
ಮಂಗಳೂರು ಗ್ರಾಮೀಣ ಭಾಗದಲ್ಲಿ ತ್ಯಾಜ್ಯವನ್ನು ಸಂಗ್ರಹಿಸುವಾಗಲೇ ಹಸಿ ಹಾಗೂ ಒಣ ತ್ಯಾಜ್ಯ ಬೇರ್ಪಡಿಸಿ ಅವುಗಳನ್ನು ವೈಜ್ಞಾನಿಕವಾಗಿ ಹಸಿಕಸದಿಂದ ಗೊಬ್ಬರ ಹಾಗೂ ಒಣಕಸದಿಂದ ಮರು ಉತ್ಪಾದನೆಮಾಡುವುದು ಒಳಿತು ಎಂದು ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಅವರು ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ (ಗ್ರಾ) ಮಿಷನ್ ಅಡಿಯಲ್ಲಿ ಎಂ.ಆರ್. ಎಫ್ ಘಟಕ ಅನುಷ್ಠಾನಗೊಳಿಸುವ ಬಗ್ಗೆ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡುವುದರಿಂದ ಜನರು ಉತ್ತಮ ಆರೋಗ್ಯ ಹೊಂದುವುದರ ಜೊತೆಗೆ ಪ್ರಾಣಿಗಳು ಸಹ ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗುತ್ತದೆ. ಕಸ ಸಂಗ್ರಹದ ಪ್ರಾರಂಭಿಕ ಹಂತದಲ್ಲಿಯೇ ಹಸಿ ಹಾಗೂ ಒಣ ಕಸ ಬೇರ್ಪಡಿಸಿ ಪಡೆದು ಹಸಿ ಕಸದಿಂದ ಗೊಬ್ಬರ ತಯಾರಿಕೆ ಒಣ ಕಸದಿಂದ ವಸ್ತುಗಳ ಮರು ಉತ್ಪಾದನೆ ಮಾಡುವುದರಿಂದ ಗ್ರಾಮ ಪಂಚಾಯತಿಗಳಿಗೆ ಲಾಭ ಉಂಟಾಗುತ್ತದೆ ಎಂದರು.
ರಾಜ್ಯದಲ್ಲಿಯೇ ಪ್ರಥಮವಾಗಿ ಬೆಂಗಳೂರಿನ ಗ್ರಾಮೀಣ ಭಾಗದ ಜಿಗಣಿಯಲ್ಲಿ ಒಣ ಕಸಗಳಾದ ಪ್ಲಾಸ್ಟಿಕ್, ರಟ್ಟು, ಗಾಜಿನ ಬಾಟಲ್‍ಗಳು ಸೇರಿದಂತೆ ಮತ್ತಿತರ ವಸ್ತುಗಳ ಮರು ಉತ್ಪಾದನೆ ಮಾಡುವುದರಿಂದ ಒಣ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡುವುದರ ಜೊತೆಗೆ ಆರ್ಥಿಕ ಲಾಭವನ್ನು ಸಹ ಪಡೆಯುವ ಕಾರ್ಯ ಉತ್ತಮವಾಗಿ ಆಗುತ್ತದೆ ಎಂದರು.
ರಾಜ್ಯ ಸರಕಾರ ಪೈಲೆಟ್ ಕಾರ್ಯಕ್ರಮವಾಗಿ ರಾಮನಗರ, ಉಡುಪಿ, ಬಳ್ಳಾರಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಎಂ.ಆರ್.ಎಫ್ ಘಟಕಗಳನ್ನು ಸ್ಥಾಪನೆ ಮಾಡಲು ಸರಕಾರದಿಂದ ಮಂಜೂರಾತಿ ನೀಡಲಾಗಿದೆ ಎಂದ ಅವರು ನಮ್ಮ ಜಿಲ್ಲೆಯಲ್ಲಿ ಶೀಘ್ರವಾಗಿ ಈ ಕಾರ್ಯವನ್ನು ಪ್ರಾರಂಭಿಸಬೇಕು ಎಂದು ತಿಳಿಸಿದರು.
