ಕರಾವಳಿ

ಕೋವಿಡ್ 3ನೇ ಅಲೆಯು ಮಕ್ಕಳಿಗೆ ಬಾಧಿಸದಂತೆ ಮುಂಜಾಗ್ರತಾ ಕ್ರಮ ಅತ್ಯಗತ್ಯ : ಡಾ| ಕುಮಾರ್

Pinterest LinkedIn Tumblr

ಮಂಗಳೂರು ಜೂನ್ 06 : ಕೋವಿಡ್ 3ನೇ ಅಲೆಯು ಮಕ್ಕಳಿಗೆ ಬಾಧಿಸದಂತೆ ಅಗತ್ಯವಿರುವ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ| ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಜಿಲ್ಲಾ ಪಂಚಾಯತ್‍ನ ಕಚೇರಿ ಸಭಾಂಗಣದಲ್ಲಿ ಕೋವಿಡ್ 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋವಿಡ್ 3 ನೇ ಅಲೆಯು ಕೋವಿಡ್ ನಿರೋಧಕ ಚುಚ್ಚುಮದ್ದು ಹೊಂದದೇ ಇರುವ ಮಕ್ಕಳನ್ನು ಬಾಧಿಸುವ ಸಾಧ್ಯತೆಗಳಿವೆ, ತಜ್ಞರ ಅಭಿಪ್ರಾಯವೂ ಸಹ ಇದಾಗಿದ್ದು ಈ ಹಿನ್ನಲೆಯಲ್ಲಿ ಕೋರೊನಾ ಸೋಂಕು ಮಕ್ಕಳಿಗೆ ಹರಡದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಕೋರೋನಾ ಸೋಂಕಿನಿಂದ ದೂರವಿರಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಪೋಷಕರಿಗೆ ಹಾಗೂ ಮಕ್ಕಳಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.

ಮಕ್ಕಳ ಸಂರಕ್ಷಣೆಗೆ ಸಂಬಂಧಿಸದಂತೆ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಪಾಲನಾ ಕೇಂದ್ರಗಳಲ್ಲಿರುವ ಮಕ್ಕಳ ಹೆಸರನ್ನು ಒಳಗೊಂಡ ವಿವರ, ಕೋವಿಡ್‍ನಿಂದ ತಂದೆತಾಯಿ ಕಳೆದುಕೊಂಡವರು ಹಾಗೂ ಏಕಪೋಷಕರ ಮಗುವಿನ ಸಮಗ್ರ ಮಾಹಿತಿಯನ್ನು ಕ್ರೋಢಿಕರಿಸಬೇಕು, ಅಂತಹ ಮಕ್ಕಳ ಸ್ಥಿತಿಗತಿ ಅವರ ಶಿಕ್ಷಣ, ಮನಸ್ಥಿತಿಯನ್ನು ತಿಳಿದು ಮಕ್ಕಳಿಗೆ ಏನೆಲ್ಲಾ ಸಹಕಾರ ನೀಡಬೇಕು ಎಂಬ ಬಗ್ಗೆ ಮಾಹಿತಿ ಹೊಂದಿರಬೇಕು ಎಂದರು.

ಪೋಷಕರು ಸಹ ಮಕ್ಕಳ ಸುರಕ್ಷತೆ ಬಗ್ಗೆ ಎಚ್ಚರ ವಹಿಸಬೇಕು ಎಂದ ಅವರು ಮಕ್ಕಳು ಮನೆಯಿಂದ ಹೊರ ಹೋಗದಂತೆ ನೋಡಿಕೊಳ್ಳುವುದರ ಜೊತೆಗೆ ಕೋವಿಡ್ ಮಾರ್ಗಸೂಚಿಗಳನ್ನು ಚಾಚು ತಪ್ಪದೇ ಪಾಲಿಸುವಂತೆ ಕ್ರಮವಹಿಸಬೇಕು ಎಂದರು.

ಕೋರೊನಾ ಸೋಂಕಿನ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು ಜಾಗೃತಿ ಮೂಡಿಸುವ ಕರಪತ್ರವನ್ನು ಪ್ರತೀ ಮನೆ ಮನೆಗೆ ತಲುಪಿಸುವ ಕೆಲಸವಾಗಬೇಕು ಎಂದರು.

ಮುಂದಿನ ದಿನಗಳಲ್ಲಿ ಮಕ್ಕಳಿಗೂ ಕೋರೊನಾ ನೀರೋಧಕ ಚುಚ್ಚುಮದ್ದನ್ನು ನೀಡುವ ಸಾಧ್ಯತೆ ಇರುವ ಹಿನ್ನಲೆ ಅವರಿಗೆ ಸುವ್ಯವಸ್ಥಿತವಾಗಿ ನೀಡಲು ಯೋಜನೆ ರೂಪಿಸಬೇಕು ಎಂದರು.

ಜಿಲ್ಲೆಯ ಕೋರೊನಾ ಸೋಂಕಿತ ಮಕ್ಕಳ ವರದಿಯನ್ನು ಪ್ರತಿದಿನ ನೀಡಬೇಕು ಎಂದ ಅವರು ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸೋಂಕು ಪೀಡಿತ ಮಕ್ಕಳ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ಕ್ಷೇಮವನ್ನು ವಿಚಾರಿಸಬೇಕು ಎಂದರು.

ವಿಶೇಷ ಚೇತನ ಮಕ್ಕಳ ಮಾಹಿತಿಯನ್ನು ಪ್ರತ್ಯೇಕವಾಗಿ ಕ್ರೂಢೀಕರಿಸಬೇಕು. ಇವರುಗಳ ಕಾಳಜಿಯನ್ನು MRW ಹಾಗೂ VRW ರವರುಗಳು ಮಾಡಬೇಕು ಎಂದ ಅವರು ಶಿಶು ಅಭಿವೃದ್ಧಿ ಅಧಿಕಾರಿಗಳು ಈ ಸಂಬಂಧ ತಾಲೂಕು ಮಟ್ಟದಲ್ಲಿಯೂ MRW ಹಾಗೂ VRW ಗಳೊಂದಿಗೆ ಸಭೆಯನ್ನು ನಡೆಸಬೇಕು ಎಂದು ಸೂಚನೆ ನೀಡಿದರು.

18 ವರ್ಷ ಮೇಲ್ಪಟ್ಟ ವಿಶೇಷ ಚೇತನರು ಹಾಗೂ ಎಂಡೋಸಲ್ಫಾನ್ ಪೀಡಿತರೆಲ್ಲರಿಗೂ ಕೋರೋನಾ ನಿರೋಧಕ ಚುಚ್ಚು ಮದ್ದು ನೀಡುವ ಕೆಲಸವಾಗಬೇಕು ಎಂದ ಅವರು ಬೆಡ್‍ರೀಡನ್ ನಲ್ಲಿರುವವರಿಗೆ ಮನೆಗಳಿಗೆ ಹೋಗಿ ಚುಚ್ಚುಮದ್ದು ನೀಡುವ ಕೆಲಸವಾಗಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್‍ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಲ್ಲೇ ಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದೇರ್ಶಕ ಪಾಪಬೋವಿ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.