ಕರಾವಳಿ

ವಿದ್ಯುತ್, ಪೆಟ್ರೋಲ್ ಬೆಲೆ ಏರಿಕೆಗೆ ಆಕ್ರೋಷ : ಸರ್ಕಾರದ ವಿರುದ್ಧ ರಮಾನಾಥ್ ರೈ ವಾಗ್ದಾಳಿ

Pinterest LinkedIn Tumblr

ಮಂಗಳೂರು: “ಕೊರೋನಾ ಎರಡನೇ ಅಲೆ ಉಲ್ಬಣ ಸ್ಥಿತಿಗೆ ಸರಕಾರ ಕಾರಣ.19 ಬಾರಿ ಸರಕಾರ ಇಂಧನ ಬೆಲೆಯನ್ನು ಏರಿಸಿದೆ. ಸರಕಾರ ಇದಕ್ಕೆ ಕೊಡುತ್ತಿರುವ ಕಾರಣ ಸುಳ್ಳು. ಈ ಮೂಲಕ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಮಾಜಿ ಸಚಿವ ರಮಾನಾಥ್ ರೈ ಆರೋಪಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದೆ ಮೋದಿ ವಿರೋಧ ಪಕ್ಷದಲ್ಲಿದ್ದಾಗ ಅಧಿಕಾರಕ್ಕೆ ಬಂದ ತಕ್ಷಣವೇ 70 ರೂ. ಇದ್ದ ಪೆಟ್ರೋಲ್ ಬೆಲೆ ಇಳಿಸುವುದಾಗಿ ಹೇಳಿದ್ದರು. ಆದರೆ ಕಳೆದೊಂದು ವರ್ಷದಲ್ಲಿ ಲೀ. ಗೆ 30 ರೂ. ಏರಿಕೆ ಮಾಡಿದ್ದಾರೆ.

ವಿದ್ಯುತ್ ಒಂದು ಯುನಿಟ್ ಗೆ 30 ಪೈಸೆ ಏರಿಸಿದ್ದಾರೆ. ಇದಕ್ಕೂ ಸಕಾರಣವಿಲ್ಲ. ರಾಜ್ಯದಲ್ಲಿ 30000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಇಲ್ಲಿ ಜನರಿಗೆ ಬೇಕಿರುವುದು 10000 ಯುನಿಟ್ ಮಾತ್ರ. ಅದಾನಿ ಕಂಪೆನಿ ಕೂಡ ಉತ್ಪಾದನೆ ಮಾಡುತ್ತಿದೆ. ಅವರಿಂದ ಕೇಂದ್ರ ಹೆಚ್ಚುವರಿ ಹಣ ಕೊಟ್ಟು ವಿದ್ಯುತ್ ಖರೀದಿ ಮಾಡುತ್ತಿದೆ. ಕೊರೋನಾ ಸಂದರ್ಭದಲ್ಲಿ ಜನರ ಹಸಿವಿನ ಹೊಟ್ಟೆಗೆ ದೊಣ್ಣೆಯಿಂದ ಹೊಡೆಯುವ ಕೆಲಸ ಸರಕಾರ ಮಾಡಿದೆ” ಎಂದು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

“ಹಿಂದೆ ಕಾಂಗ್ರೆಸ್ ಇದ್ದಾಗ ರೈತರಿಗೆ ಉಚಿತ ವಿದ್ಯುತ್ ಕೊಡಲಾಗುತ್ತಿತ್ತು. ಕೆಲವು ರಾಜ್ಯಗಳಲ್ಲಿ ವಿದ್ಯುತ್ ಬಿಲ್ ಮನ್ನಾ ಮಾಡಲಾಗಿತ್ತು. ಆದರೆ ಇಂದಿನ ಸರಕಾರ ವ್ಯಾಪಾರ ಮಾಡುತ್ತಿದೆ, ಜನರ ಹಿತ ಕಾಯುವ ಕೆಲಸ ಮಾಡುತ್ತಿಲ್ಲ. ಹಿಂದೆ ಲಾಭದಲ್ಲಿದ್ದ ವಿದ್ಯುತ್ ಸರಬರಾಜು ಕಂಪೆನಿ ನಷ್ಟದಲ್ಲಿದೆ. ಅವೈಜ್ಞಾನಿಕ ಜನವಿರೋಧಿ ವಿದ್ಯುತ್ ಬಿಲ್ ಏರಿಕೆಯನ್ನು ಕೂಡಲೇ ರದ್ದು ಮಾಡಬೇಕು. ಪ್ರತಿಭಟನೆ ಮಾಡಿದರೆ ಕೇಸ್ ಹಾಕುತ್ತಾರೆ. ಇಂಧನ ಬೆಲೆ ಏರಿಕೆಯಿಂದಾಗಿ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಜನರ ಸಮಸ್ಯೆಯತ್ತ ಸರಕಾರ ಕಣ್ತೆರೆದು ನೋಡುತ್ತಿಲ್ಲ” ಎಂದು ರೈ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ವಿ. ರಮಾನಾಥ್ ರೈ, ಮಾಜಿ ಶಾಸಕ ಜೆ.ಆರ್. ಲೋಬೊ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಾಹುಲ್ ಹಮೀದ್, ಪದ್ಮಪ್ರಸಾದ್, ರವುಫ್, ಲುಮನ್, ಬೇಬಿ ಕುಂದರ್, ಭಾಸ್ಕರ್ ಮೊಯಿಲಿ, ಅಬ್ಬಸಲಿ, ಸುರೇಂದ್ರ ಕಂಬಳಿ, ಪ್ರತಿಭಾ ಕುಳಾಯಿ, ನವೀನ್ ಡಿಸೋಜ, ಡಿಕೆ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.

Comments are closed.