ಕರಾವಳಿ

ನಿಯಮಗಳನ್ನು ಗಾಳಿಗೆ ತೂರಿ ವಾರ್ಡ್ ಸಮಿತಿ ರಚನೆ ಆರೋಪ : ಪಾರಾದರ್ಶಕ ಪಟ್ಟಿ ಬಿಡುಗಡೆಗೆ ಬ್ಲಾಕ್ ಕಾಂಗ್ರೆಸ್ ಆಗ್ರಹ

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇತ್ತೀಚಿಗೆ ನೂತನವಾಗಿ ರಚಿಸಲಾದ ವಾರ್ಡ್ ಸಮಿತಿಯ ತಾತ್ಕಾಲಿಕ ಪಟ್ಟಿ ಪಾರಾದರ್ಶಕವಾಗಿಲ್ಲ ಎಂದು ಕಾಂಗ್ರೆಸ್ ಆಕ್ಷೇಪಣೆ ವ್ಯಕ್ತಪಡಿಸಿದೆ.

ವಾರ್ಡ್ ಸಮಿತಿಯ ತಾತ್ಕಾಲಿಕ ಪಟ್ಟಿಯನ್ನು ಈ ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ, ದಕ್ಷಿಣ ಬ್ಲಾಕ್ ಸಮಿತಿ ಹಾಗೂ ಉತ್ತರ ಬ್ಲಾಕ್ ಸಮಿತಿ ವತಿಯಿಂದ ನಗರ ಬ್ಲಾಕ್ ಸಮಿತಿ ಅಧ್ಯಕ್ಷ, ಮಾಜಿ ಕಾರ್ಪೊರೇಟರ್ ಪ್ರಕಾಶ್ ಬಿ. ಸಾಲ್ಯಾನ್ ಅವರ ನೇತ್ರತ್ವದಲ್ಲಿ ಮಂಗಳೂರು ಮಹಾನಗರಪಾಲಿಕೆ ಅಯುಕ್ತರಿಗೆ ಮನವಿ ಸಲ್ಲಿಸಿದೆ.

ಕೆಲವೊಂದು ನಿಯಮಗಳನ್ನು ಪಾಲಿಸದೆ ತಾತ್ಕಾಲಿಕ ಪಟ್ಟಿ ರಚಿಸಲಾಗಿದೆ. ವಾರ್ಡ್ ಸಮಿತಿ ರಚನೆಗೆ ಸಂಬಂಧಿಸಿದ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಕೆಲವೊಂದು ಪಾಲಿಕೆ ಸದಸ್ಯರ ಅನುಕೂಲಕ್ಕೆ ತಕ್ಕಂತೆ ಅವರ ಬೆಂಬಲಿಗರ ಹೆಸರನ್ನು ಸೇರಿಸಲಾಗಿದೆ.

ಮಾತ್ರವಲ್ಲದೇ ತಾತ್ಕಾಲಿಕ ಪಟ್ಟಿಯಲ್ಲಿ ಕೇವಲ ಹೆಸರು ಮಾತ್ರವಿದೆ. ಒಂದೊಂದು ಬ್ಲಾಕ್ ನಲ್ಲಿ ಇಂತಹ ಹತ್ತಾರು ಜನ ಒಂದೇ ಹೆಸರಿನವರಾಗಿರುತ್ತಾರೆ. ಹೀಗಿರುವಾಗ ಪಟ್ಟಿಯಲ್ಲಿ ಹೆಸರಿಸಲಾಗಿರುವವರ ವಿಳಾಸ ನೀಡದೇ ಪಟ್ಟಿ ಪ್ರಕಟಿಸಿರುವುದು ಜನರನ್ನು ಹಾದಿ ತಪ್ಪಿಸುವ ಉದ್ದೇಶದಿಂದಲೇ ಎಂಬ ಅನುಮಾನ ಮೂಡುತ್ತದೆ.

ಅದಲ್ಲದೇ ತಿರಸ್ಕರಿಸ್ಕೃತ ಅರ್ಜಿದಾರರ ವಿವರವನ್ನು ಇನ್ನು ಕೂಡ ಪ್ರಕಟ ಮಾಡದಿರುವುದು ಮತ್ತಷ್ಟು ಸಂಶಯಕ್ಕೆ ಎಡೆಮಾಡಿದೆ. ಆದ್ದರಿಂದ, ಈ ಸಮಗ್ರ ತಾತ್ಕಾಲಿಕ ಪಟ್ಟಿಗೆ ನಮ್ಮ ಆಕ್ಷೇಪವಿದೆ.
ಎಲ್ಲಾ 1000ಕ್ಕೂ ಮಿಕ್ಕಿ ಬಂದಿರುವ ಅರ್ಜಿದಾರರ ವಿವರ ಪ್ರಕಟಿಸಿ, ಆಕ್ಷೇಪಣೆ ಕೋರಿ, ನಂತರ ಪಟ್ಟಿ ಬಿಡುಗಡೆ ಮಾಡುವುದಾದರೆ ಮಾತ್ರ ನಮ್ಮ ಬೆಂಬಲವಿದೆ. ಇಲ್ಲವಾದರೆ ಇದರ ವಿರುದ್ಧ ಕಾನೂನುಬದ್ಧ ಹೋರಾಟ ಅನಿವಾರ್ಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮನವಿ ನೀಡಿದ ನಿಯೋಗದಲ್ಲಿ ದಕ್ಷಿಣ ಬ್ಲಾಕ್ ಅಧ್ಯಕ್ಷ ಕೆ. ಅಬ್ದುಲ್ ಸಲೀಂ, ಮಾಜಿ ಉಪಮೇಯರ್ ಮೊಹಮ್ಮದ್ ಕುಂಜತ್ ಬೈಲ್, ಕಾಂಗ್ರೆಸ್‌ನ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರುಗಳಾದ ರಾಕೇಶ್ ದೇವಾಡಿಗ, ಸುನೀಲ್ ಪೂಜಾರಿ, ಜಯರಾಜ್ ಕೋಟ್ಯಾನ್, ಭುವನ್ ಬಿ. ಕರ್ಕೇರಾ, ಮಿಥುನ್ ಉರ್ವಾ, ಶಾಂತಲ ಗಟ್ಟಿ, ಚೇತನ್ ಕುಮಾರ್, ಯೋಗೀಶ್ ನಾಯಕ್, ಸಮರ್ಥ ಭಟ್, ಮಲ್ಲಿಕಾರ್ಜುನ ಕೋಡಿಕಲ್ ಮುಂತಾದವರು ಇದ್ದರು.

Comments are closed.