ಕರಾವಳಿ

ಚಾರ್ಮಾಡಿಯ ಮೃತ್ಯುಂಜಯ ನದಿ ತಟದಲ್ಲಿ ಅಕ್ರಮ ಮರಳು ದಂಧೆ! : ಪೋಲಿಸರ ಬೆಂಬಲ ಆರೋಪ!

Pinterest LinkedIn Tumblr

ಮಂಗಳೂರು : ಚಾರ್ಮಾಡಿ ಗ್ರಾಮದ ಪರ್ಲಾಣಿ ಎಂಬಲ್ಲಿ ಹರಿಯುವ ಮೃತ್ಯುಂಜಯ ನದಿ ತಟದಿಂದ ಸರಕಾರದ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ದಿನನಿತ್ಯ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಕೇಳಿ ಬರುತ್ತಿವೆ.

ಹೂಳೆತ್ತುವ ನೆಪದಲ್ಲಿ ನಡೆಯುತ್ತಿದೆಯಾ ಅಕ್ರಮ ದಂಧೆ!

ಮೃತ್ಯುಂಜಯ ನದಿತಟದ ಸೇತುವೆಯಿಂದ 3 ಕಿ.ಮೀ. ದೂರದ ಕೊಟ್ರಬೆಟ್ಟು ಎಂಬಲ್ಲಿ ಇತ್ತೀಚೆಗೆ ಸುರಿದ ಮಳೆಗೆ ಬಾರಿ ಪ್ರಮಾಣದಲ್ಲಿ ಮರಳು ಸಂಗ್ರಹವಾಗಿದ್ದು ಇಲ್ಲಿ ಹಗಲಿಡಿ ನದಿಯ ಹೂಳೆತ್ತುವ ನೆಪದಲ್ಲಿ ಮರಳು ರಾಶಿ ಹಾಕುವ ಕೆಲಸ ನಡೆಯುತ್ತಿದ್ದು ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ಸಾಗಾಟ ನಡೆಯುತ್ತದೆ.

ಮೃತ್ಯುಂಜಯನ ಒಡಲಿನಲ್ಲಿ ಹಿಟಾಚಿ ಸದ್ದು!

ಹಗಲಿನಲ್ಲೂ ಕಳೆದ ಒಂದು ವಾರದಿಂದ ನಿತ್ಯ ನಿರಂತರವಾಗಿ 3 ಹಿಟಾಚಿ, 6 ಟಿಪ್ಪರ್ ಗಳು ನದಿಯಲ್ಲಿರುತ್ತವೆ. ಕೆಲವೊಂದು ಮಾಹಿತಿಯ ಪ್ರಕಾರ 1.ಕಿಮೀ ಹೂಳೆತ್ತುವ ಕಾರ್ಯಕ್ಕೆ 1 ಹಿಟಾಚಿ ಬಳಕೆ ಮಾಡಲು ಪಂಚಾಯತ್ ಸದಸ್ಯರೋರ್ವರು ಕಾನೂನುಗಳನ್ನು ಗಾಳಿಗೆ ತೂರಿ ಸ್ವಯಂ ಅವಕಾಶ ಕಲ್ಪಿಸಿದ್ದು ಈ ಸ್ಥಳವನ್ನು ಬಿಟ್ಟು ಇದೀಗ ಸದ್ರಿ ಸ್ಥಳದಿಂದ ಸರಿಸುಮಾರು 3 ಕಿ.ಮೀ ದೂರದಲ್ಲಿರುವ ಕೊಟ್ರಬೆಟ್ಟು ಎಂಬ ಸ್ಥಳದಿಂದ ಮರಳುಸಾಗಾಟ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನವನಿರ್ಮಾಣವಾದ ರಸ್ತೆಗಳು ಮರಳುಗಣಿಗಾರಿಕೆಗೆ ಬಲಿ!

ಕಳೆದ ವರ್ಷ ಸುರಿದ ಭಾರಿ ಮಳೆಗೆ ಸೇತುವೆ ಸಹಿತ ರಸ್ತೆಗಳು ಕೊಚ್ಚಿಹೋಗಿದ್ದು ಇದಕ್ಕಾಗಿ ಸಾರ್ವಜನಿಕ ಬಳಕೆಗಾಗಿ ಕಳೆದ ವರ್ಷ ಕಾಂಕ್ರೀಟ್ ರಸ್ತೆಯನ್ನು ಮಾಡಿದ್ದು ಇದೀಗ ಮರಳು ಸಾಗಾಟದ ಲಾರಿಗಳ ನಿರಂತರ ಓಡಾಟದಿಂದ ಮತ್ತೆ ರಸ್ತೆಗಳು ಹದಗೆಡುವ ಸಾಧ್ಯತೆಗಳಿವೆ ಆದ್ದರಿಂದ ಇಂತಹ ಅಕ್ರಮ ಓಡಾಟಕ್ಕೆ ಕಡಿವಾಣ ಹಾಕಬೇಕಾದ ಅಗತ್ಯತೆ ಇದೆ.

ಅಕ್ರಮ ಮರಳುಗಾರಿಕೆಗೆ ಸ್ಥಳೀಯ ಆಡಳಿತದ ಕೈವಾಡ ಶಂಕೆ!

