ನವದೆಹಲಿ: ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ಭೇಟಿಯ ವಿರುದ್ಧ ನಡೆದ ರೈತರ ಪ್ರತಿಭಟನೆಯ ಸಂದರ್ಭದಲ್ಲಿನ ಹಿಂಸಾಚಾರದಲ್ಲಿ 8 ಮಂದಿ ಮೃತಪಟ್ಟಿರುವ ಲಖಿಂಪುರ ಖೇರಿಗೆ ತೆರಳುವಾಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರನ್ನು ಬಂಧಿಸಲಾಗಿದೆ ಎಂದು ಎಎನ್ಐ ವರದಿ ಮಾಡಿದೆ. ಲಖೀಮ್ಪುರ್ ಖೇರಿಗೆ ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಸೀತಾಪುರದ ಹರಗಾಂವ್ ಬಳಿ ಇಂದು ಮುಂಜಾನೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಕುರಿತು ರಾಷ್ಟ್ರೀಯ ಯೂಥ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಟ್ವೀಟ್ ಟ್ವೀಟ್ ಮಾಡಿದ್ದು, ಅದರಲ್ಲಿ ಪ್ರಿಯಾಂಕಾ ಪೊಲೀಸರೊಂದಿಗೆ ಮಾತನಾಡುತ್ತಿರುವ ವಿಡಿಯೊವಿದೆ. ಇದನ್ನು ಹಂಚಿಕೊಂಡಿರುವ ಅವರು, ‘ಈ ದೇಶದಲ್ಲಿ ಏನಾಗುತ್ತಿದೆ…? Z+ ಭದ್ರತೆಯಿರುವ ನಾಯಕಿಯನ್ನು ಯಾವುದೇ ವಾರಂಟ್ ಇಲ್ಲದೇ ಪೊಲೀಸರು ಬಂಧಿಸಿದ್ದಾರೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ.
ಪ್ರಿಯಾಂಕಾ ಗಾಂಧಿಯವರನ್ನು ಉತ್ತರ ಪ್ರದೇಶ ಪೊಲೀಸರು ಗೃಹಬಂಧನದಲ್ಲಿರಿಸಿದ್ದರು. ಪ್ರಿಯಾಂಕಾ ಆ ಆದೇಶವನ್ನು ಧಿಕ್ಕರಿಸಿ ಭಾನುವಾರ ರಾತ್ರಿ ಲಖನೌದಿಂದ ಲಖಿಂಪುರ್ ಖೇರಿಗೆ ತೆರಳಿದರು. ಉತ್ತರ ಪ್ರದೇಶ ಪೊಲೀಸರು ಇಂದು (ಸೋಮವಾರ) ಬೆಳಗಿನ ಜಾವ 5.30 ರ ಸುಮಾರಿಗೆ ಹರಗಾಂವ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಪ್ರಿಯಾಂಕಾರನ್ನು ಬಂಧಿಸಿದ್ದಾರೆ. ಅವರನ್ನು ಸೀತಾಪುರ ಜಿಲ್ಲೆಯ ಅತಿಥಿ ಗೃಹಕ್ಕೆ ಕರೆದೊಯ್ಯಲಾಗಿದೆ.
Comments are closed.