ಕರ್ನಾಟಕ

ಚಿತ್ರರಂಗದ ಹಿರಿಯ ನಟಿ ‘ಅಭಿನಯ ಶಾರದೆ’ ಜಯಂತಿ ವಿಧಿವಶ

Pinterest LinkedIn Tumblr

ಬೆಂಗಳೂರು: ಅಭಿನಯ ಶಾರದೆ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದ ಹಿರಿಯ ನಟಿ ಜಯಂತಿ ನಿಧನರಾಗಿದ್ದಾರೆ.

ಭಾನುವಾರ ರಾತ್ರಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.ಅವರಿಗೆ 76 ವರ್ಷ ವಯಸ್ಸಾಗಿತ್ತು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಜಯಂತಿ ಕಳೆದ ರಾತ್ರಿ ವಿಧಿವಶರಾಗಿದ್ದಾರೆ. ಅಸ್ತಮಾದಿಂದ ಬಳಲುತ್ತಿದ್ದ ನಟಿ ಜಯಂತಿ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.

ನಟಿ ಜಯಂತಿ ಜನವರಿ 6, 1945 ರಂದು ಬಳ್ಳಾರಿಯಲ್ಲಿ ಜನಸಿದರು. ಇವರ ಮೊದಲಿನ‌ ಹೆಸರು‌ ಕಮಲಾ ಕುಮಾರಿ. ಇವರ ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲೀಷ್ ಪ್ರೊಫೆಸರ್ ಆಗಿದ್ದರು. ತಾಯಿ ಸಂತಾನಲಕ್ಷ್ಮೀ. ಕಮಲಾ ಕುಮಾರಿ ಇನ್ನೂ ಚಿಕ್ಕವರಿದ್ದಾಗಲೇ ಅವರ ತಂದೆ-ತಾಯಿ ದೂರಾದರು. ಪತಿಯಿಂದ ದೂರ ಸರಿದ ಸಂತಾನಲಕ್ಷ್ಮೀ ಮಕ್ಕಳ ಜೊತೆ ಚೆನ್ನೈಗೆ ತೆರಳಿದರು. ಅಲ್ಲಿ, ಪುತ್ರಿ ಕಮಲಾ ಕುಮಾರಿಯನ್ನ ಡ್ಯಾನ್ಸ್ ಕ್ಲಾಸ್‌ಗೆ ಸೇರಿಸಿದರು. ಕಮಲಾ ಕುಮಾರಿ ಕ್ಲಾಸಿಕಲ್ ಡ್ಯಾನ್ಸರ್ ಆಗಬೇಕು ಅನ್ನೋದು ತಾಯಿಯ ಆಸೆ ಆಗಿತ್ತು.

ಮೊದಲು ತೆಲುಗು ಮತ್ತು ತಮಿಳಿನ ಕೆಲ ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ ಕಮಲಾ ಕುಮಾರಿಗೆ ಕನ್ನಡ ಚಿತ್ರರಂಗದಿಂದ ದೊಡ್ಡ ಅವಕಾಶ ನೀಡಿದ್ದು ನಿರ್ದೇಶಕ ವೈ.ಆರ್.ಸ್ವಾಮಿ. ಡ್ಯಾನ್ಸ್ ಕ್ಲಾಸ್‌ನಲ್ಲಿ ಕಮಲಾ ಕುಮಾರಿ ಅವರ ನೃತ್ಯ ನೋಡಿ ‘ಜೇನು ಗೂಡು’ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದರು. ನಿರ್ದೇಶಕ ವೈ.ಆರ್.ಸ್ವಾಮಿ ಅವರೇ ಕಮಲಾ ಕುಮಾರಿಗೆ ‘ಜಯಂತಿ’ ಎಂದು ಹೆಸರಿಟ್ಟರು. ಅಲ್ಲಿಂದ ಜಯಂತಿಯ ಪಯಣ ಕನ್ನಡ ಚಿತ್ರರಂಗದಲ್ಲಿ ಶುರುವಾಯಿತು. ‘ಜೇನು ಗೂಡು’ ಸಿನಿಮಾ ಹಿಟ್ ಆಯ್ತು. ಕನ್ನಡ ಚಿತ್ರರಂಗದಲ್ಲಿ ಜಯಂತಿ ಭದ್ರವಾಗಿ ನೆಲೆಯೂರಿದರು.

ಬಳಿಕ ಡಾ.ರಾಜ್‌ಕುಮಾರ್ ಜೊತೆಗೆ ‘ಚಂದವಳ್ಳಿಯ ತೋಟ’ ಸಿನಿಮಾದಲ್ಲಿ ನಾಯಕಿಯಾಗಿ ಜಯಂತಿ ಅಭಿನಯಿಸಿದರು. ವರನಟ ಡಾ.ರಾಜ್‌ಕುಮಾರ್ ಜೊತೆಗೆ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಖ್ಯಾತಿ ಜಯಂತಿ ಅವರದ್ದಾಗಿದೆ.

ಕಲಾವತಿ, ತುಂಬಿದ ಕೊಡ, ಬೆಟ್ಟದ ಹುಲಿ, ಮಿಸ್ ಲೀಲಾವತಿ, ಎಡಕಲ್ಲು ಗುಡ್ಡದ ಮೇಲೆ,ಮಸಣದ ಹೂ ಮೊದಲಾದ ಚಿತ್ರಗಳು ಜಯಂತಿಗೆ ಜನಪ್ರಿಯತೆ ತಂದುಕೊಟ್ಟಿತು. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಭಾಷೆಗಳಲ್ಲಿ 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ಜಯಂತಿ ಅಭಿನಯಿಸಿದ್ದಾರೆ.

ರಾಜ್ಯ ಪ್ರಶಸ್ತಿ, ಫಿಲ್ಮ್‌ಫೇರ್ ಪ್ರಶಸ್ತಿ, ಡಾ.ರಾಜ್‌ಕುಮಾರ್ ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಜಯಂತಿ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

Comments are closed.