ಕರಾವಳಿ

ಕೋವಿಡ್ ವೇಳೆ ಶಿಕ್ಷಕರು ಜಿಲ್ಲೆಯ ಗಡಿಯಲ್ಲಿ ಸೈನಿಕರಂತೆ ಕರ್ತವ್ಯ ನಿರ್ವಹಿಸಿದ್ದಾರೆ: ಎಸಿ ಕೆ. ರಾಜು

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಸೈನಿಕರು ಗಡಿಯಲ್ಲಿ ನಿಂತು ಶತ್ರುಗಳಿಂದ ದೇಶ ಕಾಯುವಂತೆ ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಶಿಕ್ಷಕರು ಆಯಾಯ ಜಿಲ್ಲೆಯ ಗಡಿಯಲ್ಲಿ ಕಾದು ಕೋವಿಡ್ ಸೋಂಕು ತಡೆಯುವಲ್ಲಿ ಸೈನಿಕರಂತೆ ಸಮರ್ಥವಾಗಿ ತಮ್ಮ ಕರ್ತವ್ಯ ನಿಬಾಯಿಸಿದ್ದು ಇದೊಂದು ಅದ್ಭುತ, ಮರೆಯಲಾಗದ ವಿಚಾರ. ಅದರಂತೆಯೇ ಈಗಾಗಲೇ ಶಾಲೆಗಳು ಆರಂಭವಾಗಲಿದ್ದು ಶಿಕ್ಷಕರು ಉತ್ತಮ ರೀತಿಯಲ್ಲಿ ಪೂರ್ವತಯಾರಿ ಮಾಡಿಕೊಂಡು ಯಾರೊಬ್ಬ ವಿದ್ಯಾರ್ಥಿಗೂ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸಿ ಎಂದು ಕುಂದಾಪುರ ಸಹಾಯಕ ಕಮಿಷನರ್ ಕೆ. ರಾಜು ಹೇಳಿದರು.

ಉಡುಪಿ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ಇವರ ವತಿಯಿಂದ ಕೋಟೇಶ್ವರ ಹಾಲಾಡಿ ರಸ್ತೆಯ ಕಂದಾವರ ಆಡಿಟೋರಿಯಂನಲ್ಲಿ ಭಾನುವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗುರು ಎನ್ನುವವರು ಬ್ರಹ್ಮ, ವಿಷ್ಣು, ಮಹೇಶ್ವರ ಸ್ವರೂಪಿಗಳು. ಬ್ರಹ್ಮ ಸೃಷ್ಟಿಸಿದರೆ, ವಿಷ್ಣು ನಡೆಸಿಕೊಂಡು, ಮಹೇಶ್ವರ ಅಂತ್ಯ ಮಾಡುತ್ತಾನೆ ಎಂಬ ಪರಿಕಲ್ಪನೆಯಲ್ಲಿ ಬ್ರಹ್ಮ ನಮ್ಮನ್ನು ಪ್ರಪಂಚಕ್ಕೆ ಕಣ್ತೆರೆಯುಂತೆ ಮಾಡಿದರೆ, ವಿಷ್ಣು ಎನ್ನುವ ಶಿಕ್ಷಣ ನಮ್ಮನ್ನು ಪ್ರಪಂಚದಲ್ಲಿ ಹೇಗೆ ಬಾಳಬೇಕು ಎನ್ನುವುದನ್ನು ಕಲಿಸುತ್ತದೆ. ಮಹೇಶ್ವರನೆಂಬ ಮೌಲ್ಯಯುತ ಶಿಕ್ಷಣವನ್ನು ಅನುಸರಿಸದಿದ್ದರೆ ಅಂತ್ಯವಾಗುತ್ತೇವೆ. ಇದನ್ನು ಮನಗಂಡು ದೇವತಸ್ವರೂಪಿ ಸ್ಥಾನದಲ್ಲಿ ಗುರುವನ್ನು ಗೌರವಿಸಬೇಕು ಎಂದರು.