ಈ ಅಕ್ರಮ ಮರಳುಕೋರರ ಬೆನ್ನಿಗೆ ಇಲ್ಲಿನ ಸ್ಥಳೀಯಾಡಳಿತ ಸಹಕರಿಸುತ್ತಿದ್ದು ಇಲ್ಲಿನ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಇಲ್ಲಿನ ಪಂಚಾಯತ್ ಸದಸ್ಯರುಗಳ ಕುಮ್ಮಕ್ಕಿನಿಂದ ಈ ಅಕ್ರಮ ನಡೆಯುತ್ತಿದೆ ಎಂಬುದು ಇಲ್ಲಿನ ಸ್ಥಳೀಯರ ಅಭಿಪ್ರಾಯವಾಗಿದೆ.

ಲಾಕ್ ಡೌನ್ ಸೀಲ್ಡೌನ್ ನೆಪದಲ್ಲಿ ಜನರನ್ನು ಯಾಮಾರಿಸುತ್ತಿದ್ದಾರೆಯೋ ಇಲ್ಲಿನ ಜನಪ್ರತಿನಿಧಿಗಳು!

ಕಳೆದ ಕೆಲ ದಿನಗಳಿಂದ ರಾಜ್ಯಸರಕಾವು ಕಟ್ಟುನಿಟ್ಟಾಗಿ ಲಾಕ್ ಡೌನ್ ಘೋಷಣೆ ಮಾಡಿದ್ದು ಇಲ್ಲಿನ ಸ್ಥಳೀಯಾಡಳಿತ ತರಾತುರಿಯಲ್ಲಿ ಇಡೀ ಗ್ರಾಮವನ್ನೇ ಸಿಲ್ಡೌನ್ ಮಾಡುವುದಾಗಿ ಘೋಷಿಸಿ ಪ್ರಚಾರ ನಡೆಸಿದ ಬೆನ್ನಲ್ಲೇ ಅಧಿಕಾರಿಯೋಬ್ಬರ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇದನ್ನು ಸ್ವಯಂ ಲಾಕ್ ಡೌನ್ ಎಂಬ ನಾಮಾಂಕಿತಕ್ಕೆ ಬದಲಾವಣೆ ಮಾಡಲಾಗಿದೆ ಎಂಬುದು ಕೇಳಿಬರುತ್ತಿದೆ ಆದರೆ ಇದೇ ಸ್ವಯಂ ಘೋಷಿತ ಲಾಕ್ ಡೌನ್ ಘೋಷಿತ ಸ್ಥಳದಿಂದಲೇ ರಾತೋ ರಾತ್ರಿ ಅಕ್ರಮವಾಗಿ ಮರಳು ಸಾಗಾಟ ಎಗ್ಗಿಲ್ಲದೆ ಸಾಗುತ್ತಿದೆ.

ಚಾರ್ಮಾಡಿ ಘಾಟಿಯಲ್ಲಿ ಸಾಗುತ್ತಿದೆ ಅಕ್ರಮ ಮರಳು ಸಾಗಾಟದ ಘನವಾಹನಗಳು!

ಲಾರಿಗಳಲ್ಲಿ ಸಾಮರ್ಥ್ಯಕ್ಕಿಂತಲೂ ಅಧಿಕ ಮರಳುಗಳನ್ನು ತುಂಬಿಕೊಂಡು ಚಾರ್ಮಾಡಿ ಘಾಟಿ ರಸ್ತೆಯ ಮೂಲಕ ಚಿಕ್ಕಮಗಳೂರು – ಮೂಡಿಗೆರೆ – ಬೇಲೂರು ಕಡೆಗೆ, ಚಿಬಿದ್ರೆ, ಉಜಿರೆ ಕಡೆಗೆ ಅಕ್ರಮವಾಗಿ ಮರಳು ಸಾಗಾಟವಾಗುತ್ತಿದೆ.

ಮರಳುಗಾರಿಕೆಗೆ ಪೋಲಿಸರ ಸಾಥ್?

ಚಾರ್ಮಾಡಿಯ ಗೇಟಿನಿಂದ ರಾತ್ರಿಯಿಡಿ ಮರಳು ತುಂಬಿದ ವಾಹನಗಳು ಸಂಚಾರಿಸುತ್ತಿದ್ದು ಪೋಲಿಸ್ ಇಲಾಖೆ ಆಕ್ರಮ ಮರಳುಗಾರಿಕೆಯಲ್ಲಿ ಭಾಗಿಯಾಗಿದೆ ಎಂಬುವುದು ಇಲ್ಲಿನವರ ಆರೋಪ.
ಈ ಬಗ್ಗೆ ಶಾಸಕರು, ಸಂಬಂಧಪಟ್ಟ ಪಂಚಾಯತ್ ನ ಪಿ.ಡಿ.ಓ., ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಇಂತಹ ಅಕ್ರಮಕ್ಕೆ ಕಡಿವಾಣ ಹಾಕಬೇಕಾಗಿದೆ. ಇಲ್ಲವಾದರೆ ಊರವರೇ ಪ್ರತಿಭಟನೆಗೆ ಮುಂದಾಗುವುದರಲ್ಲಿ ಅನುಮಾನವಿಲ್ಲ.

Comments are closed.