ಕರಾವಳಿ

ಗಂಗೊಳ್ಳಿಯಲ್ಲಿ ಅನ್ಯಕೋಮಿನವರು ಮೀನು ಖರೀದಿಸದಿರುವುದಕ್ಕೆ ಖಂಡನೆ: ಮೀನು ಖರೀದಿಸಿದ ಭಜರಂಗದಳ, ವಿ.ಹಿಂ.ಪ.

Pinterest LinkedIn Tumblr

ಕುಂದಾಪುರ: ಇತ್ತೀಚೆಗೆ ಗೋ ಹತ್ಯೆಯನ್ನು ವಿರೋಧಿಸಿ ಗಂಗೊಳ್ಳಿಯಲ್ಲಿ ನಡೆದ ಬೃಹತ್ ಪಾದಯಾತ್ರೆಯ ಬಳಿಕ ಅನ್ಯಕೋಮಿನ ಒಂದು ವರ್ಗ ಗಂಗೊಳ್ಳಿ ಮೀನು ಖರೀದಿ ಮಾಡದಿರುವುದನ್ನು ಖಂಡಿಸಿದ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ಕುಂದಾಪುರ ಪ್ರಖಂಡ ಮೀನುಗಾರ ಮಹಿಳೆಯರಿಗೆ ನೈತಿಕ ಬೆಂಬಲ ನೀಡಿದೆ.

ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ಕುಂದಾಪುರ ಪ್ರಖಂಡದ ಪ್ರಮುಖರು ಹಾಗೂ ನಂದಗೋಕುಲ ಗೇರುಬೀಜ ಕಾರ್ಖಾನೆಯ ನೌಕರರು, ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಮಂಗಳವಾರ ಮೀನು ಖರೀದಿಸಿ ಮಹಿಳಾ ಮೀನುಗಾರರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು. ಮುಂದಿನ ದಿನಗಳಲ್ಲಿ ಬೇರೆ ಬೇರೆ ಗ್ರಾಮದ ಹಿಂದು ಸಮಾಜದವರು ಗಂಗೊಳ್ಳಿಗೆ ಬಂದು ಮೀನು ಖರೀದಿಸುವ ಕಾರ್ಯ ಮಾಡಲಿದ್ದಾರೆ. ಯಾವುದೇ ಕಾರಣಕ್ಕೂ ಮಹಿಳಾ ಮೀನುಗಾರರು ಎದೆಗುಂದಬಾರದು ಎಂದು ಮಹಿಳೆಯರಲ್ಲಿ ವಿಶ್ವಾಸ ತುಂಬಿಸಿದರು.

ವಿಶ್ವ ಹಿಂದು ಪರಿಷತ್‌ನ ಕೇಂದ್ರಿಯ ವಿಶ್ವಸ್ಥ ಮಂಡಳಿ ಸದಸ್ಯ ಪ್ರೇಮಾನಂದ ಶೆಟ್ಟಿ ಕಟ್ಕೆರೆ ಮಾತನಾಡಿ, ಗಂಗೊಳ್ಳಿಯಲ್ಲಿ ನಡೆದಿರುವ ವಿದ್ಯಮಾನದ ಬಳಿಕ ಅನ್ಯಕೋಮಿನವರು ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಮೀನು ಖರೀದಿಗೆ ಬಹಿಷ್ಕಾರ ಹಾಕಿರುವುದು ಖಂಡನೀಯ. ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಹೊಟ್ಟೆಪಾಡಿಗೆ, ದೈನಂದಿನ ಜೀವನ ನಡೆಸಲು ಮೀನು ಮಾರಾಟ ಮಾಡುತ್ತಿರುವ ಮೀನುಗಾರರಿಂದ ಒಂದೇ ಸಮನೆ ಮೀನು ಖರೀದಿಗೆ ಬಹಿಷ್ಕಾರ ಹಾಕುವ ಮೂಲಕ ಅವರ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ನಡೆಸಲಾಗುತ್ತಿದೆ. ಯಾರೇ ಬಹಿಷ್ಕಾರ ಹಾಕಿದರೂ, ಯಾರೇ ದಾಳಿ ಮಾಡಿದರೂ ಕೂಡ ನಾವು ನಿರಂತರವಾಗಿ ಮಹಿಳಾ ಮೀನುಗಾರರಿಗೆ ಸಹಕಾರ ನೀಡುತ್ತೇವೆ ಎಂದು ಅವರು ಹೇಳಿದರು.

