ಕರಾವಳಿ

ಕೊರಗರ ಸ್ವಾವಲಂಭಿ ಬದುಕಿನ ‘ಸಂಜೀವಿನಿ’: ಉಡುಪಿ ಜಿಲ್ಲೆ ಕುಂಭಾಸಿಯಲ್ಲಿ ಹೈಟೆಕ್ ದನದ ಕೊಟ್ಟಿಗೆ

Pinterest LinkedIn Tumblr

ಕುಂದಾಪುರ: ಕೊರಗ ಸಮುದಾಯದವರು ಸ್ವಾವಲಂಭಿ ಜೀವನ ನಡೆಸಲು ಉಡುಪಿ ಹಾಗೂ ದ.ಕ. ಜಿಲ್ಲೆಗೆ 2 ಕೋಟಿ ಅನುದಾನವಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಗ್ಗೆ ಕ್ರಿಯಾಯೋಜನೆ ಸಿದ್ಧವಾಗದ ಹಿನ್ನೆಲೆ ಉಡುಪಿ ಜಿಲ್ಲೆ ಕುಂದಾಪುರದ ಕುಂಭಾಶಿಯಲ್ಲಿ ಹಸುವಿನ ಕೊಟ್ಟಿಗೆ ಮಾಡಲಾಗಿದೆ. ಮುಂದಿನ ಹಂತದಲ್ಲಿ ಕೋಳಿ ಫಾರ್ಮ್ ಮಾಡಲು ಯೋಜನೆ ರೂಪಿಸಲಾಗಿದ್ದು ಹತ್ತು ಮಂದಿ ಅರ್ಹ ಫಲಾನುಭವಿಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ ಹೇಳಿದರು.

ಕುಂಭಾಶಿ ಗ್ರಾಮಪಂಚಾಯತಿ ಸಮೀಪದ ಕೊರಗ ಕಾಲನಿ ಬಳಿ ಮಕ್ಕಳ‌ಮನೆ ವಠಾರದಲ್ಲಿ ಕೊರಗ ಸಮುದಾಯದ ಅಭಿವೃದ್ಧಿಗೆ ಇಲಾಖಾ ವತಿಯಿಂದ ನೀಡಲಾದ ಹೈನೋಧ್ಯಮಕ್ಕೆ ಉತ್ತೇಜಿಸುವ ‘ಸಂಜೀವಿನಿ’ ಹಸು ಘಟಕಕ್ಕೆ ಭೇಟಿ ನೀಡಿ ಕೊರಗ ಮುಖಂಡರು ಹಾಗೂ ವಿವಿಧ ಇಲಾಖಾಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ ಅವರು ಮಾಧ್ಯಮದ ಜೊತೆ ವಿಚಾರ ಹಂಚಿಕೊಂಡರು.

ಐಟಿಡಿಪಿ ಹಾಗೂ ಎನ್.ಆರ್.ಎಲ್.ಎಂ ಸಂಜೀವಿನಿ ಸಂಘದಿಂದ ಅನುದಾನ ಬಂದಿದ್ದು ಕುಂಭಾಸಿಯಲ್ಲಿ 17.5 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ನೂತನ ಮಾದರಿ ಕೊಟ್ಟಿಗೆ ನಿರ್ಮಾಣವಾಗಿದ್ದು ಸದ್ಯ ಎರಡು ಜಾನುವಾರುಗಳಿದೆ. ಮುಂದಿನ ದಿನದಲ್ಲಿ ಆರು ದನಗಳು ಈ ಆಧುನಿಕ ಮಾದರಿ ಕೊಟ್ಟಿಗೆಗೆ ಬರಲಿದೆ. ಇಲ್ಲಿನ ಮಹಿಳೆಯರು ಸ್ವಾವಲಂಭಿಯಾಗಿ ಬದುಕಲು ಈ ಕ್ರಮಕೈಗೊಂಡಿದ್ದು ತೋಟಗಾರಿಕೆ ಇಲಾಖೆಯಿಂದ ಮೇವಿನ‌ ಹುಲ್ಲು ಬೆಳೆ ಬೆಳೆಸಲಾಗಿದೆ. ಮುಂದಿನ ತಿಂಗಳಲ್ಲಿ ಅಧೀಕೃತ ಉದ್ಘಾಟನೆ ನಡೆಸುತ್ತೇವೆ. ಅಷ್ಟೇ ಅಲ್ಲದೆ ಉಡುಪಿಯ ಕಾಪು ತಾಲೂಕಿನಲ್ಲಿ ಚಿಕ್ಕಿ ಕಾರ್ಖಾನೆ ನಡೆಸಲು ಯೋಜನೆಯಿದೆ ಎಂದರು.

