ಕರಾವಳಿ

ಮುರ್ಡೇಶ್ವರದ 11 ವರ್ಷದ ಹಿಂದಿನ ಯಮುನಾ ನಾಯ್ಕ್ ರೇಪ್&ಮರ್ಡರ್ ಕೇಸ್ ‘ರೀ ಓಪನ್’ಗೆ ಧಾರವಾಡ ಹೈಕೋರ್ಟ್ ಆದೇಶ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಉಡುಪಿ/ಕಾರವಾರ: ಕಳೆದ 11 ವರ್ಷಗಳ ಹಿಂದೆ ಮುರುಡೇಶ್ವರದ ಹಿರೇಧೋಮಿಯಲ್ಲಿ ನಡೆದ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕ ವ್ಯಕ್ತಿ ನಿರಪರಾಧಿ ಎಂದು ಕಾರವಾರ ಜಿಲ್ಲಾ ನ್ಯಾಯಾಲಯ 4 ವರ್ಷಗಳ ಹಿಂದೆ ನೀಡಿದ್ದ ತೀರ್ಪನ್ನು ಧಾರವಾಡ ಹೈಕೋರ್ಟಿನ ನ್ಯಾಯಾಧೀಶರಾದ ಜಸ್ಟಿಸ್ ಆರ್. ದೇವದಾಸ್, ಜಸ್ಟಿಸ್ ಜೆ. ಎಂ ಕಾಜೀ ಪೀಠವು ಎತ್ತಿಹಿಡಿದಿದೆ ಮಾತ್ರವಲ್ಲ ಯಮುನಾ ನಾಯ್ಕ್ ಕೊಲೆ ಪ್ರಕರಣ ಮರು ತನಿಖೆ ನಡೆಸಲು ಮಹತ್ವದ ಆದೇಶ ನೀಡಿದೆ.

(ಕೊಲೆಯಾದ ಯಮುನಾ ನಾಯ್ಕ್)

ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ವೆಂಕಟೇಶ್ ಹರಿಕಾಂತ್ ಎನ್ನುವ ವ್ಯಕ್ತಿ ಬರೋಬ್ಬರಿ 6 ವರ್ಷ 8 ತಿಂಗಳುಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ನಾಲ್ಕು ವರ್ಷದ ಹಿಂದೆ ಖುಲಾಸೆಗೊಂಡಿದ್ದು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ಧಾರವಾಡ ಉಚ್ಚ ನ್ಯಾಯಾಲಯದಿಂದಲೂ ನಿರಪರಾಧಿ ಎಂಬ ತೀರ್ಪು ಬಂದಿದೆ. ಅತ್ಯಾಚಾರ- ಹತ್ಯೆಯಾಗಿದ್ದ ಆಕೆ ದೇಹದ ಗುಪ್ತಾಂಗದ ಭಾಗದ 4 ಕಡೆಸಿಕ್ಕ ವೀರ್ಯದ ಅಂಶ, ಯುವತಿಯ ಕೈಯಲ್ಲಿ ಅಪರಾಧಿಯ ಕೂದಲುಗಳು ಪತ್ತೆಯಾಗಿತ್ತು. ಅದನ್ನು ಸಂಗ್ರಹಿಸಿ ಹೈದ್ರಾಬಾದ್ ನ ವಿಧಿ ವಿಜ್ಞಾನ ಇಲಾಖೆಗೆ ಕಳುಹಿಸಿ ಪರೀಕ್ಷೆ ನಡೆಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ವೆಂಕಟೇಶ್ ಅವರ ಡಿಎನ್‍ಎ ಪರಿಕ್ಷೆಯನ್ನೂ ನಡೆಸಲಾಗಿದ್ದು 11 ತಿಂಗಳ ಬಳಿಕ ಬಂದ ವರದಿಯಲ್ಲಿ ಆ ವೀರ್ಯದ ಮಾದರಿ ವೆಂಕಟೇಶ್ ಅವರದ್ದಲ್ಲ ಎಂಬುದಾಗಿತ್ತು.

