(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ಆನೆಗುಡ್ಡೆ ಶ್ರೀವಿನಾಯಕ ದೇವಳಕ್ಕೆ ಪತ್ನಿ ಹಾಗೂ ಪುತ್ರಿಯೊಂದಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ದೇವಳದ ವತಿಯಿಂದ ಅವರನ್ನು ಈ ಸಂದರ್ಭ ಗೌರವಿಸಲಾಯಿತು.

ಬಳಿಕ ಕುಂದಾಪುರ ಬಿಜೆಪಿ ಕಚೇರಿಗೆ ಆಗಮಿಸಿದ ಸಚಿವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಈ ವೇಳೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಾಮಾನ್ಯನಾಗಿದ್ದ ನನಗೆ ಸಮಾಜ ಕಲ್ಯಾಣದಂತಾ ದೊಡ್ಡ ಜವಾಬ್ದಾರಿ ನೀಡಿರುವುದು ಬಿಜೆಪಿಯಲ್ಲಿ ಮಾತ್ರ ಕಾಣಲು ಸಾಧ್ಯ. ನನ್ನ ಮೇಲೆ ಪಕ್ಷದ ನಾಯಕರು ಇಟ್ಟಿರುವ ಭರವಸೆಗೆ ಹುಸಿಯಾಗದ ರೀತಿಯಲ್ಲಿ ಕರ್ತವ್ಯ ನಿಭಾಯಿಸುವ ಮೂಲಕ ಸಮಾಜಕ ನ್ಯಾಯ ಕೊಡಿಸುವ ಎಲ್ಲಾ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಹಿಂದೂ ಕಾರ್ಯಕರ್ತರ ಮೇಲಿನ ಕೇಸ್ ವಾಪಾಸ್ಸಿಗೆ ಮನವಿ…
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಕೆಲವು ಸುಳ್ಳು ಕೇಸ್ ಗಳನ್ನು ಹಿಂದಿನ ಸರಕಾರದ ಅವಧಿಯಲ್ಲಿ ದಾಖಲಿಸಲಾಗಿತ್ತು. ಆ ಸುಳ್ಳು ಕೇಸುಗಳನ್ನು ವಾಪಾಸ್ ಪಡೆಯುವಂತೆ ಹಿಂದೂಸಂಘಟಮೆ ಕಾರ್ಯಕರ್ತರು ನೀಡಿದ ಮನವಿ ಆಧಾರದಲ್ಲಿ ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರಿಗೆ ಮನವಿ ಮಾಡಿದ್ದೇನೆ. ಇದಕ್ಕೆ ಸ್ಪಂದಿಸಿದ ಅವರು ರಾಜ್ಯದ ಎಲ್ಲಾ ಕಡತಗಳನ್ನು ತರಿಸಿಕೊಂಡು ಕೂಲಂಕುಷವಾಗಿ ಪರಿಶೀಲಿಸಿ ಸುಳ್ಳುಪ್ರಕರಣಗಳನ್ನು ವಾಪಾಸ್ ಪಡೆಯುವ ವಿಶ್ವಾಸದ ಮಾತುಗಳನ್ನು ಗೃಹ ಸಚಿವರು ತಿಳಿಸಿದ್ದಾರೆ ಎಂದರು.

(ಆನೆಗುಡ್ಡೆ ದೇವಸ್ಥಾನ ಭೇಟಿ)
ಕುಂದಾಪುರ ಮಂಡಲ ಬಿಜೆಪಿ ಅಧ್ಯಕ್ಷ ಶಂಕರ ಅಂಕದಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಮಂಡಳಿ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಉಪಾಧ್ಯಕ್ಷ ಸಂದೀಪ ಖಾರ್ವಿ, ನಗರ ಪ್ರಾಧಿಕಾರ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿಶೋರ್ ಕುಮಾರ್ ಬಿ, ದ.ಕ ಬಿಜೆಪಿ ಸಹಾಯಕ ಪ್ರಭಾರಿ ರಾಜೇಶ್ ಕಾವೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಮೀನುಗಾರಿಕಾ ಪ್ರಕೋಷ್ಠ ಜಿಲ್ಲಾಧ್ಯಕ್ಷ ಸದಾನಂದ ಬಳ್ಕೂರು, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ ಕಳಂಜೆ, ಒಬಿಸಿ ಪ್ರಧಾನ ಕಾರ್ಯದರ್ಶಿ ವಿಠಲ ಪೂಜಾರಿ ಇದ್ದರು.
ಮಹಿಳಾಮೋರ್ಚಾ ಹಾಗೂ ವಿವಿಧ ಜನಪ್ರತಿನಿಧಿಗಳು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅಭಿನಂದಿಸಿದರು.
ಬಿಜೆಪಿ ಮಂಡಲಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ ಸ್ವಾಗತಿಸಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸರೇಶ್ ಶೆಟ್ಟಿ ಗೋಪಾಡಿ ನಿರೂಪಿಸಿ, ವಂದಿಸಿದರು.
Comments are closed.