ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಪ್ರಮುಖ ಆರೋಪಿಗಳು ದೋಷಿ ಎಂದು ಉಡುಪಿ ಜಿಲ್ಲಾ ನ್ಯಾಯಾಲಯ ತೀರ್ಪು ಪ್ರಕಟ ಮಾಡಿದೆ.

ಉದ್ಯಮಿ ಭಾಸ್ಕರ್ ಶೆಟ್ಟಿಯನ್ನು ಕೊಲೆಗೈದು ಬಳಿಕ ಶವವನ್ನು ಹೋಮಕುಂಡದಲ್ಲಿ ಸುಟ್ಟಿರುವ ಆರೋಪ ಸಾಬೀತಾಗಿದ್ದು, ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ, ರಾಜೇಶ್ವರಿ ಗೆಳೆಯ ನಿರಂಜನ ಭಟ್ ಅಪರಾಧಿಗಳೆಂದು ತೀರ್ಪು ನೀಡಲಾಗಿದೆ. ಆರೋಪಿಗಳ ಶಿಕ್ಷೆ ಪ್ರಮಾಣವನ್ನು ಇಂದು (ಜೂ.8 ಮಂಗಳವಾರ) ಮಧ್ಯಾಹ್ನ ನ್ಯಾಯಾಲಯದ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್. ಪ್ರಕಟಿಸಲಿದ್ದಾರೆ.
ಐದನೇ ಆರೋಪಿ ಚಾಲಕ ರಾಘವೇಂದ್ರ ಖುಲಾಸೆಗೊಂಡಿದ್ದು, ನಾಲ್ಕನೇ ಆರೋಪಿಯಾಗಿದ್ದ ನಿರಂಜನ್ ಭಟ್ ತಂದೆ ಶ್ರೀನಿವಾಸ್ ಭಟ್ ಅನಾರೋಗ್ಯದಿಂದ ಮೃತಪಟ್ಟಿದ್ದರು.
ಘಟನೆ ಹಿನ್ನೆಲೆ…
ಉದ್ಯಮಿ ಭಾಸ್ಕರ್ ಶೆಟ್ಟಿ 2016 ರ ಜುಲೈ 28 ರಂದು ಉಡುಪಿಯ ಇಂದ್ರಾಳಿಯಲ್ಲಿರುವ ತಮ್ಮ ಮನೆಯಿಂದ ನಾಪತ್ತೆಯಾಗಿದ್ದರು. ಎಂಟು ದಿನಗಳ ಬಳಿಕ ಮಣಿಪಾಲ ಪೊಲೀಸರು ಅವರ ಪತ್ನಿ ಮತ್ತು ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಭಾಸ್ಕರ್ ಶೆಟ್ಟಿ ಕೊಲೆ ವಿಚಾರ ಬಹಿರಂಗಗೊಂಡಿತ್ತು. ಆರೋಪಿಗಳು 2016ರ ಜು.28ರಂದು ಇಂದ್ರಾಳಿಯ ಮನೆಯಲ್ಲಿ ಭಾಸ್ಕರ್ ಶೆಟ್ಟಿಯನ್ನು ಕೊಲೆ ಮಾಡಿ, ಬಳಿಕ ಮೃತದೇಹವನ್ನು ನಂದಳಿಕೆಯಲ್ಲಿರುವ ನಿರಂಜನ ಭಟ್ ಮನೆಯಲ್ಲಿನ ಹೋಮ ಕುಂಡದಲ್ಲಿ ಹಾಕಿ ಸುಟ್ಟಿದ್ದರು.
ಜು.31ರಂದು ಭಾಸ್ಕರ್ ಶೆಟ್ಟಿ ತಾಯಿ ತನ್ನ ಮಗ ನಾಪತ್ತೆಯಾಗಿರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ಕೈಗೆತ್ತಿಕೊಂಡ ಪೊಲೀಸರು ಆ.7ರಂದು ಪತ್ನಿ ರಾಜೇಶ್ವರಿ ಹಾಗೂ ಮಗ ನವನೀತ್ ನನ್ನು ಮತ್ತು ಆ.8ರಂದು ನಿರಂಜನ್ ಭಟ್ ನನ್ನು ಪೊಲೀಸರು ಬಂಧಿಸಿದ್ದರು.
ಪ್ರಾಸಿಕ್ಯೂಶನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಾಂತರಾಮ್ ಶೆಟ್ಟಿ ವಾದ ಮಂಡಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿಗೆ ಜಾಮೀನು ದೊರೆತರೆ, ಮಗ ನವನೀತ್ ಶೆಟ್ಟಿ ಹಾಗೂ ನಂದಳಿಕೆಯ ಜೋತಿಷ್ಯ ನಿರಂಜನ್ ಭಟ್ ಬೆಂಗಳೂರು ಜೈಲಿನಲ್ಲಿದ್ದಾರೆ.
Comments are closed.