ಮರುತನಿಖೆಗೆ ಆದೇಶ..
ಯಮುನಾ ಕೊಲೆ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ‌ ಸಿಗಬೇಕಾದಲ್ಲಿ ನೈಜ ಆರೋಪಿಗಳ‌ ಬಂಧನವಾಗಬೇಕು‌ ಎಂದು ಹೇಳಿರುವ ಉಚ್ಚ ನ್ಯಾಯಾಲಯ‌ ಮುರ್ಡೇಶ್ವರ ಪಿಎಸ್ಐ ಅವರನ್ನು ತನಿಖಾಧಿಕಾರಿಯಾಗಿ ಮಾಡಿ ಪ್ರಕರಣದ ಮರು ತನಿಖೆಗೆ ಆದೇಶಿಸಿದೆ. 11 ವರ್ಷದ ಹಿಂದಿನ ಪ್ರಕರಣ ಮರುತನಿಖೆಯಾಗುತ್ತಿದ್ದು ಮೊದಲು ಎಫ್.ಐ.ಆರ್ ನಲ್ಲಿ ಹೆಸರಿದ್ದ 7 ಮಂದಿ ಮರು ವಿಚಾರಣೆಗೆ ಆದೇಶಿಸಲಾಗಿದೆ. ಅವರೆಲ್ಲರ ವೀರ್ಯ, ರಕ್ತ, ಉಗುರು, ಕೂದಲಿನ ಮಾದರಿ ಸಂಗ್ರಹಿಸಲು ಸೂಚನೆ‌ ನೀಡಲಾಗಿದೆ. ಮೊಹಮ್ಮದ್ ಸಾಧಿಕ್ ದೊಣ್ಯ, ಖಾಸೀಫ್ ಮೊಹಮ್ಮದ್, ಮೊಹಮ್ಮದ್ ನಾಸೀರ್, ಯಾಸೀನ್ ಶೇಖ್, ನೀಲಗಿರಿ ಸಿದ್ದಿ ಮೊಹಮ್ಮದ್, ಹಬೀಬ್ ಶೇಖ್, ಅಂಡಾ ನಾಸೀರ್ ಶೇಖ್ ವಿಚಾರಣೆಗೆ ಹೈಕೋರ್ಟ್‌ ಆದೇಶಿಸಿದೆ.

ಏನಿದು ಪ್ರಕರಣ..?
2010 ಅಕ್ಟೋಬರ್ 23 ರಂದು ಮೊಹಮ್ಮದ್ ಸಾದಿಕ್‌ ಎನ್ನುವವರ ಮನೆಯಲ್ಲಿ ಮನೆ ಕೆಲಸಕ್ಕಿದ್ದ ಅದೇ ಗ್ರಾಮದ ಬಡ ಯುವತಿ ಯಮುನಾ ನಾಯ್ಕ್‌ ಎನ್ನುವಾಕೆಯನ್ನು ಅತ್ಯಾಚಾರ ಎಸಗಿ ಕಟ್ಟಿಗೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಯುವತಿ ಮನೆಗೆ ಬಾರದಾಗ ಆತಂಕಗೊಂಡ ಪೋಷಕರು ಹುಡುಕಾಡಿದಾಗ ಕಟ್ಟಿಗೆ ಶೆಡ್‌ ಬಳಿ ಶವ ಪತ್ತೆಯಾಗಿತ್ತು. ಅತೀ ಕೋಮುಸೂಕ್ಷ್ಮ ಪ್ರದೇಶವಾದ ಭಟ್ಕಳದಲ್ಲಿ ನಡೆದ ಈ ಪ್ರಕರಣ ಕೋಮು ರೂಪ ಪಡೆದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿತ್ತು ಮಾತ್ರವಲ್ಲದೆ ಗಲಭೆ ಸೃಷ್ಟಿಯಾಗುವ ಸಂಭವವೂ ನಿರ್ಮಾಣವಾಗಿತ್ತು.

