ಕರಾವಳಿ

ಕರಾವಳಿಯಲ್ಲಿ ಭಾರೀ ಮಳೆ : ಮಲ್ಲೂರಿನಲ್ಲಿ ಮನೆ ಮೇಲೆ ಗುಡ್ಡ ಕುಸಿದು ಹಾನಿ

Pinterest LinkedIn Tumblr

ಮಂಗಳೂರು : ದ.ಕ.ಜಿಲ್ಲೆಯಾದ್ಯಂತ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಮಳೆಯ ತೀವ್ರತೆಗೆ ನಗರದ ಹೊರವಲಯದ ಮಲ್ಲೂರಿನಲ್ಲಿ ಗುಡ್ಡ ಕುಸಿದು ಮನೆ ಮೇಲೆ ಬಿದ್ದ ಘಟನೆ ನಡೆದಿದೆ.

ಘಟನೆಯಿಂದ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡ ಮಹಿಳೆಯನ್ನು ಬೀಪಾತುಮ್ಮ (72) ಎಂದು ಗುರುತಿಸಲಾಗಿದೆ.

ಕರಾವಳಿ ಭಾಗದಲ್ಲಿ ಕಳೆದ ಕೆಲದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಭಾನುವಾರ ರಾತ್ರಿ ಕೂಡ ಬಿಡದೇ ಮಳೆ ಸುರಿದಿದೆ. ಇದರಿಂದ ಸೋಮವಾರ ಬೆಳಗ್ಗೆ 5.30ರ ವೇಳೆಗೆ ಮಲ್ಲೂರು ಜಂಕ್ಷನ್ ಸಮೀಪ ಝುಬೇರ್ ಎಂಬುವವರ ಮನೆಯ ಹಿಂಭಾಗವಿದ್ದ ಭಾರೀ ಗಾತ್ರದ ಗುಡ್ಡ ಕುಸಿದು ಬಿದ್ದಿದೆ.

ಇದರಿಂದ ಮನೆಯ ಗೋಡೆ ಕುಸಿದು ಬಿದ್ದು ಮನೆಯಲ್ಲಿದ್ದ ಮಹಿಳೆಯೊಬ್ಬರ ಕಣ್ಣಿನ ಭಾಗಕ್ಕೆ ಗಾಯವಾಗಿದೆ. ಮನೆಯಲ್ಲಿ ಒಬ್ಬರೇ ಇದ್ದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಝುಬೇರ್ ಕುಟುಂಬ ಇದೇ ಮನೆಯಲ್ಲಿ ವಾಸವಿದ್ದರು. ಭಾನುವಾರ ಅವರ ಕುಟುಂಬ ಪತ್ನಿ ಮನೆಗೆ ತೆರಳಿತ್ತು. ಇಲ್ಲದಿದ್ದರೆ ಗೋಡೆ ಕುಸಿತದಿಂದ ಭಾರೀ ಅನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯ ಮುಖಂಡರಾದ ಎನ್.ಇ. ಮಹಮ್ಮದ್ ತಿಳಿಸಿದ್ದಾರೆ.

ಇನ್ನೂ ಘಟನೆ ಬಳಿಕ ಸ್ಥಳೀಯ ಪಂಚಾಯತ್ ಅಧ್ಯಕ್ಷರಾದ ಎಂ ಇ ಇಸ್ಮಾಯಿಲ್ ಬೊಳ್ಳಂಕಿಣಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಳುಗಳಿಂದ ಘಟನೆ ವಿವರ ಪಡೆದಿದ್ದಾರೆ.

ಇನ್ನೂ ಘಟನಾ ಸ್ಥಳಕ್ಕೆ ಪಂಚಾಯತ್ ಮಾಜಿ ಅಧ್ಯಕ್ಷ ಎಂ ಕೆ ಯೂಸುಫ್, ಪಂಚಾಯತ್ ಸದಸ್ಯರಾದ ಇಲ್ಯಾಸ್ ಪಾದೆ, ಹಸನ್ ಬಾವ, ಟಿ ಅಬ್ಸಾಲಿ, ಸುಮ ಶೆಟ್ಟಿ, ದೆಮ್ಮಲೆ ಅಹ್ಮದ್ ಆಲಿಯಬ್ಬ, ಅಬ್ದುಲ್ ಲತೀಫ್ ಬೊಳ್ಳಂಕಿಣಿ ಭೇಟಿ ನೀಡಿದ್ದಾರೆ.

Comments are closed.