ಕರಾವಳಿ

ಟಾಟಾ ಟೆಕ್ನಾಲಜಿ ಸಹಭಾಗಿತ್ವದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಐಟಿಐಗಳ ಉನ್ನತೀಕರಣ

Pinterest LinkedIn Tumblr

ಮಂಗಳೂರು, ಜೂನ್ 17 : ಕರ್ನಾಟಕ ಸರಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಟಾಟಾ ಟೆಕ್ನಾಲಜಿಸ್ ಲಿಮಿಟೆಡ್ (TTL) ರವರ ಸಹಭಾಗಿತ್ವದಲ್ಲಿ ರಾಜ್ಯದ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ) ಗಳನ್ನು ಉನ್ನತೀಕರಿಸಲಾಗುತ್ತಿದ್ದು, ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ 05 ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು (ಮಂಗಳೂರು-02, ಪುತ್ತೂರು-01, ವಿಟ್ಲ-01, ಬೆಳ್ತಂಗಡಿ-01) ಒಳಗೊಂಡಿರುತ್ತದೆ. ಒಪ್ಪಂದದಂತೆ ಪ್ರತೀ ಐಟಿಐಯನ್ನು ಸುಮಾರು 30 ಕೋಟಿ ರೂಪಾಯಿ ವೆಚ್ಚದಲ್ಲಿ ಉನ್ನತೀಕರಣಗೊಳಿಸಲಾಗುತ್ತಿದೆ.

ನೂತನ ವರ್ಕ್‍ಶಾಪ್ ಕಟ್ಟಡದಲ್ಲಿ ಇಲೆಕ್ಟ್ರಾನಿಕ್ ವೆಹಿಕಲ್ ತಂತ್ರಾಜ್ಞಾನಕ್ಕೆ ಸಂಬಂಧಿಸಿದ ಆಧುನಿಕ ಉಪಕರಣಗಳು, ಕಂಪ್ಯೂಟರೈಸ್ಡ್ ನ್ಯೂಮರಿಕಲ್ ಮಿಲ್ಲಿಂಗ್ ಮತ್ತುಟರ್ನಿಂಗ್ ಮೆಷಿನ್, ರೊಬೋಟಿಕ್ ಕಂಟ್ರೋಲ್ಡ್ ವೆಲ್ಡಿಂಗ್ ಮೆಷಿನ್, ಟೂಲ್‍ಕ್ರಿಬ್ ಇತ್ಯಾದಿಗಳನ್ನು ಅಳವಡಿಸಿ ಸುಸಜ್ಜಿತ ಕಾರ್ಯಗಾರವನ್ನು ಸ್ಥಾಪಿಸಲಾಗುತ್ತಿದೆ.

ಅಲ್ಲದೆ ಎಲ್ಲಾ ಐದು ಐಟಿಐಗಳಲ್ಲಿ ಟೆಕ್ನಾಲಜಿ ಲ್ಯಾಬನ್ನು ಅಭಿವೃದ್ಧಿಪಡಿಸಿ ಅದರಲ್ಲಿ ಡಿಸೈನ್, ಡೆವಲಪ್‍ಮೆಂಟ್, ಇಂಟರ್‍ನೆಟ್ ಆಫ್‍ಥಿಂಗ್ಸ್, ವರ್ಚುವಲ್ ಸ್ಯಾಟಲೈಟ್, ಪ್ರೊಡಕ್ಟ್ ವೆರಿಫಿಕೇಶನ್ ಇತ್ಯಾದಿ ಆಧುನಿಕ ತರಬೇತಿ ಪಡೆಯುವ ಅವಕಾಶವನ್ನು ಕಲ್ಪಿಸಲಾಗುತ್ತಿದೆ.

ಈ ಸೌಕರ್ಯ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗಲ್ಲದೆ ಜಿಲ್ಲೆಯ ಇತರ ಕೈಗಾರಿಕಾ ತರಬೇತಿ ಸಂಸ್ಥೆಗಳ, ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಕೌಶಲ್ಯ ವರ್ಧನೆಗೆ ಅನುಕೂಲ ಕಲ್ಪಿಸುವ ಉದ್ದೇಶವನ್ನೂ ಇಲಾಖೆ ಹೊಂದಿದೆ.

ವರ್ಕ್‍ಶಾಪ್ ಮತ್ತು ಟೆಕ್ನಾಲಜಿ ಲ್ಯಾಬ್‍ಗಳನ್ನು ನಿರ್ಮಿತಿ ಕೇಂದ್ರದ ಮೂಲಕ ನಿರ್ಮಾಣ ಮಾಡಲಾಗುತ್ತಿದ್ದು, ಅತೀ ಶೀಘ್ರ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿ ಯಂತ್ರೋಪಕರಣಗಳನ್ನು ಅಳವಡಿಸಿ ಪ್ರಸ್ತುತ ಶೈಕ್ಷಣಿಕ ಸಾಲಿನ ತರಬೇತಿಗೆ ಸಜ್ಜುಗೊಳಿಸಬೇಕಾಗಿರುತ್ತದೆ.

