ಬೆಂಗಳೂರು: ಸ್ಯಾಂಡಲ್ ವುಡ್ ನಟ, ನವರಸ ನಾಯಕ ಜಗ್ಗೇಶ್ ಅವರ ಕಿರಿಯ ಪುತ್ರ ಯತಿರಾಜ್ ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಕಾರು ಗುರುವಾರ ಮಧ್ಯಾಹ್ನ ಅಪಘಾತಕ್ಕೀಡಾಗಿದೆ.

ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಚಿಕ್ಕಬಳ್ಳಾಪುರದ ಅಗಲಗುರ್ಕಿ ಎಂಬಲ್ಲಿ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಏರ್ ಬ್ಯಾಗ್ ಓಪನ್ ಆದ್ದರಿಂದ ಪ್ರಾಣಾಪಾಯದಿಂದ ಯತಿರಾಜ್ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಕಾರು ಮರಕ್ಕೆ ಡಿಕ್ಕಿ ಹೊಡೆದ ತೀವ್ರತೆಗೆ ಮುಂಭಾಗದ ಟೈಯರ್ ಕೂಡ ಸ್ಫೋಟಗೊಂಡಿದೆ.
ಅಪಘಾತ ಬಗ್ಗೆ ನಟ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದು, ಕೊರೋನ ಬಂದಾಗಿನಿಂದ ಹೊರ ಹೋಗಿಲ್ಲಾ ಹೋಗಿಬರುತ್ತೇನೆ ಎಂದು ಅವನ ಅಮ್ಮನಿಗೆ ಹೇಳಿ ಯತಿರಾಜ್ ಹೊರಹೋಗಿದ್ದ. ಅವನ ಇಷ್ಟದ ರಸ್ತೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಹೋಗಿ ಬರುವಾಗ ಅಡ್ಡ ಬಂದ ನಾಯಿ ರಕ್ಷಿಸಲು ಹೋಗಿ ರಸ್ತೆ ವಿಭಜಕ್ಕೆ ಹೊಡೆದು ಕಾರು ಪಕ್ಕದ ರಸ್ತೆಗೆ ಬಿದ್ದು ಅಪಘಾತವಾಗಿದೆ. ನಾನು ನಂಬಿರುವ ಗುರುರಾಯರ ಆಶೀರ್ವಾದ, ಶ್ರೀರಕ್ಷೆ ನನ್ನ ಮೇಲಿದೆ, ಪವಾಡ ರೀತಿಯಲ್ಲಿ ನನ್ನ ಮಗ ಯತಿರಾಜು ಒಂಚೂರು ಗಾಯ ಸಹ ಆಗದೆ ಪಾರಾಗಿದ್ದಾನೆ ಎಂದು ಬರೆದುಕೊಂಡಿದ್ದಾರೆ.
Comments are closed.