ಸಾವಿರಾರು ವರ್ಷಗಳಿಂದ ಇದೇ ರೀತಿಯಲ್ಲಿ ಬಹಿಷ್ಕಾರ ಹಾಕುತ್ತಾ ಇಡೀ ದೇಶಾದ್ಯಂತ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗಿದೆ. ಹಿಂದುಗಳನ್ನು ರಾಷ್ಟ್ರದಿಂದ ಬೇರ್ಪಡಿಸುವ ಭಾಗವಾಗಿ ಷಡ್ಯಂತ್ರ ನಡೆದಿದೆ. ಈ ಷಡ್ಯಂತ್ರ ಇನ್ನು ಮುಂದೆ ಯಶಸ್ವಿಯಾಗುವುದಿಲ್ಲ. ಸಮಸ್ತ ಹಿಂದು ಜನಾಂಗ ಎಚ್ಚೆತ್ತುಕೊಂಡಿದೆ. ಈ ದೇಶದ ಯಾವುದೇ ಮೂಲೆಯಲ್ಲಿ ಹಿಂದು ಸಮಾಜದ ಮೇಲೆ ಅಕ್ರಮಣ ಅಥವಾ ಇಂತಹ ವಿಭಜನೆ ಶಕ್ತಿಗಳು ತಮ್ಮ ಕಾರ್ಯ ಚಟುವಟಿಕೆಗಳನ್ನು ತೋರಿಸಿದರೆ ಸಮಸ್ತ ದೇಶದ ಹಿಂದು ಸಮಾಜ ತಕ್ಕ ನೀಡಲು ಸಿದ್ಧವಾಗಿದೆ. ನಿಮ್ಮ ಯಾವುದೇ ಷಡ್ಯಂತ್ರ ವಿಫಲ ಮಾಡಲು ನಾವು ಸಿದ್ಧರಿದ್ದೇವೆ. ಎಂದಿಗೂ ಹಿಂದು ಸಮಾಜ ಮೀನುಗಾರರ ಪರವಾಗಿದ್ದೇವೆ ಎಂದು ಹೇಳಿದರು.

ವಿಹಿಂಪ ಕುಂದಾಪುರ ತಾಲೂಕು ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಗೋಳಿಯಂಗಡಿ, ಬಜರಂಗದಳ ಜಿಲ್ಲಾ ಸಂಚಾಲಕ ಸುರೇಂದ್ರ ಮಾರ್ಕೋಡು, ವಿಹಿಂಪ ಸಂಪರ್ಕ ಪ್ರಮುಖ್ ಗಿರೀಶ ಕುಂದಾಪುರ, ಭಜರಂಗದಳ ತಾಲೂಕು ಸಂಚಾಲಕ ಸುಧೀರ್, ತಾಲೂಕು ಮಠ ಮಂದಿರ ಪ್ರಮುಖ್ ಶ್ರೀನಿವಾಸ ಕುಂದರ್, ಬಿ‌ಎಂಎಸ್ ಗೌರವಾಧ್ಯಕ್ಷ ಕೆ.ಟಿ.ಸತೀಶ್, ಸಂಕೇತ್ ಕೊರ್ಗಿ, ವಿಹಿಂಪ ಮತ್ತು ಬಜರಂಗದಳ ಕಾರ್ಯಕರ್ತರು, ನಂದಗೋಕುಲ ಗೇರುಬೀಜ ಕಾರ್ಖಾನೆಯ ನೌಕರರು, ಮತ್ತಿತರರು ಉಪಸ್ಥಿತರಿದ್ದರು.

Comments are closed.