ಸಂಸದ ನಳೀನ್ ಕುಮಾರ್ ಕಟೀಲ್ ಕಟೀಲ್ ಮಾತನಾಡಿ ಈಗಾಗಲೇ ಜಿಲ್ಲೆಯ ಗಂಜೀಮಠ ಗ್ರಾಮಪಂಚಾಯತ್ ವ್ಯಾಪ್ತಿಯ ಉಳಿಪಾಡಿ ಗ್ರಾಮದಲ್ಲಿ 2.50 ಕೋಟಿ ವೆಚ್ಚದಲ್ಲಿ ಎಂ.ಆರ್.ಆಫ್. ಘಟಕದಿಂದ ನಿರ್ಮಾಣ ಮಾಡಲು ಜಿಲ್ಲೆಗೆ ಮಂಜೂರಾಗಿರುವ ಯೋಜನೆಯ ಬಗ್ಗೆ ಜನರಲ್ಲಿ ತ್ಯಾಜ್ಯ ನಿರ್ವಾಹಣೆ ಘಟಕದಿಂದ ಪರಿಸರಕ್ಕೆ ಹಾಗೂ ಜನರ ಆರೋಗ್ಯಕ್ಕೆ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ ಎಂಬುದನ್ನು ಮನದಟ್ಟು ಮಾಡಬೇಕು.
ಸ್ಥಳೀಯ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು ಸೇರಿದಂತೆ 50 ಕ್ಕೂ ಹೆಚ್ಚು ಜನರನ್ನು ಜಿಗಣಿಯ ಎಂ.ಆರ್.ಎಫ್ ಘಟಕಕ್ಕೆ ಹಾಗೂ ನಿಟ್ಟೆಯ ಘಟಕಕ್ಕೆ ಅಧ್ಯಯನ ಪ್ರವಾಸ ಕರೆದುಕೊಂಡು ಹೋಗುವ ಕೆಲಸ ಆಗಬೇಕು ಎಂದರು.
ಗ್ರಾಮ ಮಟ್ಟದಲ್ಲಿ ಸ್ಥಳೀಯ ಜನರ ಸಭೆಯನ್ನು ನಡೆಸುವುದರ ಜೊತೆಗೆ ಈ ಘಟಕದಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂಬ ಬಗ್ಗೆ ಜಾಗೃತಿ ಮೂಡಿಸುವ ಕೆಲಸವೂ ಆಗಬೇಕು ಎಂದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಮಾತನಾಡಿ ಸರಕಾರ ಯಾವುದೇ ಯೋಜನೆಗಳನ್ನು ತರುವುದು ಜನರ ಉಪಯೋಕ್ಕಾಗಿ ಮಾಡುತ್ತದೆ . ಜನರು ಇದಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದು ಅತ್ಯಗತ್ಯ ಎಂದರು.
ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕುಮಾರ್ ಮಾತನಾಡಿ ಈಗಾಗಲೇ ಜಿಲ್ಲೆಯ ಗಂಜೀಮಠದ ಉಳಿಪಾಡಿಯಲ್ಲಿ ಎಂ.ಆರ್.ಎಫ್. ಘಟಕ ಪ್ರಾರಂಭಿಸಲು ಕೆ.ಐ.ಡಿ.ಬಿ 2.04 ಎಕರೆ ಜಮೀನನ್ನು ನೀಡಲಾಗಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಈ ಯೋಜನೆಯು ಮಂಜೂರಾಗಿದ್ದು ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದರು.
ಈ ಘಟಕದ ಪ್ರಾರಂಭದಿಂದ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಂಗ್ರಹವಾಗುವ ಒಣ ಕಸವನ್ನು ಮರು ಉತ್ಪಾದನೆ ಮಾಡುವುದರೊಂದಿಗೆ ತ್ಯಾಜ್ಯ ನಿರ್ವಹಣೆಯನ್ನು ಉತ್ತಮ ರೀತಿಯಲ್ಲಿ ಮಾಡಲು ಸಾಧ್ಯವಾಗುತ್ತದೆ ಅಲ್ಲದೇ ಸ್ಥಳೀಯ ಜನರಿಗೆ ಉದ್ಯೋಗ ಲಭಿಸಲಿದೆ ಎಂದರು.
ಸಭೆಯಲ್ಲಿ ಶಾಸಕ ಭರತ್ ವೈ ಶೆಟ್ಟಿ, ರಾಮಕೃಷ್ಣ ಮಿಷನ್ ನ ಎಕಗಮ್ಯಾನಂದ ಸ್ವಾಮೀಜಿ ಗ್ರಾಮ ಪಂಚಾಯತ್ ಅಧ್ಯಕ್ಷರು , ಉಪಾಧ್ಯಕ್ಷರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.
Comments are closed.