ಕರಾವಳಿ

ಯಡಮೊಗೆ ಉದಯ್ ಗಾಣಿಗ ಕೊಲೆ ಕೇಸಿನ ಆರೋಪಿ‌ ಬಾಲಚಂದ್ರ ಭಟ್ ಜಾಮೀನು‌ ಅರ್ಜಿ ತಿರಸ್ಕರಿಸಿದ ಸೆಷನ್ಸ್ ಕೋರ್ಟ್

Pinterest LinkedIn Tumblr

ಕುಂದಾಪುರ: ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ಸಾಮಾಜಿಕ ಕಾರ್ಯಕರ್ತ ಯಡಮೊಗೆ ಉದಯ ಗಾಣಿಗ ಕೊಲೆ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾದ ಬಳಿಕ ತನ್ನ ವಕೀಲರ ಮೂಲಕ ಸೆಶನ್ಸ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದ ಬಾಲಚಂದ್ರ ಭಟ್ ಜಾಮೀನು ಅರ್ಜಿ ವಜಾಗೊಳಿಸಿ ಕುಂದಾಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಎಂ. ಜೋಷಿ ಆದೇಶಿಸಿದ್ದಾರೆ.

ಕೊಲೆ ಸಂಚು ರೂಪಿಸಿದ ಆರೋಪದಡಿಯಲ್ಲಿ ಬಾಲಚಂದ್ರ ಭಟ್ ಬಂಧನವಾಗಿದ್ದು ಈ ಹಿಂದೆ ತನಿಖಾ ಕಾಲದಲ್ಲಿಯೂ ವಕೀಲರ ಮೂಲಕ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದು ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಆರೋಪಿಗೆ ಜಾಮೀನು ನೀಡಿದಲ್ಲಿ ಸಾಕ್ಷ್ಯ ನಾಶ ಸಂಭವದ ಹಿನ್ನೆಲೆ ಈ ಹಿಂದೆಯೂ ಜಾಮೀನು‌ ತಿರಸ್ಕರಿಸಲಾಗಿತ್ತು. ಪ್ರಸ್ತುತ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿದ್ದು ಮತ್ತೆ ಸೆಶನ್ಸ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಅದರ ವಿಚಾರಣೆ ನಡೆದು ಇಂದು‌ ಜಾಮೀನು ಅರ್ಜಿ ತಿರಸ್ಕರಿಸಿ ಆದೇಶ ಪ್ರಕಟಿಸಲಾಗಿದೆ.

ಆರೋಪಿಗೆ ಮತ್ತು ಮೃತ ವ್ಯಕ್ತಿಗೆ ವಿಚಾರವೊಂದರಲ್ಲಿ‌ ಮನಸ್ತಾಪ ಇರುವುದು ಪ್ರಾಥಮಿಕ ತನಿಖಾ ಹಂತದಲ್ಲಿ ತಿಳಿದುಬಂದಿದ್ದು ಕೊಲೆ‌ ಸಂಚಿನಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸಾಕ್ಷ್ಯಾಧಾರಗಳಿಂದ ಕಂಡುಬಂದ ಬಗ್ಗೆ ದೋಷಾರೋಪಣಾ ಪಟ್ಟಿಯಲ್ಲಿದೆ. ಆರೋಪಿ ಪ್ರಭಾವಿ ಹಾಗೂ ರಾಜಕೀಯದ ಹಿನ್ನೆಲೆವುಳ್ಳ ವ್ಯಕ್ತಿಯಾಗಿದ್ದು ಜಾಮೀನು ನೀಡಬಾರದು ಎಂದು ಪ್ರಾಸಿಕ್ಯೂಶನ್‌ ಪರ ಜಿಲ್ಲಾ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್‌ಚಂದ್ರ ಶೆಟ್ಟಿ ನ್ಯಾಯಾಲಯದಲ್ಲಿ ವಾದಿಸಿದ್ದರು.

ಘಟನೆ ಹಿನ್ನೆಲೆ…
ಜೂ.5 ಶನಿವಾರ ರಾತ್ರಿ ವೇಳೆ ಯಡಮೊಗೆ ಗ್ರಾಮಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಹಾಗೂ ಆತನ‌ ತಂಡ ಉದಯ್ ಗಾಣಿಗ ಅವರ ಮೈಮೇಲೆ ಕಾರು ಹತ್ತಿಸಿ ಆ ಬಳಿಕ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಬಗ್ಗೆ ಉದಯ್ ಗಾಣಿಗ ಪತ್ನಿ‌ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರಾಣೇಶ್ ಯಡಿಯಾಳನನ್ನು ಮೊದಲಿಗೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಪ್ರಕರಣದ ಎರಡನೇ ಆರೋಪಿ ರಾಜೇಶ್ ಭಟ್ ಹಾಗೂ ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಆರೋಪದಡಿ ಬಾಲಚಂದ್ರ ಭಟ್ ಬಂಧನವಾಗಿತ್ತು. ಮುಂದುವರಿದು ಆರೋಪಿ ಮನೋಜ್ ಕುಮಾರ್ ಹಾಗೂ ಯಡಮೊಗೆ ಪಂಚಾಯತ್ ಸದಸ್ಯ ಸದಾಶಿವ ನಾಯ್ಕ್ ಎನ್ನುವರನ್ನು ಬಂಧಿಸಲಾಗಿದ್ದು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ಇನ್ನೋರ್ವ ಆರೋಪಿಯಾಗಿರುವ ಯುವಕ ಈವರೆಗೂ ತಲೆಮರೆಸಿಕೊಂಡಿದ್ದಾನೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.