ಕೋವಿಡ್–19 ಸಾಂಕ್ರಾಮಿಕ ರೋಗದಿಂದ ನಿರ್ಮಾಣ ಕಾರ್ಯ ಕುಂಠಿತಗೊಂಡಿದ್ದು, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗಿದ್ದು, ಪ್ರಾರಂಭದಲ್ಲಿ ಜಿಲ್ಲಾಧಿಕಾರಿಯವರು ನಗರದ ಕದ್ರಿಹಿಲ್ಸ್‍ನಲ್ಲಿರುವ ಕೈಗಾರಿಕಾ ತರಬೇತಿ ಸಂಸ್ಥೆಯ ಟೆಕ್ನಾಲಜಿ ಲ್ಯಾಬ್‍ನ ವಿನ್ಯಾಸ ಕಾಮಗಾರಿಯ ಭೌತಿಕ ಪ್ರಗತಿ ಪರಿಶೀಲನೆ ನಡೆಸಿರುತ್ತಾರೆ.

ನಂತರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ ಮತ್ತು ಮಹಿಳಾ) ಗಳ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ವರ್ಕ್‍ಶಾಪ್ ಕಟ್ಟಡದ ಕಾಮಗಾರಿಯ ಭೌತಿಕ ಪ್ರಗತಿ ಪರಿಶೀಲನೆ ನಡೆಸಿದ್ದು, ಕಾಮಗಾರಿ ನಿಧಾನಗತಿಯಲ್ಲಿ ಮುಂದುವರೆಯುತ್ತಿರುವುದನ್ನು ಗಮನಿಸಿ ವಿಳಂಬಕ್ಕೆ ತಾಂತ್ರಿಕ ಕಾರಣವನ್ನು ನಿರ್ಮಿತಿ ಕೇಂದ್ರದ ಕಾರ್ಯ ನಿರ್ವಾಹಕ ನಿರ್ದೇಶಕರಲ್ಲಿ ವಿಚಾರಿಸಿ ಸ್ಥಳದಲ್ಲೇ ನಿರ್ದೇಶನ ನೀಡಿ ಅತೀ ಶೀಘ್ರ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಆದೇಶಿಸಿರುತ್ತಾರೆ.

ನಂತರ ಕೆಜಿಟಿಟಿಐ ಕಛೇರಿಯಲ್ಲಿ ಸಭೆ ಮಂದುವರೆದಿದ್ದು, ಜಿಲ್ಲೆಯ ಇತರ ಮೂರು ತಾಲ್ಲೂಕಿನಲ್ಲಿ ನಿರ್ಮಿಸಲಾಗುತ್ತಿರುವ ವರ್ಕ್‍ಶಾಪ್ ಮತ್ತು ಟೆಕ್ನಾಲಜಿ ಲ್ಯಾಬ್‍ಗಳ ವಿವರವನ್ನು ಜಿಲ್ಲಾ ನೋಡಲ್ ಐಟಿಐ ಪ್ರಾಚಾರ್ಯರು ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಯಾದ ಗಿರಿಧರ್ ಸಾಲಿಯಾನ್ ಇವರು ಪಿಪಿಟಿ ಪ್ರೆಸೆಂಟೇಶನ್ ಮೂಲಕ ವಸ್ತುತಃ ಕಾಮಗಾರಿ ಪ್ರಗತಿ ವಿವರವನ್ನು ನೀಡಿದ್ದು, ನಿರ್ಮಿತಿ ಕೇಂದ್ರದ ಕಾರ್ಯ ನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಕಲ್ಬಾವಿ ಹಾಗೂ ಮಹಿಳಾ ಐಟಿಐ ಪ್ರಾಚಾರ್ಯರಾದ ಎ. ಬಾಲಕೃಷ್ಣ ಇವರು ಸಂಸ್ಥೆಯ ಪ್ರಗತಿ ಮಾಹಿತಿಯನ್ನು ಒದಗಿಸಿರುತ್ತಾರೆ.

ಈ ಬಗ್ಗೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಯಾವುದೇ ಅಲ್ಪ ಪ್ರಮಾಣದ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಶೀಘ್ರ ಪರಿಹರಿಸಿ ಯಾವುದೇ ವಿಳಂಬಕ್ಕೆ ಆಸ್ಪದ ನೀಡದೆ ಒಂದು ತಿಂಗಳೊಳಗೆ ಎಲ್ಲಾ ಐದು ಸಂಸ್ಥೆಗಳಲ್ಲೂ ಕಾಮಗಾರಿಯನ್ನು ಪರಿಪೂರ್ಣವಾಗಿ ಮುಕ್ತಾಯಗೊಳಿಸುವಂತೆ ಸಭೆಯಲ್ಲಿ ಕಟ್ಟುನಿಟ್ಟಾಗಿ ಸೂಚನೆ ನೀಡಿರುತ್ತಾರೆ.

ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಾರ್ಯ ನಿರ್ವಾಹಕ ಇಂಜಿನಿಯರ್ ಹಾಗೂ ನಿರ್ಮಿತಿ ಕೇಂದ್ರದ ಇಂಜಿನಿಯರುಗಳೂ ಹಾಜರಿದ್ದರು.

Comments are closed.