ಕೊರಗ ಸಮುದಾಯದವರು ಮನೆ ನಿರ್ಮಾಣಕ್ಕೆ ಮೊದಲಿಗೆ 3.5 ಲಕ್ಚ ಸಹಾಯಧನ ಸಿಗುತ್ತಿದ್ದು ಬಳಿಕ 1.5 ಲಕ್ಷ ಸಿಗುತ್ತಿತ್ತು. ಆದರೆ ಜಿಲ್ಲಾಧಿಕಾರಿಗಳು ಹಾಗೂ ಸಿಇಓ ಅವರ ಕಾನ್ಫರೆನ್ಸ್ ಸಮಯದಲ್ಲಿ ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದು ಅವರು ಮತ್ತೆ ಅದನ್ನು 3.5 ಲಕ್ಷಕ್ಕೆ ಏರಿಸಿದ್ದಾರೆ. ಈಗ 471 ಮನೆಗಳ ಪ್ರಸ್ತಾವನೆ ಹೋಗಿದ್ದು ನಿರ್ಮಾಣಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದ್ದು ಫಲಾನುಭವಿಗಳನ್ನು ಗುರುತಿಸಲಾಗಿದೆ. ಜಡ್ಕಲ್ ಭಾಗದಲ್ಲಿ ಕೊರಗ ಸಮುದಾಯ ಮುಖ್ಯವಾಹಿನಿಯಿಂದ ದೂರವಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಕೂಲಂಕುಷವಾಗಿ ತಿಳಿದು ಸಮುದಾಯದವರ ಬಳಿ ಚರ್ಚೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.

ಕೊರಗ ವಿದ್ಯಾರ್ಥಿಗಳ‌ ಆನ್‌ಲೈನ್ ಶಿಕ್ಷಣ ಸುವ್ಯವಸ್ಥೆಗೆ ಕ್ರಮ…
ಜಿಲ್ಲೆಯಲ್ಲಿ ಕೊರಗ ಸಮುದಾಯದ ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣ ಸಮರ್ಪಕವಾಗಿ ಸಿಗುತ್ತಿಲ್ಲವೆನ್ನುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಸ್ತುತ ಪ್ರಾಯೋಗಿಕವಾಗಿ ಯೂತ್ ಎನ್.ಜಿ.ಒ ಜೊತೆ ಸೇರಿಕೊಂಡು ಸರಕಾರಿ ಶಾಲೆಯಲ್ಲಿನ ವಿದ್ಯಾರ್ಥಿಗಳು ಅವರ ಪೋಷಕರ ಮೊಬೈಲ್ ಮೂಲಕ ಹಾಗೂ ಬಾಲಕಿಯರ ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳಿಗೆ ಅನ್ಲೈನ್ ಮೂಲಕ ಒಂದು ತಿಂಗಳ ಕೋರ್ಸ್ ನೀಡುವ ಯೋಜನೆ ರೂಪಿಸಿದ್ದು ಕಳೆದ ಹತ್ತು ದಿನದಿಂದ ಈ ವ್ಯವಸ್ಥೆ ನಡೆಯುತ್ತಿದೆ. ಇದರ ಸಾಧಕ-ಬಾದಕ ಪರಾಮರ್ಶಿಸಿ ಮುಂದಿನ ದಿನದಲ್ಲಿ ಕೊರಗ ಸಮುದಾಯದ ಮಕ್ಕಳು ಹಾಗೂ ಸರಕಾರಿ ಶಾಲೆ ಮಕ್ಕಳನ್ನು ಒಗ್ಗೂಡಿಸಿಕೊಂಡು ಟಿವಿ ಸ್ಕ್ರೀನ್ ಅಥವಾ ಫ್ರಾಜೆಕ್ಟರ್ ಮೂಲಕ ಒಂದೇ ವ್ಯವಸ್ಥೆಯಡಿಯಲ್ಲಿ ಅಧ್ಯಾಪಕರಿಂದ ಆನ್ ಲೈನ್ ಶಿಕ್ಷಣ ಕೊಡಿಸುವ ಕೆಲಸ ಮಾಡಲಾಗುತ್ತದೆ ಎಂದರು.

