ಕರಾವಳಿ

ಭಾರೀ ಪ್ರಮಾಣದ ನಿಷೇಧಿತ ಮಾದಕ ವಸ್ತು ಎಲ್.ಎಸ್.ಡಿ ಪತ್ತೆ : 17,15,500 ರೂ. ಮೌಲ್ಯದ ಸೊತ್ತು ಸಹಿತಾ ಆರೋಪಿ ಬಂಧನ

Pinterest LinkedIn Tumblr

ಮಂಗಳೂರು, ಜೂನ್ 11 : ನಗರದಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ನಿಷೇಧಿತ ಮಾದಕ ವಸ್ತು ಎಲ್.ಎಸ್.ಡಿ ಭಾರೀ ಪ್ರಮಾಣದಲ್ಲಿ ಮಾರುತ್ತಿದ್ದ ಕೇರಳ ಮೂಲದ ಯುವಕನೋರ್ವನನ್ನು ಮಂಗಳೂರು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೇರಳ ಕ್ಯಾಲಿಕಟ್ ಮುಟ್ಟಂಗಲ್ ನಿವಾಸಿ, ಪ್ರಸ್ತುತ ಕದ್ರಿಯ ಪಿಜಿಯಲ್ಲಿ ವಾಸಿಸುತ್ತಿರುವ ಮುಹಮ್ಮದ್ ಅಜಿನಾಸ್ (25) ಎಂದು ಹೆಸರಿಸಲಾಗಿದೆ.

ಈತನಿಂದ 16.80 ಲಕ್ಷ ರೂ. ಮೌಲ್ಯದ ಒಟ್ಟು 15 ಗ್ರಾಂ 15 ಮಿಲಿ ಗ್ರಾಂ ತೂಕವಿರುವ 840 ಎಲ್‌ಎಸ್‌ಡಿ ಸ್ಟ್ಯಾಂಪ್, ಮೋಟರ್ ಬೈಕ್, 2 ಮೊಬೈಲ್ ಫೋನ್ ಸೇರಿದಂತೆ 17,15,500 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇಷ್ಟು ದೊಡ್ಡ ಪ್ರಮಾಣದಲ್ಲಿ ಮಂಗಳೂರಿನಲ್ಲಿ ಮೊದಲ ಬಾರಿಗೆ ಎಲ್ ಎಸ್ ಡಿ ಡ್ರಗ್ಸ್ ಪತ್ತೆಯಾಗಿದೆ. ಎಲ್‌ಎಸ್‌ಡಿ ಒಂದು ಸ್ಟ್ಯಾಂಪ್‌ಗೆ 2 ಸಾವಿರದಿಂದ 6 ಸಾವಿರ ರೂ. ಬೆಲೆಯಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಈ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ನಗರ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಕದ್ರಿ ಮೈದಾನದ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಮೊಹಮ್ಮದ್ ಅಜಿನಾಸ್ ಮಂಗಳೂರು ನಗರದ ಕದ್ರಿ ಮೈದಾನದ ಬಳಿ ಗ್ರಾಹಕರಿಗಾಗಿ ಕಾಯುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.

ಆರೋಪಿ ಐಷಾರಾಮಿ ವ್ಯಕ್ತಿಗಳಿಗೆ ಇದನ್ನು ಮಾರಾಟ ಮಾಡುತ್ತಿದ್ದ. ಈತ ಮಂಗಳೂರು ನಗರ, ಕಾಸರಗೋಡು, ಗೋವಾಕ್ಕೂ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಆರೋಪಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಅಯುಕ್ತರು ಮಾಹಿತಿ ನೀಡಿದರು.

ಪೊಲೀಸ್ ತಂಡಕ್ಕೆ 10 ಸಾವಿರ ರೂ. ಪುರಸ್ಕಾರ ಘೋಷಣೆ :

ದೊಡ್ಡ ಪ್ರಮಾಣದಲ್ಲಿ ಎಲ್‌ಎಸ್‌ಡಿ ಪ್ರಕರಣವನ್ನು ಭೇದಿಸುವ ಮೂಲಕ ಸಾಧನೆ ಮಾಡಿದ ತಂಡಕ್ಕೆ ಅಭಿನಂದನೆ ಸಲ್ಲಿಸುವುದರ ಜತೆಗೆ 10 ಸಾವಿರ ರೂ. ಪುರಸ್ಕಾರ ನೀಡುವುದಾಗಿ ಕಮಿಷನರ್ ಘೋಷಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಹರಿರಾಮ್ ಶಂಕರ್, ಸಹಾಯಕ ಪೊಲೀಸ್ ಆಯುಕ್ತರಾದ ಎ.ಎ. ಹೆಗಡೆ, ರಂಜಿತ್ ಕುಮಾರ್, ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್, ಉಪಸ್ಥಿತರಿದ್ದರು.

Comments are closed.