ಕರಾವಳಿ

ಫೈನಾನ್ಸ್ ಒಳಗೆ ಕತ್ತು ಸೀಳಿ ಕೊಲೆಗೈದು ಆತನ ಕಾರಲ್ಲೇ ಎಸ್ಕೇಪ್ ಆದ ಬಿಸಿನೆಸ್ ಪಾರ್ಟನರ್..?: ತನಿಖೆ ಚುರುಕು

Pinterest LinkedIn Tumblr

ಕುಂದಾಪುರ: ತಾಲೂಕಿನ ಕೋಟೇಶ್ವರ ಸಮೀಪದ ಕಾಳಾವರ ಎಂಬಲ್ಲಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಯಡಾಡಿ ಮತ್ಯಾಡಿ ಕೂಡಲ್ ನಿವಾಸಿ ಅಜೇಂದ್ರ ಶೆಟ್ಟಿ (34) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು ಅಜೇಂದ್ರ ಅವರ ಫೈನಾನ್ಸ್ ವ್ಯವಹಾರದ ಪಾಲುದಾರ ಅನುಪ್ ಶೆಟ್ಟಿ ಕೊಲೆ ಆರೋಪಿ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

(ಕೊಲೆಯಾದ ಅಜೇಂದ್ರ ಶೆಟ್ಟಿ)

ಅಸೋಡು ಕಾಳಾವರ ಸಮೀಪದ ರಾ.ಹೆದ್ದಾರಿ ಸಮೀಪದಲ್ಲೇ ಇರುವ ಕಾಂಪ್ಲೆಕ್ಸಿನಲ್ಲಿ ಡ್ರೀಮ್ ಫೈನಾನ್ಸ್ ಎನ್ನುವ ಆರ್ಥಿಕ ವ್ಯವಹಾರದ ಸಂಸ್ಥೆಯನ್ನು ಅಜೇಂದ್ರ ಶೆಟ್ಟಿ ಹಾಗೂ ಮೊಳಹಳ್ಳಿ ಮೂಲದ ಅನುಪ್ ಶೆಟ್ಟಿ ಪಾಲುದಾರಿಕೆಯೊಂದಿಗೆ 2017ರಿಂದ ನಡೆಸುತ್ತಿದ್ದರು.

ಕತ್ತು ಸೀಳಿ ಕೊಲೆ…
8-9 ಗಂಟೆಗೆ ಮನೆ ಸೇರುತ್ತಿದ್ದ ಅಜೇಂದ್ರ ನಿನ್ನೆ ಮಾತ್ರ ತಡರಾತ್ರಿಯಾದರೂ ಮನೆಗೆ ಬಂದಿರಲಿಲ್ಲ.‌ ಹೆದರಿದ ಮನೆಯವರು ಸ್ನೇಹಿತರು ಹುಡುಕಾಟ ‌ನಡೆಸಿದ್ದಾರೆ. ಅಜೇಂದ್ರ ಸಹೋದರ ಮಹೇಂದ್ರ ಶೆಟ್ಟಿ, ಸ್ನೇಹಿತರಾದ ರಕ್ಷಿತ್, ಜಯಕರ ಹಾಗೂ ಪ್ರಥ್ವೀಷ್ ಹುಡುಕಾಡುತ್ತಾ ಕಾಳಾವರದ ಫೈನಾನ್ಸ್’ಗೆ ಬಂದಾಗ ಎದುರಿನ ಶಟರ್ ಮುಚ್ಚಿದ್ದು ಬೀಗ ಹಾಕಿರಲಿಲ್ಲ. ಅನುಮಾನಗೊಂಡು ಶಟರ್ ತೆರೆದು ಒಳಪ್ರವೇಶಿಸಿದಾಗ ಅಜೇಂದ್ರ ಶೆಟ್ಟಿ ರಕ್ತದ ಮಡುವಿನಲ್ಲಿ ಕುಳಿತ ಭಂಗಿಯಲ್ಲಿ ಕೊಲೆಯಾದ‌ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರೆಲ್ಲರೂ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಅಜೇಂದ್ರ ಅವರ ಕೆನ್ನೆ, ಕತ್ತು, ಕಾಲಿನ‌ ಭಾಗದಲ್ಲಿ ಇರಿದ ಗಾಯಗಳಾಗಿದೆ. ಹರಿತವಾದ ಆಯುಧದಿಂದ ಕತ್ತು ಸೀಳಲಾಗಿದೆ.

