ಕರ್ನಾಟಕ

ಜನರಿಗೆ ಕೊಟ್ಟ ಮಾತಿನಂತೆ ಮಂಡ್ಯದಲ್ಲೇ ಮನೆ ಮಾಡಲು ಮುಂದಾದ ಸಂಸದೆ ಸುಮಲತಾ

Pinterest LinkedIn Tumblr

ಮಂಡ್ಯ: ಮಂಡ್ಯದ ಜನರಿಗೆ ನೀಡಿದ್ದ ಮಾತು ಉಳಿಸಿಕೊಂಡಿದ್ದಾರೆ ಸಂಸದೆ ಸುಮಲತಾ ಅಂಬರೀಶ್. ಹೌದು…ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಷ್ ತಾನು ಗೆದ್ದರೆ ಮಂಡ್ಯದಲ್ಲಿ ಮನೆ ನಮಾಡಿ ಅಲ್ಲಿಯೇ ವಾಸವಿರುವುದಾಗಿಯೂ, ಜನರ ಕಷ್ಟ-ಸುಖಗಳಿಗೆ ಹತ್ತಿರದಿಂದ ಸ್ಪಂದಿಸುವುದಾಗಿ ಮತದಾರರಿಗೆ ಭರವಸೆ ನೀಡಿದ್ದರು.

ಅದರಂತೆ ಇಂದು ಸೆಪ್ಟೆಂಬರ್ 1 ಬುಧವಾರ ಮಂಡ್ಯ ಜಿಲ್ಲೆಯ ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕದ ಹನಕೆರೆ ಗ್ರಾಮದ 28 ಗುಂಟೆ ತಮ್ಮ ಜಮೀನಿನಲ್ಲಿ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಪುತ್ರ ಅಭಿಷೇಕ್ ಗೌಡ, ಆಪ್ತರು, ಹಿತೈಷಿಗಳು ಉಪಸ್ಥಿತರಿದ್ದರು. ಇಂದು ಬೆಳಗ್ಗೆ ನಡೆದ ಧಾರ್ಮಿಕ ಗುದ್ದಲಿ ಪೂಜಾ ಕಾರ್ಯಕ್ರಮದಲ್ಲಿ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ತಮ್ಮ ಮಗನ ಜೊತೆ ಸುಮಲತಾ ನೆರವೇರಿಸಿದರು.

ಗುದ್ದಲಿಪೂಜೆ ನೆರವೇರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಜನತೆಗೆ ವಾಗ್ದಾನ ನೀಡಿದ್ದೆ. ಅವುಗಳಲ್ಲಿ ಒಂದೊಂದನ್ನೇ ನಿಭಾಯಿಸಿಕೊಂಡು ಬರುತ್ತಿದ್ದೇನೆ. ಮನೆ ನಿರ್ಮಾಣ ಕೂಡ ಅದರಲ್ಲೊಂದಾಗಿತ್ತು. ಕಳೆದೆರಡು ವರ್ಷಗಳಿಂದ ಮಂಡ್ಯದಲ್ಲಿ ಮನೆ ನಿರ್ಮಿಸಲು ಜಾಗ ಹುಡುಕಾಡುತ್ತಿದ್ದೆ. ಮಂಡ್ಯ-ಮದ್ದೂರು ಹೆದ್ದಾರಿಯಲ್ಲಿ ಉತ್ತಮವಾದ ಜಾಗ ಸಿಕ್ಕಿದೆ. ಇಲ್ಲಿ ಮನೆ ನಿರ್ಮಿಸಿ ಜನತೆಗೆ ಹತ್ತಿರವಾಗಬೇಕೆಂದು ನನ್ನ ಉದ್ದೇಶ ಎಂದರು.

ಅಂಬರೀಷ್ ಅವರು ನಿಧನರಾದಾಗ ಮಂಡ್ಯಕ್ಕೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಬಂದು ಇಲ್ಲಿನ ತಿಲಕ ಹಚ್ಚಿ ಕಳುಹಿಸಿಕೊಟ್ಟಿದ್ದೆವು. ಅದೇ ಮಂಡ್ಯದ ಮಣ್ಣಿನಲ್ಲಿ ಮನೆ ನಿರ್ಮಿಸಬೇಕೆಂಬುದು ನನ್ನ ಮತ್ತು ಮಗ ಅಭಿಷೇಕ್ ಬಯಕೆಯಾಗಿತ್ತು. ಅದರಂತೆ ಮನೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಎಲ್ಲದರಲ್ಲೂ ರಾಜಕೀಯ ಲೇಪ ಹಚ್ಚಿದರೆ ನಾನು ಏನೂ ಮಾಡಲು ಆಗುವುದಿಲ್ಲ, ರಾಜಕೀಯ ದೃಷ್ಟಿಕೋನದಿಂದ ನೋಡುವವರು ನೋಡುತ್ತಾರೆ, ತಪ್ಪೇನಿಲ್ಲ ಎಂದರು.

Comments are closed.