ಕರಾವಳಿ

ಕುಂದಾಪುರ ಫ್ಲೈಓವರ್ ಕೆಳಗಿರುವ ನವಯುಗದ ಸಾಮಾಗ್ರಿ ತೆರವಿಗೆ 4 ದಿನ ಗಡುವು ನೀಡಿದ ಸಹಾಯಕ ಕಮಿಷನರ್

Pinterest LinkedIn Tumblr

(ವರದಿ-ಯೋಗೀಶ್ ಕುಂಭಾಸಿ)

ಕುಂದಾಪುರ: ಕ್ಲೀನ್ ಕುಂದಾಪುರ ವ್ಯವಸ್ಥೆಯನ್ನು ಅಣಕಿಸುವಂತಿದ್ದ ನಗರದ ಹೃದಯಭಾಗವಾದ ಶಾಸ್ತ್ರೀ ವೃತ್ತದ ಬಳಿಯ ಫ್ಲೈಓವರ್ ಕೆಳಭಾಗದಲ್ಲಿದ್ದ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆ ಪಡೆದ ನವಯುಗ ಕಂಪೆನಿಗೆ ಸೇರಿದ ರಾಶಿಗಟ್ಟಲೇ ಸಾಮಾಗ್ರಿಗಳನ್ನು ಮುಂದಿನ ನಾಲ್ಕು ದಿನಗಳಲ್ಲಿ ತೆರವುಗೊಳಿಸಲು ಕುಂದಾಪುರ ಸಹಾಯಕ ಕಮಿಷನರ್ ಕೆ.ರಾಜು ನವಯುಗ ಸಂಬಂದಪಟ್ಟವರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಶನಿವಾರ ಫ್ಲೈಓವರ್ ಕೆಳಗಿನ‌ ಸಾಮಾಗ್ರಿ ತೆರವು ಕಾರ್ಯಾಚರಣೆ ವೀಕ್ಷಿಸಿದ ಬಳಿಕ ಕುಂದಾಪುರ ಮಿನಿವಿಧಾನಸೌಧದಲ್ಲಿ ನವಯುಗ ಇಂಜಿನಿಯರ್ ಜೊತೆ ಸಭೆ ನಡೆಸಿದರು. ಈ ವೇಳೆ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ ಇದ್ದರು.

ನಾಲ್ಕು ದಿನಗಳಲ್ಲಿ ಸಾಮಾಗ್ರಿ ತೆರವು ಮಾಡುವುದು, ಕುಂದಾಪುರ ನಗರಕ್ಕೆ ಸಂಪರ್ಕಿಸುವ ದುರ್ಗಾಂಬ ಮೋಟಾರ್ ಎದುರು ‘ಕುಂದಾಪುರ’ ಎಂದು ನಾಮಫಲಕ ಅಳವಡಿಕೆ, ಅಲ್ಲಲ್ಲಿ ಸೂಚನಾ‌ಫಲಕ, ನಾಮಫಲಕ ಅಳವಡಿಕೆ, ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ಸಂಪರ್ಕಿಸುವಲ್ಲಿ ಡಾಮರು ಹಾಕುವುದು, ಅಂಡರ್ ಪಾಸ್ ಸಮೀಪದ ಸಮಸ್ಯೆಗಳ ಪರಿಹಾರ, ಬೀದಿ ದೀಪಗಳ ನಿರ್ವಹಣೆ ಮಾಡಬೇಕು ಎಂದರು. ಅಲ್ಲದೆ ಇದೇ ತಿಂಗಳ 29ರೊಳಗೆ ಶಾಸ್ತ್ರೀ ವೃತ್ತದ ಸಮೀಪ ಡಾಮರು ರಸ್ತೆ ಕೆಲಸ ಮುಗಿಸಬೇಕು ಎಂದು ಸಂಬಂದಪಟ್ಟವರಿಗೆ ಗಡುವು ನೀಡಿದರು. ಶಂಕರ ಅಂಕದಕಟ್ಟೆ, ಸುರೇಶ್ ಶೆಟ್ಟಿ ಗೋಪಾಡಿ, ಕಾಡೂರು ಸುರೇಶ್ ಶೆಟ್ಟಿ, ಸೋಮಶೇಖರ್ ಶೆಟ್ಟಿ ಕೆಂಚನೂರು, ಸತೀಶ್ ಪೂಜಾರಿ ವಕ್ವಾಡಿ ಸಮಸ್ಯೆಗಳ ಬಗ್ಗೆ ಎಸಿ ಅವರ ಗಮನಕ್ಕೆ ತಂದರು. ಈ ತಿಂಗಳ ಅಂತ್ಯದೊಳಗೆ ಹೆದ್ದಾರಿಗೆ ಸಂಬಂದಪಟ್ಟ ಎಲ್ಲಾ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದು ಎಸಿ ಕೆ. ರಾಜು ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಡಿವೈಎಸ್ಪಿ ಶ್ರೀಕಾಂತ್ ಕೆ. ಮಾತನಾಡಿ, ನವಯುಗ ಕಂಪೆನಿಯವರು ಬೀದಿ ದೀಪ ಅಳವಡಿಕೆ ಸರಿಯಾಗಿ ಮಾಡದ ಹಿನ್ನೆಲೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಅಪಘಾತ ನಡೆದು ಯಾರಾದರೂ ಸತ್ತರೆ ನಿಮ್ಮನ್ನೇ ಎರಡನೇ ಆರೋಪಿ ಮಾಡುತ್ತೇವೆ ಎಂದು ಗುತ್ತಿಗೆ ಕಂಪೆನಿಗೆ ಎಚ್ಚರಿಕೆ ನೀಡಿದರು. ಪ್ರತಿ 50 ಕಿಲೋಮೀಟರ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಬುಲೆನ್ಸ್ ವಾಹನ ಜಾಗೃತವಾಗಿರಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ನವಯುಗದ ಒಂದೇ ಅಂಬುಲೆನ್ಸ್ ಅಪಘಾತವಾದಾಗ ಸ್ಥಳಕ್ಕೆ ಬಂದಿರುವ ಉದಾಹರಣೆಯಿಲ್ಲ ಎಂದರು.

ಸಭೆಯಲ್ಲಿ‌ ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪಿಎಸ್ಐ ಸದಾಶಿವ ಗವರೋಜಿ, ಟ್ರಾಫಿಕ್ ಠಾಣೆ ಪಿಎಸ್ಐ ಸುದರ್ಶನ್ ಇದ್ದರು.

Comments are closed.