ಸಮುದಾಯದ ಸಮಗ್ರ ಸರ್ವೇ…
ಕೊರಗ ಸಮುದಾಯದ ಸರ್ವೇ ಬಗ್ಗೆ ಪ್ರತಿಕ್ರಿಯಿಸಿದ ಅವರು. 2001-19ರ ತನಕ ಸರ್ವೇ ನಡೆದಿದ್ದು ಸಮುದಾಯದ ಮನೆಗಳು-ಸಮಾಜಿಕತೆಯ ಬಗ್ಗೆ, ವಿದ್ಯಾರ್ಹತೆ, ಆದಾಯ, ಜನಸಂಖ್ಯೆ ಬಗ್ಗೆ ಅಂಕಿಅಂಶವಿದ್ದು ಮನೆಗಳ ಶೌಚಾಲಯ, ನೀರು, ವಿದ್ಯುತ್ ಸಹಿತ ಮೂಲಸೌಕರ್ಯದ ಕುರಿತು ವಿಶೇಷ ಯೋಜನೆಯಡಿ ಅದಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಎರಡು ತಿಂಗಳ ಹಿಂದೆ ಕೊರಗ ಸಮುದಾಯದವರನ್ನು ಕೇಂದ್ರೀಕರಿಸಿ ಸಭೆ ಕರೆದಿದ್ದು ಕೊರೋನಾ ಹಿನ್ನೆಲೆ ಅದು ಮಾಡಲಾಗಿಲ್ಲ. ಮುಂದಿನ ದಿನಗಳಲ್ಲಿ ಸಮುದಾಯದವರ ಸಭೆ ಕರೆದು ಅಗತ್ಯ ಕ್ರಮಕೈಗೊಳ್ಳುತ್ತೇವೆ ಎಂದರು.

ಈ ಸಂದರ್ಭ ಕುಂಭಾಶಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ವೇತಾ, ಉಪಾಧ್ಯಕ್ಷ ಜಗದೀಶ್ ರಾವ್, ಸದಸ್ಯೆ ರಾಧಾದಾಸ್, ತಾಪಂ ಇಒ ಕೇಶವ ಶೆಟ್ಟಿಗಾರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸಂಜೀವ ನಾಯ್ಕ್, ಸಹಾಯಕಿ ಭುವನೇಶ್ವರಿ, ಐಟಿಡಿಪಿ ಅಧಿಕಾರಿ ವಿಶ್ವನಾಥ ಶೆಟ್ಟಿ, ಜಿಪಂ ಎಪಿ ಜೇಮ್ಸ್, ಪಶು ವೈದ್ಯಾಧಿಕಾರಿಗಳಾದ ನಾಗಭೂಷಣ ಉಪಾಧ್ಯಾಯ, ಹರೀಶ್ ತಂಬ್ಳೆಕರ್, ತಾ.ಪಂ ಇಂಜಿನಿಯರ್ ರವಿಶಂಕರ್, ಕುಂಭಾಸಿ ಗ್ರಾ.ಪಂ ಪಿಡಿಒ ಜಯರಾಮ ಶೆಟ್ಟಿ, ಮಕ್ಕಳ ಮನೆಯ ಗಣೇಶ್ ವಿ.ಕೊರಗ ಕುಂದಾಪುರ, ಶೇಖರ್ ಮರವಂತೆ, ಗಣೇಶ್ ಬಾರ್ಕೂರು, ವಿನಿತಾ ಮೊದಲಾದವರು ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.