ಕರಾವಳಿ

ಪತ್ರಕರ್ತರು ಜನರ ಧ್ವನಿಯಾಗಲಿ : ಎಸ್‌ಪಿ ಋಷಿಕೇಶ್ ಸೋನಾವಣೆ

Pinterest LinkedIn Tumblr

ಮಂಗಳೂರು: ಪ್ರಜಾಪ್ರಭುತ್ವದ ಪ್ರಮುಖ ಅಂಗವಾಗಿರುವ ಪತ್ರಕರ್ತರು ಸಮಾಜದಲ್ಲಿ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡಿದಾಗ ಅದಕ್ಕೆ ಪೂರಕವಾಗಿ ಇಲಾಖೆಯಿಂದಲೂ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಅಭಿಪ್ರಾಯಿಸಿದ್ದಾರೆ.

ಅವರು ಪ್ರೆಸ್‌ಕ್ಲಬ್‌ನಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳೂರು ಪ್ರೆಸ್‌ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್‌ನ ಸಹಕಾರದಲ್ಲಿ ಆಯೋಜಿಸಲಾದ ಪತ್ರಿಕಾ ದಿನಾಚರಣೆ ಹಾಗೂ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಧನಾತ್ಮಕ ಪ್ರತಿಕ್ರಿಯೆಯ ಕಾರ್ಯವಿಧಾನ ಸಮಾಜದಲ್ಲಿ ಅಭಿವೃದ್ಧಿಯ ದಿಕ್ಕಿನಲ್ಲಿ ಅತೀ ಅಗತ್ಯವಾಗಿದ್ದು, ಪತ್ರಕರ್ತರು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.

ಈ ಸಂದರ್ಭ ಕನ್ನಡ ಪ್ರಭ ಪತ್ರಿಕೆಯ ಹಿರಿಯ ವರದಿಗಾರ ಡಾ. ಸಂದೀಪ್ ವಾಗ್ಲೆ ಅವರಿಗೆ ಪ್ರಸಕ್ತ ಸಾಲಿನ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕೊರೋನದಿಂದ ಪತ್ರಿಕೋದ್ಯಮದಲ್ಲಿ 2 ವರ್ಷದಲ್ಲೇ ಭಾರೀ ಸ್ಥಿತ್ಯಂತರ ಪತ್ರಿಕೋದ್ಯಮದಲ್ಲಿ ಮುಂದಿನ 10 ವರ್ಷಗಳಲ್ಲಿ ನಿರೀಕ್ಷಿಸಲಾಗಿದ್ದ ಸ್ಥಿತ್ಯಂತರವನ್ನು ಕೊರೋನದಿಂದಾಗಿ ಕಳೆದ ಎರಡು ವರ್ಷಗಳಲ್ಲೇ ಅನುಭವಿಸುವಂತಾಗಿದೆ ಎಂದು ಹಿರಿಯ ಪತ್ರಕರ್ತ ಜೋಗಿ (ಗಿರೀಶ್ ರಾವ್ ಹತ್ವಾರ್) ಅಭಿಪ್ರಾಯಿಸಿದರು.

ಕಾರ್ಯಕ್ರಮದಲ್ಲಿ ‘ನಾಳೆಯ ಪತ್ರಕರ್ತರು’ ಎಂಬ ವಿಷಯದಲ್ಲಿ ಮಾತನಾಡಿದ ಅವರು, ಕೊರೋನ ಸಾಂಕ್ರಾಮಿಕದಿಂದಾಗಿ ಬಹಳಷ್ಟು ಪತ್ರಿಕೆಗಳ ಮುದ್ರಣ ನಿಂತು ಹೋಗಿ ಆನ್‌ಲೈನ್ ಪತ್ರಿಕೆಯಾಗಿ ಹೊಸ ಸ್ವರೂಪವನ್ನು ಪಡೆಯುತ್ತಿದೆ ಎಂದು ಅವರು ಹೇಳಿದರು.

ಕಳೆದ ಹಲವು ವರ್ಷಗಳಿಂದಲೂ ಮುದ್ರಣ ಮಾಧ್ಯಮ ಕೊನೆಯಾಗುತ್ತದೆ ಎಂಬ ಭೀತಿಯನ್ನೇ ಎದುರಿಸುತ್ತಿದೆ. ಆದರೆ ವಾಸ್ತವದಲ್ಲಿ ಮುದ್ರಣ ಮಾಧ್ಯಮ ಕಾಲಕ್ಕನುಸಾರವಾಗಿ ಹೊಸ ಸ್ವರೂಪ, ವಿನ್ಯಾಸದೊಂದಿಗೆ ನಮಗೆ ಲಭ್ಯವಾಗುತ್ತದೆ. ಕಾರಣ ಮುದ್ರಣ ಮಾಧ್ಯಮಕ್ಕೆ ಇರುವ ನಂಬಿಕೆ ಇತರ ಮಾಧ್ಯಮಗಳಿಗೆ ಇಲ್ಲವಾಗಿರುವುದು ಎಂದು ಸಂವಾದದ ವೇಳೆ ಕಿರಿಯ ಪತ್ರಕರ್ತರೊಬ್ಬರ ಪ್ರಶ್ನೆಗೆ ಜೋಗಿಯವರು ಪ್ರತಿಕ್ರಿಯಿಸಿದರು.

ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿರಾಜ್ ಎಚ್.ಜಿ., ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಬಿ. ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು. ಇಬ್ರಾಹಿಂ ಅಡ್ಕಸ್ಥಳ ವಂದಸಿದರು.

Comments are closed.