ಕರ್ನಾಟಕ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾತ್ರಿ ಮಳೆ ‘ಅಬ್ಬರ’: ಹಲವೆಡೆ ಜನ ಜೀವನ ದುಸ್ತರ..!

Pinterest LinkedIn Tumblr

ಬೆಂಗಳೂರು: ನಗರದಲ್ಲಿ ರಾತ್ರಿ ಎರಡು ಗಂಟೆಗಳ ಕಾಲ ಸುರಿದ ಭಾರಿ ಮಳೆಗೆ ಹಲವೆಡೆ ಮನೆ, ಅಂಗಡಿಗಳಿಗೆ ನೀರು ನುಗ್ಗಿದೆ.  ಜೆ.ಸಿ.ನಗರ, ಸಂಪಂಗಿ ರಾಮನಗರ, ರಾಜರಾಜೇಶ್ವರಿ ನಗರದ ಜನಪ್ರಿಯ ಲೇಔಟ್, ನಾಗರಬಾವಿ ಬಳಿಯ ಬಿಡಿಎ ಲೇಔಟ್‌, ಹೆಚ್‌ಎಎಲ್‌ನ ಬಸವನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ರಾಜಾಜಿನಗರದ 5ನೇ ಬ್ಲಾಕ್‌ನಲ್ಲಿ ಬೃಹತ್ ಮರವೊಂದು ಧರೆಗುರುಳಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ.

ಬಿಬಿಎಂಪಿ ಕೇಂದ್ರ ಕಚೇರಿ ಹಿಂದಿನ ರಸ್ತೆಯ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಜೆಸಿ ನಗರ ಹಾಗೂ ಸಂಪಂಗಿ ರಾಮನಗರದ ಹಲವೆಡೆ ರಸ್ತೆಯಲ್ಲಿನ ಡ್ರೈನೇಜ್ ಹಾಗೂ ರಾಜಕಾಲುವೆ ನೀರು ಮನೆಗಳಿಗೆ ನುಗ್ಗಿದೆ. ಬಿಬಿಎಂಪಿ ಅಧಿಕಾರಿಗಳು ಹಾಗೂ ಕಂಟ್ರೋಲ್ ರೂಂಗೆ ಜನರು ಸಹಾಯಕ್ಕಾಗಿ ಕರೆ ಮಾಡಿದರೂ ಸೂಕ್ತ ಸ್ಪಂದನೆ‌ ಸಿಕ್ಕಿಲ್ಲ. ಮಳೆ ಹಿನ್ನಲೆಯಲ್ಲಿ ಹಲವು ರಸ್ತೆಗಳು ಕೆಲ ಕಾಲ ಜಲಾವೃತಗೊಂಡಿದ್ದವು. ಸುಮಾರು ಒಂದು ಗಂಟೆಯ ಕಾಲ ರಸ್ತೆಯಲ್ಲಿ ನೀರು ನಿಂತಿತ್ತು. ಮಳೆ ನಂತರ ರಸ್ತೆಗಳು ಕೆಸರು ಮಯವಾಗಿದ್ದು ಸಂಚಾರಕ್ಕೆ ದುಸ್ತರವಾಗಿವೆ.

ಹೆಚ್‌ಎಎಲ್ ಬಳಿಯ ರಮೇಶ್ ನಗರದಲ್ಲಿ, ಹೆಚ್‌ಎಎಲ್‌ಗೆ ಸೇರಿದ 12 ಅಡಿ ಎತ್ತರದ ಗೋಡೆ ಕುಸಿದಿದೆ. 12 ಅಡಿ ಎತ್ತರ ಹಾಗೂ 100 ಮೀಟರ್ ಉದ್ದದ ಗೋಡೆ ಕುಸಿದಿರುವ ಪರಿಣಾಮ, ರಸ್ತೆಬದಿ ನಿಲ್ಲಿಸಿದ್ದ ಆಟೋ, ಕಾರು, ಬೈಕ್ ಸೇರಿ 10ಕ್ಕೂ ಹೆಚ್ಚು ವಾಹನ ಜಖಂಗೊಂಡಿದೆ. ಹೆಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ರಾಜರಾಜೇಶ್ವರಿ ನಗರದಲ್ಲಿ ರೈತ ಅಂದಾನಪ್ಪ ಎನ್ನುವರ ಕೊಟ್ಟಿಗೆಗೆ ರಾಜಕಾಲುವೆ ನೀರು ನುಗ್ಗಿ ಜಾನುವಾರು, ಮೇಕೆಗಳು ಕೊಚ್ಚಿ ಹೋಗಿದೆ. ಹವಾಮಾನ ವರದಿ ಪ್ರಕಾರ ಇಂದು‌ಕೂಡ ಮಳೆಯಾಗುವ ಸಾಧ್ಯತೆಯಿದೆ.

Comments are closed.