ಎಫ್.ಐ.ಆರ್ 9 ಜನರ ಮೇಲೆ….ಬಂಧಿಸಿದ್ದು ಅಮಾಯಕನನ್ನು..!
ಘಟ‌ನೆ ಬಳಿಕ ಯಮುನಾ ತಂದೆ ನಾಗಪ್ಪ ನಾಯ್ಕ್ ಮೊದಲಿಗೆ ಮುರ್ಡೇಶ್ವರ ಠಾಣೆಯಲ್ಲಿ ಪ್ರಾಥಮಿಕ ತನಿಖಾ ವರದಿಯಲ್ಲಿ (ಎಫ್.ಐ.ಆರ್) 9 ಮಂದಿ ಅನ್ಯಕೋಮಿನವರ ವಿರುದ್ಧ ದೂರು ನೀಡಿದ್ದು ಅದರಲ್ಲಿ ಮಗಳು‌ ಕೆಲಸಕ್ಕಿದ್ದ ಮನೆಮಾಲಿಕ ಆತನ ಮಗನ ಹೆಸರು ಉಲ್ಲೇಖಿಸಲಾಗಿತ್ತು. ಆದರೆ ತಕ್ಷಣದ ಬೆಳವಣಿಗೆಯಲ್ಲಿ ಕೊಲೆಯಾದ ಯುವತಿ ತಂದೆ ವೆಂಕಟೇಶ್ ಹರಿಕಾಂತ್ ಹೆಸರು‌ ಉಲ್ಲೇಖಿಸಿ ದೂರು‌ ನೀಡಿದ್ದರು. ಅದರ ಅನ್ವಯ ವೆಂಕಟೇಶ್ ಹರಿಕಾಂತನನ್ನು ಪೊಲೀಸರು ಬಂಧಿಸಿದ್ದರು. ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಭಟ್ಕಳದಲ್ಲಿ ಶ್ರೀರಾಮ ಸೇನೆಯು ಪ್ರತಿಭಟನೆಯನ್ನು ನಡೆಸಿ ನೈಜ ಆರೋಪಿಗಳ ಬಂಧನಕ್ಕೆ ಒತ್ತಾಯ ಮಾಡಿದ್ದಲ್ಲದೆ‌ ಸಿಒಡಿ ತನಿಖೆಗೆ ‌ಒಪ್ಪಿಸಲು ಆಗ್ರಹಿಸಲಾಗಿತ್ತು.

(ವೆಂಕಟೇಶ್ ಮತ್ತು ಪತ್ನಿ)

ಪೊಲೀಸರು ಫಿಕ್ಸ್ ಮಾಡಿದರು….?
ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ಅಂದಿನ ಡಿವೈಎಸ್‌ಪಿ ಎಂ.ನಾರಾಯಣ್‌ ಅತ್ಯಾಚಾರ ಮತ್ತು ಕೊಲೆ ನಡೆದ ಸ್ಥಳದಲ್ಲಿ ಬೈಕ್‌ ಇಟ್ಟು ಮೀನುಗಾರಿಕೆಗೆ ತೆರಳುತ್ತಿದ್ದ ತನ್ನನ್ನು ವಶಕ್ಕೆ ಪಡೆದು ಅಪರಾಧಿ ಎಂದು ಬಿಂಬಿಸಿದ್ದರು. ವಶಕ್ಕೆ ಪಡೆದ ಬಳಿಕ ಖಾಸಗಿ ಲಾಡ್ಜ್ ವೊಂದರಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ತಾನೇ ಅಪರಾಧಿ ಎಂದು ಬಲವಂತವಾಗಿ ಒಪ್ಪಿಸುವಂತೆ ಮಾಡಿ ಸಹಿ ಹಾಕಿಸಿಕೊಂಡಿದ್ದರು ಮಾತ್ರವಲ್ಲದೆ ವಿಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದರು ಎಂದು ವೆಂಕಟೇಶ್ ಹರಿಕಾಂತ್ ಕುಂದಾಪುರದಲ್ಲಿ ಮಾಧ್ಯಮದ ಮುಂದೆ ನೋವು ತೋಡಿಕೊಂಡರು.

