
ಬೆಂಗಳೂರು: ಕಳೆದ ವರ್ಷ ಡಾ.ಅಜೀಜ್ ಪಾಷ ಅವರನ್ನು ಮದುವೆಯಾದಾದ ನಂತರ, ಅವರ ಬಗ್ಗೆ ಹೆಚ್ಚು ಮಾತನಾಡಿರಲಿಲ್ಲ ನಟಿ ಸಂಜನಾ. ಈಗ ವೈದ್ಯರ ದಿನದ ಅಂಗವಾಗಿ ಅವರ ಜತೆಗಿರುವ ಒಂದು ಫೋಟೋ ಶೇರ್ ಮಾಡುವುದರ ಜತೆಗೆ, ಗಂಡನೇ ತಮ್ಮ ಸ್ಫೂರ್ತಿ ಎಂದು ಅವರು ಹೇಳಿಕೊಂಡಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, ‘ಈ ಜಗತ್ತಿನಲ್ಲಿ ಡಾಕ್ಟರ್ಗಳೇ ನಿಜವಾದ ಹೀರೋಗಳು. ಇದನ್ನು ಅವರು ಕರೊನಾ ಸಮಯದಲ್ಲಿ ನಿರೂಪಿಸಿದ್ದಾರೆ. ದೇವರ ನಂತರ, ಮನುಕುಲದ ಜತೆಗೆ ಗಟ್ಟಿಯಾಗಿ ನಿಲ್ಲುವುದರ ಜತೆಗೆ, ತಮ್ಮ ಜೀವನವನ್ನೇ ಪಣಕ್ಕಿಟ್ಟು ಯಾರಾದರೂ ಹೋರಾಡಿದ್ದಾರೆ ಎಂದರೆ ಅದು ವೈದ್ಯರು. ಜಗತ್ತಿನಾದ್ಯಂತ ಸಾವಿರಾರು ವೈದ್ಯರು, ನರ್ಸ್ಗಳು ಮತ್ತು ಆಸ್ಪತ್ರೆಯವರು ತಮ್ಮ ಜೀವನವನ್ನೇ ಪಕ್ಕಕ್ಕಿಟ್ಟು ಇಂತಹ ಸಮಯದಲ್ಲಿ ಮನುಕುಲದ ಸೇವೆ ಮಾಡಿದ್ದಾರೆ. ಮನೆಯಲ್ಲಿ ಸುರಕ್ಷಿತವಾಗಿರುವ ಸಮಯದಲ್ಲಿ, ಜೀವಭಯವನ್ನು ಲೆಕ್ಕಿಸದೆ ಕರೊನಾ ವಿರುದ್ಧ ಹೋರಾಡಿದ್ದಾರೆ’ ಎಂದಿದ್ದಾರೆ.
‘ನನ್ನ ಗಂಡ ವ್ಯಾಸ್ಕುಲಾರ್ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದಾರೆ. ತಿಂಗಳಿಗೆ ಒಂದು ದಿನವಾದರೂ ರಜೆ ತೆಗೆದುಕೊಳ್ಳಿ, ಸ್ವಲ್ಪ ರಿಲ್ಯಾಕ್ಸ್ ಆಗಿ ಎಂದು ಹಲವು ಬಾರಿ ಹೇಳಿದ್ದೇನೆ. ಆದರೆ, ತಮ್ಮ ಕೆಲಸ ಜನರನ್ನು ರಕ್ಷಿಸುವುದು ಮತ್ತು ಅದೇ ತಮ್ಮ ಮೊದಲ ಆದ್ಯತೆ ಎಂದು ಹೇಳಿದ್ದಾರೆ. ಈ ವಿಷಯವಾಗಿ ನಮ್ಮಿಬ್ಬರಲ್ಲಿ ವಾದ ನಡೆಯುತ್ತಲೇ ಇರುತ್ತದೆ. ಆದರೆ, ಅವರ ಕರ್ತವ್ಯಪ್ರಜ್ನೆ ಮತ್ತು ಬದ್ಧತೆಯ ಬಗ್ಗೆ ನನಗೆ ಬಹಳ ಗೌರವ, ಪ್ರೀತಿ ಮತ್ತು ಹೆಮ್ಮೆ ಇದೆ. ನನ್ನನ್ನು ಸ್ಫೂರ್ತಿಗೊಳಿಸಿದ್ದಿಕ್ಕೆ, ನನಗೆ ಶಕ್ತಿ ತುಂಬಿದ್ದಿಕ್ಕೆ ಮತ್ತು ಲಾಕ್ಡೌನ್ ನಡುವೆಯೂ ಹಗಲು-ರಾತ್ರಿ ಕಷ್ಟದಲ್ಲಿರುವವರ ಪರವಾಗಿ ನಿಂತಿದ್ದಿಕ್ಕೆ ಅವರಿಗೆ ನನ್ನದೊಂದು ದೊಡ್ಡ ಸೆಲ್ಯೂಟ್’ ಎನ್ನುತ್ತಾರೆ ಸಂಜನಾ.
ಜಗತ್ತಿನಾದ್ಯಂತ ಲಕ್ಷಾಂತರ ಜನರ ಜೀವವನ್ನು ಉಳಿಸಿದ ಮತ್ತು ಹಗಲು-ರಾತ್ರಿ ಕೆಲಸ ಮಾಡುತ್ತಿರುವ ಎಲ್ಲ ರಿಯಲ್ ಹೀರೋಗಳಿಗೆ ಅವರು ವೈದ್ಯರ ದಿನದ ಶುಭಾಶಯಗಳನ್ನು ತಿಳಿಸುವುದರ ಜತೆಗೆ, ವೈದ್ಯರೊಬ್ಬರ ಹೆಂಡತಿಯಾಗಿರುವುದಕ್ಕೆ ತಮಗೆ ಹೆಮ್ಮೆ ಎಂನಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ.
Comments are closed.