ಕರಾವಳಿ

ಪಾಸಿಟಿವಿಟಿ ರೇಟ್ ಆಧಾರದಲ್ಲಿ ಉಡುಪಿ ಜಿಲ್ಲೆಯಲ್ಲೂ ವೀಕೆಂಡ್ ಕರ್ಫ್ಯೂ; ಜನರಿಗೆ ಸಮಸ್ಯೆಯಾಗದಂತೆ ಕ್ರಮ- ಸಚಿವ ಕೋಟ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಪಾಸಿಟಿವಿಟಿ ರೇಟ್ ಆಧಾರದಲ್ಲಿ ಉಡುಪಿ ಜಿಲ್ಲೆಯನ್ನು ಕೂಡ ವಾರಾಂತ್ಯದ ಕರ್ಫ್ಯೂಗೆ ಸೇರಿಸಲಾಗಿದೆ. ಉನ್ನತ ಮಟ್ಟದಲ್ಲಿ ಚರ್ಚೆ ಮಾಡಿ‌ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಜನರಿಗೆ ಸಮಸ್ಯೆಯಾಗುತ್ತಿರುವುದು ಸತ್ಯ. ಪಾಸಿಟಿವಿಟಿ ರೇಟ್ ಜಾಸ್ಥಿಯಾಗುತ್ತಿರುವ ಬಗ್ಗೆ ಜಾಗೃತೆ ವಹಿಸಬೇಕಿರುವ ಅನಿವಾರ್ಯತೆ‌ ಕೂಡ ಇದ್ದು ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಮಂತ್ರಿಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಬುಧವಾರದಂದು ಕುಂದಾಪುರ ಪ್ರವಾಸಿ ಮಂದಿರದಲ್ಲಿ ಸಮಾಜ ಕಲ್ಯಾಣ ಇಲಾಖಾಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ದಲಿತ ಕುಂದುಕೊರತೆಗಳ ಸಭೆಯು ಕಳೆದ ಕೆಲ ಸಮಯಗಳಿಂದ ನಡೆದಿಲ್ಲ. ನಾನು ಮಂತ್ರಿಯಾದ ಬಳಿಕ ಈ ಬಗ್ಗೆ ನಿರ್ಧರಿಸಿ ಎರಡು ದಿನಗಳ ಹಿಂದೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಎಲ್ಲಾ ಇಲಾಖಾಧಿಕಾರಿಗಳು ಮತ್ತು ಪರಿಶಿಷ್ಟ ಜಾತಿ, ಪಂಗಡದ ಶಾಸಕರ ಉಪಸ್ಥಿತಿಯಲ್ಲಿ‌ ಎರಡೂವರೆ ಗಂಟೆಗೂ ಅಧಿಕ ಕಾಲ ಸುಧೀರ್ಘ ಚರ್ಚೆ ನಡೆಸಿ ಎಲ್ಲರ ಸಮಸ್ಯೆಗಳ ಬಗ್ಗೆ ಅರ್ಥೈಸುವ ಕಾರ್ಯವನ್ನು ಸಿಎಂ‌ ಮಾಡಿದ್ದಾರೆ. ಜಿಲ್ಲಾ ಮಟ್ಟದಲ್ಲಿ ನಡೆಯುವ ದಲಿತರ ಕುಂದು ಕೊರತೆ ಸಭೆಯನ್ನು ಶೀಘ್ರ ಮಾಡಲು ಸಿಎಂ ಸೂಚಿಸಿದ್ದಾರೆ. ಮೊದಲು ಡಿಸಿ ಹಾಗೂ ಅಸಿಸ್ಟೆಂಟ್ ಕಮಿಷನರ್ ಈ ಸಭೆಯಲ್ಲಿ ಭಾಗವಹಿಸುತ್ತಿದ್ದು 6 ತಿಂಗಳಿಗೊಮ್ಮೆ ನಡೆಯುವ ಸಭೆಯಲ್ಲಿ‌ ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸಲು ಸೂಚಿಸಲಾಗಿದೆ ಎಂದರು.

ಮಂಗಳವಾರ ಗ್ರಾಮ ಪಂಚಾಯತ್ ಭೇಟಿ ವೇಳೆ ಕೆ‌ಲ ಸಮಸ್ಯೆಗಳು ಗಮನಕ್ಕೆ ಬಂದ ಹಿನ್ನೆಲೆ ಇಂದು ಅಧಿಕಾರಿಗಳ‌ ಸಭೆ ಕರೆಯಲಾಗಿದೆ. ಸಿದ್ದಾಪುರದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಂಬಂಧಪಟ್ಟ 21 ಕೋಟಿ ಯೋಜನೆ ಸಿದ್ದಗೊಂಡಿತ್ತು. ಆದರೆ ನಿವೇಶನದ ಕೊರತೆಯಿಂದ ಇದು‌ ನೆನೆಗುದಿಗೆ ಬಿದ್ದ ಹಿನ್ನೆಲೆ ಇಂದು ಎಸಿ, ಡಿ.ಎಫ್.ಒ, ತಹಶಿಲ್ದಾರ್ ಹಾಗೂ ಸಂಬಂದಪಟ್ಟ ಅಧಿಕಾರಿಗಳ ಸಭೆ ನಡೆಸಿದ್ದು ಮುಂದಿನ 15 ದಿನಗಳೊಳಗೆ ಅರಣ್ಯ ಇಲಾಖೆಯ ಸಮಸ್ಯೆ ಸರಿಪಡಿಸಿಕೊಂಡು ಕಟ್ಟಡ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಡಮೊಗೆಯಲ್ಲಿ 170 ಕುಟುಂಬಕ್ಕೆ ಹಕ್ಕು‌ಪತ್ರ ಸಿಗದಿದ್ದು ಅದಕ್ಕೆ ಪೂರಕ ದಾಖಲೆಗಳನ್ನು ಸಿದ್ಧಪಡಿಸಿ 1 ತಿಂಗಳಿನೊಳಗೆ ಸರ್ವೇ ನಡೆಸಲು ಅರಣ್ಯ, ಕಂದಾಯ ಹಾಗೂ ಸರ್ವೇ ಇಲಾಖೆಗೆ ಸೂಚಿಸಲಾಗಿದ್ದು ಈ ಸಮಸ್ಯೆ ಪರಿಹಾರವಾದಲ್ಲಿ‌ ಇಲಾಖೆಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.

 

Comments are closed.