ಕರಾವಳಿ

ತಂದೆ-ತಾಯಿ ನೆನಪಿಗಾಗಿ ಶಿರ್ವದಲ್ಲಿ ಶ್ರೀಸಿದ್ಧಿವಿನಾಯಕ ದೇವಳ‌‌ ನಿರ್ಮಿಸಿದ ಕ್ರೈಸ್ತ ಉದ್ಯಮಿ ಗ್ಯಾಬ್ರಿಯಲ್ ನಜ್ರತ್‌

Pinterest LinkedIn Tumblr

ಉಡುಪಿ: ಶಿರ್ವ ಊರಿಗೆ ಹಿತವನ್ನು ಬಯಸಿ ಗ್ಯಾಬ್ರಿಯಲ್‌ರವರಿಗೆ ಪ್ರೇರಣೆ ನೀಡಿ ಶಿರ್ವದಲ್ಲಿ ನೆಲೆನಿಂತ ಜಗತ್ತಿನ ದೊಡ್ಡ ನಾಯಕ ಸಿದ್ಧಿವಿನಾಯಕ ಎಂದು ಉಡುಪಿ ಶ್ರೀಪಲಿಮಾರು ಮಠದ ಹಿರಿಯ ಯತಿಗಳಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ನುಡಿದರು.

ಅವರು ಗುರುವಾರ ಉಡುಪಿ ಜಿಲ್ಲೆಯ ಶಿರ್ವ-ಮೂಡುಬೆಳ್ಳೆ ಕ್ರಾಸ್ ರಸ್ತೆಯ ಜಂಕ್ಷನ್‌ನಲ್ಲಿ ಶ್ರೀಸಿದ್ದಿವಿನಾಯಕನ ಪರಮಭಕ್ತ ವಿಶ್ರಾಂತ ಉದ್ಯಮಿ ಗ್ಯಾಬ್ರಿಯಲ್ ಎಫ್. ನಜ್ರತ್‌ರವರು ಸ್ವಂತ ಜಮೀನಿನಲ್ಲಿ ತಮ್ಮ ಮಾತಾಪಿತರ ಸವಿನೆನಪಿಗಾಗಿ ಅಂದಾಜು ಒಂದೂವರೆ ಕೋಟಿಗೂ ಅಧಿಕ ರೂ. ವೆಚ್ಚದಲ್ಲಿ ನಿರ್ಮಿಸಿದ ಶ್ರೀಸಿದ್ದಿವಿನಾಯಕ ದೇವಾಲಯದ ಪ್ರತಿಷ್ಠಾ ಕಾರ್ಯಕ್ರಮದ ಸಂದರ್ಭ ದೇವಳಕ್ಕೆ ಆಗಮಿಸಿ ಶ್ರೀಸಿದ್ದಿವಿನಾಯಕನಿಗೆ ಆರತಿ ಬೆಳಗಿಸಿ ಆಶೀರ್ವಚನ ನೀಡಿದರು.

(ಗ್ಯಾಬ್ರಿಯಲ್ ಎಫ್. ನಜ್ರತ್‌)

ಶಿಲಾಮಯ ವಿನಾಯಕ ಶಿರ್ವದಲ್ಲಿ ಸ್ಥಿರವಾಗಿ ನೆಲೆಯಾಗಿದ್ದಾನೆ. ಲೋಕದ ಸಂಕಷ್ಟವನ್ನು ದೂರಮಾಡಿ, ಸೂರ್ಯಚಂದ್ರರಿರುವಷ್ಟು ಕಾಲ ಆರೋಗ್ಯವಂತರಾಗಿ ಬದುಕುವ ಸ್ಥಿತಿ ನಿರ್ಮಾಣವಾಗಲಿ ಎಂದು ಗ್ಯಾಬ್ರಿಯಲ್‌ರವರ ಈ ಕಾರ್ಯಕ್ಕೆ ಸಮಸ್ತ ಸಮಾಜದ ಪರವಾಗಿ ಅಭಿನಂದಿಸಿ ಹರಸಿದರು.

ದಿ. ಫಾಬಿಯನ್ ನಜ್ರತ್, ದಿ. ಸಬೀನ ನಜ್ರತ್ ಅವರ ಸವಿನೆನಪಿನಲ್ಲಿ ಒಂದೂವರೆ ಕೋಟಿಗೂ ಅಧಿಕ ವೆಚ್ಚದಲ್ಲಿ ಈ ಭವ್ಯವಾದ ದೇವ ಮಂದಿರ ನಿರ್ಮಾಣಗೊಂಡಿದೆ.

ಶ್ರೀಮಠದ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

ಕನ್ನರ್ಪಾಡಿ ಜ್ಯೋತಿಷ್ಯ ವಿದ್ವಾನ್ ಸಂದೀಪ್ ಉಪಾಧ್ಯಾಯ ನೇತೃತ್ವದಲ್ಲಿ ವೈದಿಕವೃಂದ, ದೇವಳದ ನಿಮಾತೃ ಗ್ಯಾಬ್ರಿಯಲ್ ನಜ್ರೆತ್, ದೇವಳ ನಿರ್ಮಾಣದ ಉಸ್ತುವಾರಿ ನಾಗೇಶ ಹೆಗ್ಡೆ ಉಭಯ ಶ್ರೀಗಳವರನ್ನು ಸ್ವಾಗತಿಸಿ ಪಾದಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಪಲಿಮಾರು ಮಠದ ಹಿರಿಯ ವೈದಿಕರಾದ ಗಿರೀಶ್ ಉಪಾಧ್ಯಾಯ, ಪಡುಬೆಳ್ಳೆ ಪರಶುರಾಮ ಭಟ್, ಭಜಕವೃಂದದವರು ಉಪಸ್ಥಿತರಿದ್ದರು.

Comments are closed.