ಕರಾವಳಿ

ಮಸ್ಕತ್ ವಾಹನ ಅಪಘಾತ – ಬೃಹತ್ ಪರಿಹಾರ ಮೊತ್ತ ಮಂಜೂರು : ಸೋಶಿಯಲ್ ಫೋರಮ್ ಒಮಾನ್ ಕಾನೂನು ಹೋರಾಟಕ್ಕೆ ಸಂದ ಜಯ

Pinterest LinkedIn Tumblr

ಮಸ್ಕತ್ : ಒಮಾನ್ ನ ಮಬೇಲ ಎಂಬಲ್ಲಿ ಎರಡು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಮೃತಪಟ್ಟ ನೂರ್ ಮುಹಮ್ಮದ್ ಕುಟುಂಬಕ್ಕೆ ಪರಿಹಾರ ಮೊತ್ತ ದೊರಕಿಸಿ ಕೊಡುವಲ್ಲಿ ಸೋಶಿಯಲ್ ಫೋರಮ್ ಒಮಾನ್ ಯಶಸ್ವಿಯಾಗಿದೆ.

2019ರ ಮೇ 11ರಂದು ವಾಹನ ಅಪಘಾತ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸುನ್ನತ್ ಕೆರೆ ನಿವಾಸಿ ನೂರ್ ಮುಹಮ್ಮದ್ (25) ಮತ್ತು ಚಾಲಕ ಒಮಾನ್ ಪ್ರಜೆ ಸ್ಥಳದಲ್ಲೇ ಮೃತಪಟ್ಟಿದ್ದರು. ನೂರ್ ಮುಹಮ್ಮದ್ ರ ಮೃತದೇಹವನ್ನು ಕೇವಲ ಎರಡು ದಿನಗಳಲ್ಲಿ ಸೋಶಿಯಲ್ ಫೋರಮ್ ಒಮಾನ್ ನೆರವಿನಿಂದ ಊರಿಗೆ ಕಳುಹಿಸಿಕೊಡಲಾಗಿತ್ತು.

ತೀರಾ ಬಡಕುಟುಂಬದ ಯುವಕ ನೂರ್ ಮುಹಮ್ಮದ್ ಅಪಾರ ಕನಸಿನೊಂದಿಗೆ ಮೊತ್ತಮೊದಲ ಬಾರಿಗೆ ಒಮಾನ್ ಗೆ ಬಂದಿದ್ದು ಮುಸನ್ನ ಎಂಬಲ್ಲಿನ ‘ಮಸ್ಕತ್ ವಾಟರ್’ ಬಾಟಲಿ ನೀರು ಕಂಪೆನಿಯಲ್ಲಿ ಸೇಲ್ಸ್ ಮನ್ ಆಗಿ ಉದ್ಯೋಗ ಸೇರಿಕೊಂಡಿದ್ದರು.

2019ರ ಮೇ 11ರಂದು ಕಂಪೆನಿಯ ವಾಹನವು ಭೀಕರ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಚಾಲಕ ಮತ್ತು ನೂರ್ ಮುಹಮ್ಮದ್ ಮೃತಪಟ್ಟಿದ್ದರು.

ಈ ಬಗ್ಗೆ ಕಾರ್ಯಪ್ರವೃತ್ತರಾದ ಸೋಶಿಯಲ್ ಫೋರಮ್ ಒಮಾನ್ ತಂಡವು ಅಪಘಾತದ ಪರಿಹಾರ ಮೊತ್ತಕ್ಕಾಗಿ ಸ್ಥಳೀಯ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ನಿರಂತರ 2 ವರ್ಷಗಳ ಕಾನೂನು ಹೋರಾಟದ ಫಲವಾಗಿ 25 ಲಕ್ಷ ರೂಪಾಯಿ ಪರಿಹಾರ ಮೊತ್ತವು ಬಿಡುಗಡೆಯಾಗಿರುತ್ತದೆ.

ಮೃತ ನೂರ್ ಮುಹಮ್ಮದ್ ರ ತಾಯಿ ಕೂಡ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದರು. ಇದೀಗ ನೂರ್ ಮುಹಮ್ಮದ್ ರ ಕುಟುಂಬದಲ್ಲಿ ತಂದೆ, ಅಣ್ಣ, ಅಕ್ಕ ಇದ್ದಾರೆ. ಬಿಡುಗಡೆಗೊಂಡ ಪರಿಹಾರ ಮೊತ್ತವನ್ನು ಸೋಶಿಯಲ್ ಫೋರಮ್ ಒಮಾನ್ ಮೂಲಕ ಸಂತ್ರಸ್ತ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ಕಾನೂನು ಹೋರಾಟದಲ್ಲಿ ಮುಹಿಯುದ್ದೀನ್ ಗುರುವಾಯನಕೆರೆ, ಅಬ್ದುಲ್ ಹಮೀದ್ ಪಾಣೆಮಂಗಳೂರು, ಇರ್ಫಾನ್ ಉಜಿರೆ, ಆಸಿಫ್ ಬೈಲೂರು, ಊರಿನ ಸ್ಥಳೀಯ ಗ್ರಾ.ಪಂ.ಸದಸ್ಯ ಮುಸ್ತಫಾ ಜಿ. ಕೆ., ರಿಹಾನ್ ಸಾಹೇಬ್ ಮುಂತಾದವರು ಸಹಕರಿಸಿದ್ದರು.

Report_Abdul Mubarak

Comments are closed.