ಕರಾವಳಿ

ಹಿರಿಯ ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್‌ ವಿಧಿವಶ

Pinterest LinkedIn Tumblr

ಮಂಗಳೂರು: ಖ್ಯಾತ ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್‌ (66) ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಲ್ಮಡ್ಕದ‌ ನಿವಾಸದಲ್ಲಿ‌ ಕೊನೆಯುಸಿರೆಳೆದರು.

ಕಳೆದ ಸುಮಾರು 40 ವರ್ಷಕ್ಕೂ ಹೆಚ್ಚು ಕಾಲ ಯಕ್ಷರಂಗದಲ್ಲಿ ಭಾಗವತರಾಗಿ ಮಿಂಚುತ್ತಿರುವ ಪದ್ಯಾಣ ಗಣಪತಿ ಭಟ್ಟರು ವೃತ್ತಿಪರ ಭಾಗವತರಾಗಿ ತೆಂಕಿನಲ್ಲಿ ಪದ್ಯಾಣ ಶೈಲಿಯನ್ನೇ ಹುಟ್ಟು ಹಾಕಿದ ಮೇರು ಕಲಾವಿದರಾಗಿದ್ದರು.

ಪದ್ಯಾಣ ತಿರುಮಲೇಶ್ವರ ಭಟ್ಟ ಮತ್ತು ಸಾವಿತ್ರಿ ದಂಪತಿಯ ಮೂರನೇ ಮಗನಾಗಿ 1955ರಲ್ಲಿ ಜನನಿದ್ದ ಗಣಪತಿ ಭಟ್ ಆ ಕಾಲದಲ್ಲಿ ಭಾಗವತಿಕೆಗೆ ಹೆಸರಾಗಿದ್ದ ಅಜ್ಜ ಪುಟ್ಟು ನಾರಾಯಣ ಭಟ್ಟರಿಂದಲೇ ಭಾಗವತಿಕೆಯ ಪ್ರಾಥಮಿಕ ಪಾಠ ಅಭ್ಯಾಸ ಮಾಡಿದ್ದರು. ಅಜ್ಜನ ಶಿಷ್ಯರಾಗಿದ್ದ ಮಾಂಬಾಡಿ ನಾರಾಯಣ ಭಾಗವತರಲ್ಲಿ ಮುಂದಿನ ಅಭ್ಯಾಸ ಮಾಡಿದ್ದರು. ಎರಡು ವರ್ಷಗಳಲ್ಲೇ ಭಾಗವತಿಕೆಯ ಸೂಕ್ಷ್ಮಪಾಠ, ತಾಳಗತಿ ಹಾಗೂ ಪಟ್ಟುಗಳಲ್ಲಿ ಪರಿಣತಿಯತ್ತ ಸಾಗಿದ ಗಣಪತಿ ಭಟ್ಟರು 1971ರಲ್ಲಿ ಅಂದರೆ, ತಮ್ಮ 16ರ ಹರೆಯದಲ್ಲೇ ಚೌಡೇಶ್ವರೀ ಮೇಳದಲ್ಲಿ ಸಂಗೀತಗಾರರಾಗಿ ಸೇರಿ ಮುಂದಿನ ವರ್ಷ ಕುಂಡಾವು ಮೇಳ ಪ್ರವೇಶಿಸಿ ಅಲ್ಲಿ 2 ವರ್ಷ ಸೇವೆ ಸಲ್ಲಿಸಿದರು. ಮುಂದೆ ಕಸ್ತೂರಿ ವರದರಾಯ ಪೈ ಯಜಮಾನರಾದ ಸುರತ್ಕಲ್‌ ಮೇಳ ಸೇರಿದರು.

40 ವರ್ಷಗಳ ಸುದೀರ್ಘ ಕಾಲ ಭಾಗವತರಾಗಿ ಕುಂಡಾವು, ಚೌಡೇಶ್ವರೀ, ಸುರತ್ಕಲ್‌, ಮಂಗಳಾದೇವಿ, ಕರ್ನಾಟಕ, ಎಡನೀರು, ಹೊಸನಗರ ಮೇಳದಲ್ಲಿ ತಮ್ಮ ಸೇವೆ ಸಲ್ಲಿಸಿದ್ದ ಅವರಿಗೆ ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ಗೌರವ, ಪ್ರಶಸ್ತಿಗಳು ಲಭಿಸಿತ್ತು.

Comments are closed.