
ಮಂಗಳೂರು, ಮೇ.26 : ಅಂದಾಜು 55 ವರ್ಷಗಳ ಹಿಂದೆ ನಿರ್ಮಾಣಗೊಂಡ ಭಾರೀ ವಿವಾದದಲ್ಲಿದ್ದ ನಗರದ ಕೇಂದ್ರ ಮಾರುಕಟ್ಟೆ ಕಟ್ಟಡ (ಮಂಗಳೂರು ಸೆಂಟ್ರಲ್ ಮಾರ್ಕೆಟ್ನ ಹಳೆ ಕಟ್ಟಡ)ವನ್ನು ಬುಧವಾರ ನೆಲಸಮ ಮಾಡಲಾಯಿತು.
ಮಂಗಳೂರು ಮಹಾನಗರ ಪಾಲಿಕೆಯ ನಿರ್ದೇಶನದಂತೆ ಬುಧವಾರ ಪೂರ್ವಾಹ್ನ 11 ಗಂಟೆಯ ಸುಮಾರಿಗೆ ಕಟ್ಟಡವನ್ನು ನೆಲಸಮ ಮಾಡುವ ಕಾರ್ಯ ಶುರು ಆಗಿದೆ. ಅದು ಸಂಜೆಯ ತನಕವೂ ಮುಂದುವರಿಯಿತು. ಮಾರುಕಟ್ಟೆಯ ಒಳಗೆ ಯಾರೂ ಪ್ರವೇಶಿಸದಂತೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಪೊಲೀಸ್ ಬಂದೋಬಸ್ತ್ ಕೂಡಾ ಇತ್ತು. ಜೆಸಿಬಿ ಮೂಲಕ ಮಾರುಕಟ್ಟೆಯ ಒಳಗಿನ ಕಟ್ಟಡವನ್ನು ಕೆಡವಲಾಯಿತು.

(ಸೆಂಟ್ರಲ್ ಮಾರ್ಕೆಟ್ನ ಹಳೆ ಕಟ್ಟಡ)
ಕಳೆದ ವರ್ಷ ಕೊರೊನಾ ಸೋಂಕಿನ ವೇಳೆ ವ್ಯಾಪಾರ-ವಹಿವಾಟು ಸ್ಥಗಿತವಾದ ಬಳಿಕ ಸೆಂಟ್ರಲ್ ಮಾರ್ಕೆಟ್ ಭಾಗಶಃ ಮುಟ್ಟಲ್ಪಟ್ಟಿತ್ತು. ಹಾಗಾಗಿ ಹಳೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸುವ ಸಲುವಾಗಿ ಈ ಕಾರ್ಯಾಚರಣೆ ಮಾಡಲಾಗಿದೆ ಎನ್ನಲಾಗಿದೆ.
ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಗೊಂಡ ಬಳಿಕ ಸೆಂಟ್ರಲ್ ಮಾರುಕಟ್ಟೆಯ ಹಳೆಯ ಕಟ್ಟಡವನ್ನು ಕೆಡವಿ ನೂತನ ಮಾರುಕಟ್ಟೆ ಸಂಕೀರ್ಣ ನಿರ್ಮಿಸಲು ಮಂಗಳೂರು ಮಹಾನಗರ ಪಾಲಿಕೆ ವರ್ಷದ ಹಿಂದೆ ನಿರ್ಧರಿಸಿತ್ತು.
ಅದರಂತೆ ಕೋವಿಡ್-19 ಪ್ರಥಮ ಅಲೆಯ ಸಂದರ್ಭದಲ್ಲಿ ವ್ಯಾಪಾರಿಗಳನ್ನು ಬೈಕಂಪಾಡಿಯ ಎಪಿಎಂಸಿ ಯಾರ್ಡ್ಗೆ ಸ್ಥಳಾಂತರಿಸಲಾಗಿತ್ತು. ಕಳೆದ ಒಂದು ವರ್ಷದಿಂದ ಬಂದ್ ಆಗಿದ್ದ ಸೆಂಟ್ರಲ್ ಮಾರುಕಟ್ಟೆ ಈಗ ಸಂಪೂರ್ಣವಾಗಿ ನೆಲಸಮವಾಗಿದೆ. ಇದರಿಂದ ಹೊಸ ಸಂಕೀರ್ಣ ನಿರ್ಮಿಸಲು ಹಾದಿ ಸುಗಮವಾಗಿದೆ.

(ಹೊಸ ಕಟ್ಟಡದ ವಿನ್ಯಾಸ)
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಮನಪ ಆಯುಕ್ತರ ಅಕ್ಷಯ್ ಶ್ರೀಧರ್, ಸೆಂಟ್ರಲ್ ಮಾರುಕಟ್ಟೆಯ ಕಟ್ಟಡವನ್ನು ಕೆಡಹಿ ಹೊಸ ವಿನ್ಯಾಸದ ಕಟ್ಟಡ ನಿರ್ಮಿಸುವ ಯೋಜನೆಯನ್ನು ಮೂರು ವರ್ಷದ ಹಿಂದೆ ಕೈಗೆತ್ತಿಕೊಳ್ಳಲಾಗಿತ್ತು. ವರ್ಷದ ಹಿಂದೆ ಪಾಲಿಕೆಯು ಪರಿಷತ್ತಿನಲ್ಲಿ ಚರ್ಚೆ ನಡೆದು ನೂತನ ಕಟ್ಟಡ ನಿರ್ಮಾಣದ ಯೋಜನೆಗೆ ಚಾಲನೆ ನೀಡಲಾಗಿತ್ತು. “ಸೆಂಟ್ರಲ್ ಮಾರ್ಕೆಟ್ನ ಹಳೆ ಕಟ್ಟಡವನ್ನು ಕೆಡವಲು ಮನಪ ಕೌನ್ಸಿಲ್ನಲ್ಲಿ ನಿರ್ಣಯಿಸಲಾಯಿತು. ಸ್ಮಾರ್ಟ್ ಸಿಟಿ ಯೋಜನೆಯಡಿ ಹೊಸ ಮಾರುಕಟ್ಟೆ ನಿರ್ಮಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಕಳೆದ ವರ್ಷ ಏಪ್ರಿಲ್ 22 ರಂದು ಈ ಯೋಜನೆಗೆ ಸರ್ಕಾರ ಅನುಮೋದನೆ ನೀಡಿತ್ತು” ಎಂದು ಹೇಳಿದ್ದಾರೆ.
ಈ ನಡುವೆ ಕೆಲವು ವ್ಯಾಪಾರಿಗಳು ಪಾಲಿಕೆಯ ವಿರುದ್ಧ ಹೈಕೋರ್ಟ್ ಮೆಟ್ಟಲೇರಿದರೂ ನೂತನ ಕಟ್ಟಡ ನಿರ್ಮಾಣ ಯೋಜನೆಗೆ ತಡೆ ಒಡ್ಡುವುದು ಸಾಧ್ಯ ಆಗಲಿಲ್ಲ. ಹೊಸ ಯೋಜನೆಗೆ ಸರಕಾರ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಹಳೆಯ ಕಟ್ಟಡವನ್ನು ನೆಲಸಮ ಮಾಡುವ ಕಾರ್ಯ ನಡೆದಿದೆ ಎಂದು ಅಯುಕ್ತರು ತಿಳಿಸಿದರು.
Comments are closed.