ಕರಾವಳಿ

ಜನನ, ಮರಣವನ್ನು 21 ದಿನಗಳೊಳಗೆ ನೋಂದಾಯಿಸಿ, ಪ್ರಮಾಣ ಪತ್ರ ಉಚಿತವಾಗಿ ಪಡೆಯಿರಿ: ಜಿಲ್ಲಾಧಿಕಾರಿ ಡಾ. ರಾಜೇಂದ್ರ. ಕೆ.ವಿ

Pinterest LinkedIn Tumblr

ಮಂಗಳೂರು, ಜು.30: ಜಿಲ್ಲೆಯ ನಾಗರೀಕರು ತಮ್ಮ ಕುಟುಂಬದಲ್ಲಿ ಸಂಭವಿಸುವ ಜನನ ಅಥವಾ ಮರಣಗಳನ್ನು ಸ್ಥಳೀಯ ನೋಂದಣಿ ಕಚೇರಿಯಲ್ಲಿ 21 ದಿನದೊಳಗೆ ನೋಂದಾಯಿಸಿಕೊಂಡಲ್ಲೀ ಉಚಿತವಾಗಿ ಸಂಬಂಧಿಸಿದ ಪ್ರಮಾಣ ಪತ್ರ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ತಿಳಿಸಿದರು.

ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿಯ ಕೋರ್ಟ್ ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ಜನನ-ಮರಣ ನೋಂದಣಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

21 ದಿನದ ನಂತರ ನೋಂದಣಿ ಮಾಡಿಕೊಂಡಲ್ಲೀ ಶುಲ್ಕ ಭರಿಸಬೇಕಿರುತ್ತದೆ, ಆದ ಕಾರಣ 21 ದಿನದೊಳಗೆ ನೋಂದಣಿ ಮಾಡಿಕೊಂಡು ಪ್ರಮಾಣ ಪತ್ರ ಪಡೆಯಬಹುದು, ಜನನ-ಮರಣ ನೋಂದಣಿಯನ್ನು ಅಧಿನಿಯಮ 1969 ರನ್ವಯ ಕಡ್ಡಾಯ ಮಾಡಲಾಗಿದೆ. ನೋಂದಣಿ ಪದ್ಧತಿಯನ್ನು ಆಧುನಿಕ ತಂತ್ರಜ್ಞಾನಕ್ಕೆ ಅನುಕೂಲವಾಗುವಂತೆ ಮಾಡುವ ಉದ್ದೇಶದಿಂದ ನಿಯಮಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ, ನೋಂದಣಿಯ ವಿಧಿ ವಿಧಾನಗಳನ್ನು ಪುನರ್‍ರಚಿಸಿ ಪರಿಷ್ಕøತ ಕರ್ನಾಟಕ ಜನನ ಮರಣ ನೋಂದಣಿ ನಿಯಮಗಳು – 1999 ಅನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಜನನ, ಮರಣ ನೋಂದಣಿ ಮಾಡಲು ಆನ್‍ಲೈನ್ ವ್ಯವಸ್ಥೆ ಜಾರಿಗೆ ತಂದಿದ್ದು, ಗಣಕೀಕೃತ ಪ್ರಮಾಣ ಪತ್ರ ವಿತರಿಸಲಾಗುತ್ತಿದೆ. ಗ್ರಾಮ ಲೆಕ್ಕಗರು, ಸರ್ಕಾರಿ ವೈದ್ಯಾಧಿಕಾರಿಗಳು, ಆರೋಗ್ಯಾಧಿಕಾರಿಗಳು ಮತ್ತು ಆರೋಗ್ಯ ನಿರೀಕ್ಷಕರು ಮನೆಯಲ್ಲಿ ಸಂಭವಿಸುವ ಜನನ ಘಟನೆಗಳ ವರದಿ ಪಡೆದು 21 ದಿನದೊಳಗೆ ಸಂಬಂಧಿಸಿದವರಿಗೆ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಸಿ, ಪ್ರಮಾಣ ಪತ್ರಗಳನ್ನು ವಿತರಿಸುವಂತೆ ಸೂಚಿಸಿದರು.

ಪ್ರತಿಯೊಂದು ಜನನ-ಮರಣ ಮತ್ತು ನಿರ್ಜೀವ ಜನನ ಘಟನೆಗಳು ನೋಂದಣಿಯಾಗಬೇಕು ಹಾಗೂ ನೋಂದಣಿಯು ಶೇ.100 ರಷ್ಟು ತಲುಪಬೇಕೆಂಬ ಉದ್ದೇಶದಿಂದ ಆನ್‍ಲೈನ್ ನೋಂದಣಿ ಮಾಡಲಾಗುತ್ತಿದೆ, ಆದ ಕಾರಣ ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜನನ ಮತ್ತು ನೋಂದಣಿ ನಿಯಮಗಳ ಸೆಕ್ಷನ್ 18ರ ಪ್ರಕಾರ ಜಿಲ್ಲೆಯ ಎಲ್ಲಾ ನೋಂದಣಿ ಘಟಕವು ನಿಯಮಾನುಸಾರ ನೋಂದಣಿ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಹಾಗೂ ಶೇ.100 ರಷ್ಟು ಘಟನೆಗಳು ದಾಖಲಾಗಿರುವ ಬಗ್ಗೆ ಕಂದಾಯ, ನಗರಾಭಿವೃದ್ಧಿ ಮತ್ತು ಸಾಂಖ್ಯಿಕ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದವರು ನಿರ್ದೇಶನ ನೀಡಿದರು.

2021ರ ಜನವರಿಯಿಂದ 2021 ರ ಜೂನ್ ವರೆಗೆ ಜಿಲ್ಲೆಯಲ್ಲಿ ಒಟ್ಟು 12,536 ಜನನ ಹಾಗೂ 11,827 ಮರಣಗಳು ವರದಿಯಾಗಿದೆ.

ಅಪರ ಜಿಲ್ಲಾಧಿಕಾರಿ ಡಾ. ಪ್ರಜ್ಞಾ ಅಮ್ಮೆಂಬಳ, ಜಿಲ್ಲಾ ಸಂಖ್ಯಾ ಸಂಗ್ರಹಾಣಾಧಿಕಾರಿ ವಿನಾಯಕ.ಎನ್. ಮಹಾಲೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.