2019-20 ಸಾಲಿನ ರಾಷ್ಟ್ರ ಪ್ರಶಸ್ತಿ ಭಾಜನರಾದ ತಾಲೂಕಿನ ಅಲ್ಬಾಡಿ-ಆರ್ಡಿ ಸರಕಾರಿ ಪ್ರೌಢಶಾಲೆ ನಿಯೋಜಿತ ಶಿಕ್ಷಕ ಸುರೇಶ್ ಮರಕಾಲ ಅವರನ್ನು ಎಸಿ ಕೆ. ರಾಜು ಅವರು ಸನ್ಮಾನಿಸಿದರು. ಇದೇ ಸಂದರ್ಭ ಸುದೀರ್ಘ ಸೇವೆ ಸಲ್ಲಿಸಿ ಈ ಶೈಕ್ಷಣಿಕ ವರ್ಷದಲ್ಲಿ ಸೇವಾ ನಿವೃತ್ತಿ ಹೊಂದಿದ ಶಿಕ್ಷಕರು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದವರಿಗೆ ಸನ್ಮಾನಿಸಲಾಯಿತು. ಈ ಶೈಕ್ಷಣಿಕ ವರ್ಷದಲ್ಲಿ ಅಕಾಲಿಕ ಮರಣ ಹೊಂದಿದ ಶಿಕ್ಷಕರಿಗೆ ಮೌನಪ್ರಾರ್ಥನೆ ಮೂಲಕ ನುಡಿನಮನ ಸಲ್ಲಿಸಲಾಯಿತು.

ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಪದ್ಮನಾಭ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸದಾನಂದ ಬೈಂದೂರು ಸ್ವಾಗತಿಸಿದರು. ನಿವೃತ್ತ ಪ್ರಾಧ್ಯಾಪಕ ಹಯವದನ್ ಉಪಾಧ್ಯ ಶಿಕ್ಷಕ ದಿನಾಚರಣೆಯ ಪ್ರಧಾನ ಉಪನ್ಯಾಸ ನೀಡಿದರು. ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಚೆನ್ನಯ್ಯ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕುಂದಾಪುರ ತಾಲೂಕು ಅಧ್ಯಕ್ಷ ಗಣೇಶ್ ಕುಮಾರ್ ಶೆಟ್ಟಿ ಇದ್ದರು.

ಶಿಕ್ಷಣ ಸಂಯೋಜಕಿ ದೇವಕುಮಾರಿ ಮತ್ತು ಬಳಗ ಪ್ರಾರ್ಥಿಸಿ, ರೈತಗೀತೆ ಹಾಡಿದರು. ಶಿಕ್ಷಕರಾದ ಶಶಿಧರ್ ಶೆಟ್ಟಿ, ರಾಘವೇಂದ್ರ ಎಚ್. ಕಾರ್ಯಕ್ರಮ ನಿರೂಪಿಸಿದರು. ಕುಂದಾಪುರ ವಲಯ ಶಿಕ್ಷಣ ಸಂಯೋಜಕ ಸಂತೋಷ್ ಪೂಜಾರಿ ವಂದಿಸಿದರು.

‘ನಾನು ಸೈನ್ಯದಲ್ಲಿ ಕರ್ತವ್ಯ ಮಾಡುವಾಗ ಅಲ್ಲಿ ವೆಪನ್ ಟ್ರೈನಿಂಗ್ (ಶಸ್ತ್ರಾಸ್ತ್ರ ತರಬೇತಿ) ಕೇಂದ್ರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಬಳಿಕ ಮೂರು ವರ್ಷ ತರಬೇತು ಶಿಕ್ಷಕನಾಗಿ ಕೆಲಸ ಮಾಡಿದ್ದು ಈಗಲೂ ಸೈನ್ಯದಲ್ಲಿರುವ ಆಗಿನ ನನ್ನ ವಿದ್ಯಾರ್ಥಿಗಳು ಕರೆ ಮಾಡುವುದು ಗುರು ಶಿಷ್ಯರ ನಡುವಿನ ಅವಿನಾಭಾವ ಸಂಭಂದವಾಗಿದೆ. ಬಾಲ್ಯದಲ್ಲಿನ ಗುರುಗಳ ಮಾರ್ಗದರ್ಶನದಲ್ಲಿ ನಾನು ಈ ಮಟ್ಟಕ್ಕೆ ಬಂದಿರುವೆ. ಆಡಳಿತಾತ್ಮಕವಾಗಿ ಉಡುಪಿ ಹಿಂದಿನ ಡಿಸಿ ಜಿ.ಜಗದೀಶ್, ಅಪರ ಜಿಲ್ಲಾಧಿಕಾರಿ ಹಾಗೂ ಹಿಂದಿನ ಮೈಸೂರು ಅಪರ ಜಿಲ್ಲಾಧಿಕಾರಿ ನನ್ನ ಗುರುಗಳು.
– ಕೆ. ರಾಜು (ಕುಂದಾಪುರ ಸಹಾಯಕ ಕಮಿಷನರ್)

Comments are closed.