ಕೊಲೆಗಾರ ಬ್ಯುಸಿನೆಸ್‌ ಪಾರ್ಟನರ್…?
ಅಜೇಂದ್ರ ಶೆಟ್ಟಿ ಹಾಗೂ ಅನುಪ್ ಶೆಟ್ಟಿ ಜು.30 ಶುಕ್ರವಾರ ರಾತ್ರಿ ತನಕ ಕಚೇರಿಯಲ್ಲಿ ಒಟ್ಟಿಗೆ ಇದ್ದರು ಎನ್ನಲಾಗಿದೆ. ಹಣಕಾಸು ವಿಚಾರದಲ್ಲಿ‌ ಮನಸ್ತಾಪ ನಡೆದು ಅನುಪ್ ಕೊಲೆ ಮಾಡಿರಬಹುದೆಂದು‌ ಅಂದಾಜಿಸಲಾಗಿದೆ. ಕೊಲೆ ಪೂರ್ವನಿಯೋಜಿತವಾಗಿತ್ತು ಎನ್ನುವುದಕ್ಕೆ ಹರಿತವಾದ ಆಯುಧ ಬಳಸಿರುವುದು ಪುಷ್ಟಿ ನೀಡುತ್ತಿದೆ. ಹಣಕಾಸಿನ ವಿಚಾರದ ಬಗ್ಗೆ ಹೇಳಿದ್ದ ಆದರೆ ಮನಸ್ತಾಪದ ಬಗ್ಗೆ ಹೇಳಿಕೊಂಡಿರಲಿಲ್ಲ. ಈಗ ಆತನ ಪಾರ್ಟನರ್ ನನ್ನ ತಮ್ಮನನ್ನು ಕೊಲೆ ಮಾಡಿದ್ದಾ‌ನೆ. ಕೊಲೆಗೆ ಸಂಬಂಧಿಸಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಅಜೇಂದ್ರ ಸಹೋದರ ಮಾಧ್ಯಮದ ಮುಂದೆ ಕಣ್ಣೀರಿಟ್ಟರು.

ಬುಲ್ಲೆಟ್ ಬಿಟ್ಟು ಕೊಲೆಯಾದವನ ಕಾರಿನಲ್ಲಿ ಪರಾರಿ..
ಅನುಪ್ ಶೆಟ್ಟಿ ಬುಲ್ಲೆಟ್ ಬೈಕ್ ಫೈನಾನ್ಸ್ ಎದುರಗಡೆ ಇದ್ದು ಅಜೇಂದ್ರ ಶೆಟ್ಟಿ ತಿಂಗಳ ಹಿಂದಷ್ಟೆ ಖರೀದಿಸಿದ್ದ ಕಾರಿನಲ್ಲಿ ಅನುಪ್ ಎಸ್ಕೇಪ್ ಆಗಿರುವುದು ಆತನೇ‌ ಕೊಲೆಗಾರ ಎನ್ನುವ ಅನುಮಾನ ಬಲಪಡಿಸಿದೆ. ಮಾತ್ರವಲ್ಲ ಅನುಪ್ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಇದೆ. ಮೂಲಗಳ ಪ್ರಕಾರ ಉತ್ತರಕನ್ನಡ ಮಾರ್ಗವಾಗಿ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಕೊಲೆಯಾದ ಅಜೇಂದ್ರ ಅವಿವಾಹಿತರಾಗಿದ್ದು ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ಕೂಡ ಮೂಂಚೂಣಿಯಲ್ಲಿ ತೊಡಗಿಸಿಕೊಂಡಿದ್ದ ಕೆಲ ವರ್ಷಗಳ ಹಿಂದೆ ಕೋಟೇಶ್ವರದಲ್ಲಿ ಹೋಟೆಲ್ ಉದ್ಯಮ ನಡೆಸಿದ್ದರು.

ತಡರಾತ್ರಿಯೇ ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ವಿಷ್ಣುವರ್ಧನ್, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಶನಿವಾರ ಕುಂದಾಪುರ ಡಿವೈಎಸ್ಪಿ‌ ಶ್ರೀಕಾಂತ್, ಸಿಪಿಐ ಗೋಪಿಕೃಷ್ಣ, ಗ್ರಾಮಾಂತರ ಠಾಣೆಯ ಪಿಎಸ್ಐ , ಪ್ರೊಬೇಶರಿ ಪಿಎಸ್ಐಗಳು ಭೇಟಿ ನೀಡಿದ್ದಾರೆ. ಫೋರೆನ್ಸಿಕ್ ತಜ್ಞರ ತಂಡ ಕೃತ್ಯ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದೆ. ಕೊಲೆಗಾರನ ಪತ್ತೆಗೆ ಪೊಲೀಸರು ಬಲೆ‌ಬೀಸಿದ್ದಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

ಇದನ್ನೂ ಓದಿರಿ:

ಹಣಕಾಸು ವಿಚಾರಕ್ಕೆ ಕುಂದಾಪುರ ಕಾಳಾವಾರದಲ್ಲಿ ಫೈನಾನ್ಶಿಯರ್ ಬರ್ಬರ ಕೊಲೆ

Comments are closed.