ಕರಾವಳಿ

ಸಾಮಾಜಿಕ ಅಂತರ, ಸ್ವಚ್ಛತೆ ಹಾಗೂ ಲಸಿಕೆ ಪಡೆಯುವ ಮೂಲಕ ಸೋಂಕಿನಿಂದ ರಕ್ಷಣೆ ಸಾಧ್ಯ : ಶಾಸಕ ಕಾಮತ್

Pinterest LinkedIn Tumblr

ಮಂಗಳೂರು : ಕೋವಿಡ್ ಸೋಂಕಿನಿಂದ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಾಮಾಜಿಕ ಅಂತರ, ಸ್ವಚ್ಛತೆ ಹಾಗೂ ಲಸಿಕೆ ಪಡೆಯುವ ಮೂಲಕ ರಕ್ಷಣೆ ಪಡೆಯಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದರು.

ಸಂಘ ನಿಕೇತನದಲ್ಲಿ ಹೆಲ್ಪಿಂಗ್ ಹ್ಯಾಂಡ್ ಫೌಂಡೇಶನ್ ವತಿಯಿಂದ ನಡೆದ ಮೊದಲ‌ ಹಂತದ ಉಚಿತ ಲಸಿಕೆ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ಕಾಮತ್, ಅನೇಕ ಸೇವಾ ಸಂಸ್ಥೆಗಳು ಕೋವಿಡ್‌ ಸಂದರ್ಭದಲ್ಲಿ ಜನರಿಗೆ ಉಪಯುಕ್ತವಾಗುವ‌ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ಸಾಮಾಜಿಕ ಜವಬ್ದಾರಿಯನ್ನು ನಿಭಾಯಿಸಿದೆ.

ಆಹಾರ ವಿತರಣೆ, ಮಾಸ್ಕ್, ಸ್ಯಾನಿಟೈಸರ್ ವಿತರಣೆ, ಔಷಧಿಗಳ ವಿತರಣೆ ಸೇರಿದಂತೆ ಜನರಿಗೆ ಸಹಕಾರಿಯಾಗುವ ಕೆಲಸದಲ್ಲಿ ಸೇವಾ‌ ಸಂಸ್ಥೆಗಳು ತೊಡಗಿಸಿಕೊಂಡಿವೆ. ಆ ಸಾಲಿನಲ್ಲಿ ಹೆಲ್ಪಿಂಗ್ ಹ್ಯಾಂಡ್ ಫೌಂಡೇಶನ್ ಸಂಸ್ಥೆಯ ಕೆಲಸ ಶ್ಲಾಘನೀಯ ಎಂದರು.

ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಕಾರ್ಯದರ್ಶಿಗಳಾದ ರಘುವೀರ್ ಕಾಮತ್ ಮಾತನಾಡಿ, ಸಾಮಾಜಿಕ ಕಳಕಳಿಯುಳ್ಳ ಹೆಲ್ಪಿಂಗ್ ಹ್ಯಾಂಡ್ ಫೌಂಡೇಶನ್ ಸಂಸ್ಥೆಯ ಸದಸ್ಯರು ಆರ್ಥಿಕವಾಗಿ ಹಿಂದುಳಿದ ಜನರಿಗೆ ಉಚಿತ ಲಸಿಕೆ ವಿತರಿಸುವ ಮೂಲಕ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ಅವರ ಕಾರ್ಯಕ್ಕೆ ಯಶಸ್ಸು ದಕ್ಕಲಿ ಎಂದು ಹಾರೈಸಿದರು.

ಬಳಿಕ ಮಾತನಾಡಿದ ಹೆಲ್ಪಿಂಗ್ ಹ್ಯಾಂಡ್ ಫೌಂಡೇಶನ್ ಅಧ್ಯಕ್ಷರಾದ ವರುಣ್ ರಾಜ್ ಅಂಬಟ್, ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಹೆಲ್ಪಿಂಗ್ ಹ್ಯಾಂಡ್ಸ್ ಫೌಂಡೇಶನ್ ಸ್ಥಾಪಿಸಲಾಗಿತ್ತು. ಇಂದು ಸದಸ್ಯರ ಸಂಖ್ಯೆಯಲ್ಲಿಯೂ ಕೂಡ ಹೆಚ್ಚಳವಾಗಿದೆ.

ಈ ಬಾರಿಯ ಲಾಕ್ ಡೌನ್ ಸಂದರ್ಭದಲ್ಲಿ ಜನರಿಗೆ ಊಟದ‌ ವ್ಯವಸ್ಥೆ ಸೇರಿದಂತೆ ಅನೇಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಆ ನಿಟ್ಟಿನಲ್ಲಿ ಕೋವಿಡ್ ಲಸಿಕೆ ಖರೀದಿಸಿ ಆರ್ಥಿಕವಾಗಿ ಹಿಂದುಳಿದ ಜನರಿಗೆ ಉಚಿತವಾಗಿ ಹಂಚಲು ತೀರ್ಮಾನಿಸಲಾಗಿತ್ತು. ಇಂದು 210 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸಂದೀಪ್ ಗರೋಡಿ, ಸ್ಥಳೀಯ ಮನಪಾ ಸದಸ್ಯರಾದ ಸಂಧ್ಯಾ ಮೋಹನ್ ಆಚಾರ್, ಅಡ್ವಕೇಟ್ ರಂಜಿನಿ ಕಾಮತ್ ಹಾಗೂ ಹೆಲ್ಪಿಂಗ್ ಹ್ಯಾಂಡ್ ಫೌಂಡೇಶನ್ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Comments are closed.