ವೆಂಕಟೇಶ್ ಪತ್ನಿಯ ಹೋರಾಟಕ್ಕೆ ಕೊನೆಗೂ ಜಯ..
ಮನೆಯ ಆಧಾರಸ್ತಂಭವಾಗಿದ್ದ ವೆಂಕಟೇಶ ಮಾಡದ ತಪ್ಪಿಗೆ ಜೈಲು ಪಾಲಾದ ಬಳಿಕ ಪತ್ನಿ ಮತ್ತು ಇಬ್ಬರು ಮಕ್ಕಳು ತೀವ್ರ ಅವಮಾನ ಎದುರಿಸಿದರು ಮಾತ್ರವಲ್ಲ ಅವರ ಜೊತೆಗೆ ಬೆಂಬಲಕ್ಕಿಳಿದ ಸಂಘಟನೆ ಪ್ರಮುಖರು ಅವಮಾನಕ್ಕೀಡಾಗುವಂತಾಯಿತು. ಪತಿ ನಿರಪರಾಧಿ ಎಂದು ಅರಿತ ಪತ್ನಿ ಮಾದೇವಿ ತನ್ನ ಸಹೋದರ ಬಾಲಕೃಷ್ಣ ಸಹಕಾರದಲ್ಲಿ ಕಾನೂನು ಹೋರಾಟಕ್ಕೆ ಇಳಿದರು. ಶ್ರೀರಾಮ ಸೇನೆ ಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ಬೆಂಬಲದೊಂದಿಗೆ ಕುಂದಾಪುರದ ಖ್ಯಾತ ನ್ಯಾಯವಾದಿ ರವಿಕಿರಣ್‌ ಮುರ್ಡೇಶ್ವರ ಅವರನ್ನು ಭೇಟಿಯಾಗಿ ಸಂಪೂರ್ಣ ಪ್ರಕರಣದ ಬಗ್ಗೆ ವಿವರಿಸಿದ್ದು ವೆಂಕಟೇಶ್‌ ಪರ ವಾದ ಮಂಡಿಸಲು ಹೊರಟರು.

(ರವಿಕಿರಣ್ ಮುರ್ಡೇಶ್ವರ್ ಅವರಿಗೆ ಕೃತಜ್ಞತೆ)

ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಕಾರ್ಯಕ್ಕೆ ಶ್ಲಾಘನೆ….
ಪ್ರಕರಣದ ಬಗ್ಗೆ ವಾದ ಮಂಡನೆಗೆ ರವಿಕಿರಣ್‌ ಅವರು ಸಮರ್ಥವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದರು ಸುದೀರ್ಘ‌ ವಾದ-ಪ್ರತಿವಾದಗಳು ನಡೆದು 51 ಜನರ ಸಾಕ್ಷಿ ವಿಚಾರಣೆ ನಡೆಸಲಾಗಿತ್ತು. ಡಿಎನ್‍ಎ ವರದಿ ಆಧರಿಸಿ ಜೂನ್‌ 28 ರಂದು ಕಾರವಾರದ ಜಿಲ್ಲಾ ನ್ಯಾಯಾಲಯ ಅತ್ಯಾಚಾರ ಮತ್ತು ಹತ್ಯೆಯಲ್ಲಿ ಆರೋಪಿ ಎಂದು ಬಂಧಿತನಾಗಿದ್ದ ವೆಂಕಟೇಶ್‌ ಪಾತ್ರವಿಲ್ಲ, ಆತ ನಿರಪರಾಧಿ ಎಂದು ತೀರ್ಪು ನೀಡಿತ್ತು.

ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಅವರಿಂದ ನಮಗೆ ಹೊಸ ಜೀವನ ಸಿಕ್ಕಿದೆ ಎಂದು ವೆಂಕಟೇಶ್ ಹಾಗೂ ಪತ್ನಿ ಮಾಧವಿ,‌ ಸಹೋದರ ಬಾಲಕೃಷ್ಣ ಹೇಳಿದ್ದಾರೆ. ಅವರು ಹಾಗೂ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಜಯಂತ್‌ ನಾಯ್ಕ್ ಇನ್ನಿತರರು ನ್ಯಾಯವಾದಿಗಳ ಕಚೇರಿಗೆ ಶನಿವಾರ ಆಗಮಿಸಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಮುತಾಲಿಕ್ ಕೂಡ ವಿಡಿಯೋ ಕರೆ ಮಾಡಿ ವಕೀಲರಿಗೆ ಧನ್ಯವಾದ ಹೇಳಿದರು.

ಯಾತನೆ ಅನುಭವಿಸಿರುವೆ: ಕಣ್ಣೀರಿಟ್ಟ ವೆಂಕಟೇಶ್
ನಾನು ನಿರಪರಾಧಿಯಾದರೂ ಅಂದು ಪೊಲೀಸರು ನನಗೆ ಚಿತ್ರ ಹಿಂಸೆ ನೀಡಿದ್ದಾರೆ. 6 ವರ್ಷ 8 ತಿಂಗಳನ್ನು ಜೈಲಿನಲ್ಲಿ ಕಳೆದಿದ್ದೇನೆ ,ಈ ವೇಳೆ ನನ್ನ ಹೆಂಡತಿ ಮಕ್ಕಳು ಅನುಭವಿಸಿದ ನನ್ನ ಕಳೆದು ಹೋದ ಜೀವನ ಮತ್ತೆ ಸಿಗುವುದಿಲ್ಲ . ಆದರೆ ಅತ್ಯಾಚಾರಕ್ಕೀಡಾಗಿ ಹತ್ಯೆಗೀಡಾಗಿರುವ ಯಮುನಾಗೆ ನ್ಯಾಯ ಸಿಗಬೇಕು. ನನ್ನನ್ನು ಹಿಂಸಿಸಿ ಶಿಕ್ಷೆ ಅನುಭವಿಸುವಂತೆ ಮಾಡಿದ ಅಂದಿನ ಡಿವೈಎಸ್‌ಪಿ ಎಂ.ನಾರಾಯಣ್‌ಗೆ ಶಿಕ್ಷೆಯಾಗಬೇಕು.

ಪ್ರಮೋದ್ ಮುತಾಲಿಕ್ ಆಗ್ರಹವೇನು….?
ಅಂದಿನ ಡಿವೈಎಸ್ಪಿ ನಾರಾಯಣ್‌ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಲು ವೆಂಕಟೇಶ್‌ ಕುಟುಂಬ ನಿರ್ಧರಿಸಿದ್ದಾರೆ. ವೆಂಕಟೇಶ್‌ ಅವರ ಹೋರಾಟಕ್ಕೆ ಶ್ರೀರಾಮ ಸೇನೆ ಬೆಂಬಲ ನೀಡಿದ್ದು ಸ್ಥಾಪಕಾಧ್ಯಕ್ಷ ಪ್ರಮೋದ್ ಮುತಾಲಿಕ್ ಕೂಡ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಸಮಗ್ರ ತನಿಖೆ ನಡೆದು ನೈಜ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದು ಈ ಬಗ್ಗೆ ಗೃಹಸಚಿವರು ಮತ್ತು ಕಾರವಾರ ಎಸ್ಪಿ ಅವರಿಗೆ ಮನವಿ ನೀಡಲಿದ್ದೇವೆ. ಈ ಮಹತ್ವದ ತೀರ್ಪು ಮತ್ತೆಲ್ಲಾ ಬಗೆಹರಿಯದ ಕೊಲೆ‌ಕೇಸಿನ ಮರು ತನಿಖೆಗೆ ಪೂರಕವಾಗಲಿದೆ ಎಂದು ಮುತಾಲಿಕ್ ಅವರು ‘ಕನ್ನಡಿಗ ವರ್ಲ್ಡ್’ ಪ್ರತಿನಿಧಿ ಜೊತೆ ದೂರವಾಣಿಯಲ್ಲಿ ಮಾತನಾಡುತ್ತಾ ಹೇಳಿದರು.

Comments are closed.