ಕರಾವಳಿ

ಕುಲಶೇಖರ ಬಳಿ ರೈಲ್ವೆ ಹಳಿಯಲ್ಲಿ ಗುಡ್ಡೆ ಕುಸಿತ : ಶಾಶ್ವತ ಪರಿಹಾರಕ್ಕೆ ಮಾಜಿ ಶಾಸಕ ಲೋಬೊ ಆಗ್ರಹ.

Pinterest LinkedIn Tumblr

ಮಂಗಳೂರು : ವಿಪರೀತ ಮಳೆಯಿಂದಾಗಿ ಕುಲಶೇಖರದ ಬಳಿ ರೈಲ್ವೆ ಹಳಿಗೆ ಗುಡ್ಡೆ ಕುಸಿತದಿಂದ ಭಾರಿ ಪ್ರಮಾಣದ ಮಣ್ಣು ಬಿದ್ದಿದೆ. ಇದರಿಂದಾಗಿ ರೈಲ್ವೆ ಸಂಚಾರಕ್ಕೆ ತೊಡಕ್ಕುಂಟಾಗಿದೆ. ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಜೆ. ಆರ್. ಲೋಬೊ ರವರು ಘಟನಾಸ್ಥಳಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಕುಲಶೇಖರ -ಕೊಂಗುರುಮಠ ಬಳಿ ರೈಲ್ವೆ ಹಳಿಗೆ ಗುಡ್ಡೆ ಕುಸಿತದಿಂದ ರೈಲ್ವೆ ಸಂಚಾರಕ್ಕೆ ತೊಡಕ್ಕುಂಟಾಗಿದೆ. ಕುಲಶೇಖರ -ಕೊಂಗುರುಮಠ ರಸ್ತೆ ಕುಸಿದರೆ ಅಲ್ಲಿರುವ ಅನೇಕ ಮನೆಗಳಿಗೂ ಹನಿಯಾಗುವ ಸಾಧ್ಯತೆ ಇದೆ. ಹಾಗಾಗಿ ಈ ರಸ್ತೆಯನ್ನು ಉಳಿಸುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ಕೈಗೊಳ್ಳಬೇಕು.

ಅದಲ್ಲದೆ ಈ ಭಾಗದಲ್ಲಿ ನೀರು ಸರಿಯಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಿ ರಸ್ತೆಯನ್ನು ನಿರ್ಮಿಸಿದ್ದರೆ, ಭೂಕುಸಿತದಿಂದ ಸಮಸ್ಯೆಗಳು ಎದುರಾಗುತ್ತಿರಲಿಲ್ಲ. ಇಂಥ ಚಿಕ್ಕ ಪುಟ್ಟ ವಿಚಾರದಲ್ಲಿ ಗಮನ ಹರಿಸಿ ಕ್ರಮ ಕೈಗೊಳ್ಳಬೇಕಿತ್ತು. ಇನ್ನಾದರೂ ರೈಲ್ವೆ ಇಲಾಖೆ ಮುತುವರ್ಜಿ ವಹಿಸಬೇಕು.

ಸಂಸದ ನಳಿನ್ ಕುಮಾರ್ ಕಟೀಲ್ ರವರು ರೈಲ್ವೆ ಇಲಾಖೆ ಮೇಲೆ ಒತ್ತಡ ಹಾಕಿ ಸರಿಯಾಗಿ ಕೆಲಸ ಆಗುವಂತೆ ನೋಡಿಕೊಳ್ಳಬೇಕು ಹಾಗೂ ಇನ್ನು ಮುಂದೆ ಈ ಭಾಗದಲ್ಲಿ ಭೂಕುಸಿತವಾಗದಂತೆ ಶಾಶ್ವತವಾದ ಪರಿಹಾರ ಕ್ರಮವನ್ನು ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಭಾಸ್ಕರ್ ಕೆ., ಹಾಗೂ ಪಕ್ಷದ ಪ್ರಮುಖರಾದ ಟಿ. ಕೆ. ಸುಧೀರ್, ಡೆನಿಸ್ ಡಿಸಿಲ್ವ, ಸುನೀತ್ ಡೇಸಾ, ಉದಯ್ ಕುಂದರ್, ರಮಾನಂದ ಪೂಜಾರಿ, ಸವಾನ್ ಎಸ್. ಕೆ., ಯಶವಂತ ಪ್ರಭು, ಕೃತಿನ್ ಕುಮಾರ್, ಶಾನ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.

Comments are closed.