆ ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಮಾತನಾಡಿ,ರಾಜ್ಯದ ಮೀನುಗಾರಿಕಾ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ, ಮೀನುಗಾರರ ವಿವಿಧ ಬೇಡಿಕೆಗಳ ಕುರಿತೂ ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು , ಮೀನುಗಾರರ ಅಭಿವೃಧ್ದಿಗೆ ಕೇಂದ್ರಕ್ಕೆ ಈಗಾಗಲೇ 16 ಪ್ರಸ್ತಾವನೆಗಳನ್ನು ಕಳುಹಿಸಲಾಗಿದೆ ಎಂದರು.

ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ಪ್ರಸ್ತುತ ಮೀನುಗಾರಿಕಾ ಕ್ಷೇತ್ರ ಅತ್ಯಂತ ಸಂಕಷ್ಠದಲ್ಲಿದ್ದು,ಕೇಂದ್ರ ಸರ್ಕಾರ ಮೀನುಗಾರರಿಗೆ ನೀಡುವ ಡೀಸೆಲ್ ಮೇಲಿನ ತೆರಿಗೆ ಕಡಿತ ಮಾಡಬೇಕು, ನಾಡದೋಣಿಗಳಿಗೆ ಸೀಮೆಎಣ್ಣೆ ವಿತರಣೆ ಮಾಡಬೇಕು, ಡ್ರೆಜ್ಜಿಂಗ್ ಸಮಸ್ಯೆ ಬಗೆಹರಿಸಬೇಕು, ಬೋಟ್ ಗಳಿಗೆ ವಿಧಿಸುವ ರೋಡ್ ಸೆಸ್ ನಿಂದ ರಿಯಾಯತಿ ನೀಡಬೇಕು, ಸಮುದ್ರದಲ್ಲಿ ಮೀನುಗಾರರರಿಗೆ ಎದುರಾಗುವ ಅಂತರ್ರಾಜ್ಯ ಸಮಸ್ಯೆಗಳನ್ನು ಬಗೆಹರಿಸಬೇಕು, ಬಿಪಿಎಲ್ ಕಾರ್ಡ್ ಹೊಂದಿರುವ ಮೀನುಗಾರರ ಯಾಂತ್ರೀಕೃತ ಬೋಟುಗಳಿಗೆ ನೀಡುವ ಡೀಸೆಲ್ ಸಬ್ಸಿಡಿಯನ್ನು ಎಲ್ಲಾ ಮೀನುಗಾರರ ವರ್ಗಕ್ಕೆ ವಿಸ್ತರಿಸಬೇಕು ಎಂದು ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು.

ಮೀನುಗಾರರಾದ ರವಿರಾಜ್ ಸುವರ್ಣ ಮಾತನಾಡಿ, ಸಮುದ್ರ ಮಧ್ಯೆ ಆರೋಗ್ಯ ಸಮಸ್ಯೆ ಉಂಟಾದಲ್ಲಿ ಮೀನುಗಾರರ ರಕ್ಷಣೆ ಸೀ ಆಂಬುಲೈನ್ಸ್ ವ್ಯವಸ್ಥೆ ಮಾಡುವಂತೆ ಕೋರಿದರು. ಮೀನುಗಾರರ ಮಹಿಳೆ ಸುಮಿತ್ರಾ ಮಾತನಾಡಿ, ಮಲ್ಪೆ ಬಂದರು ಪ್ರದೇಶದಲ್ಲಿ ಒಣ ಮೀನು ಮಾರಾಟ ಮಾಡುವ ಮಹಿಳೆಯರಿಗೆ ಸೂಕ್ತ ಸ್ಥಳಾವಕಾಶ ಒದಗಿಸುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ಕಾಪು ಶಾಸಕ ಲಾಲಾಜಿ ಅರ್ ಮೆಂಡನ್, ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯತ್ ಸಿಇಓ ಡಾ.ನವೀನ್ ಭಟ್, ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಮೀನುಗಾರಿಕಾ ಇಲಾಖೆ ನಿರ್ದೇಶಕ ರಾಮಾಚಾರ್ಯ, ಕೆ.ಎಫ್.ಡಿ.ಸಿ ಅಧ್ಯಕ್ಷ ನಿತಿನ್ ಕುಮಾರ್, ವ್ಯವಸ್ಥಾಪಕ ನಿರ್ದೇಶಕ ದೊಡ್ಡಮನಿ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗಣೇಶ್ ಸ್ವಾಗತಿಸಿದರು. ಉಪ ನಿರ್ದೇಶಕ ಶಿವಕುಮಾರ್ ನಿರೂಪಿಸಿದರು ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ವಂದಿಸಿದರು.

Comments are closed.