ಕರಾವಳಿ

ಮಂಗಳೂರು ವಿಮಾನ ದುರಂತಕ್ಕೆ 11 ವರ್ಷಗಳು : ಮಡಿದವರ ಸ್ಮಾರಕಕ್ಕೆ ಜಿಲ್ಲಾಡಳಿತದಿಂದ ಗೌರವಾರ್ಪಣೆ

Pinterest LinkedIn Tumblr

ಮಂಗಳೂರು, ಮೇ 22: ಮಂಗಳೂರು ವಿಮಾನ ದುರಂತ ಸಂಭವಿಸಿ ಇಂದಿಗೆ 11 ವರ್ಷಗಳು. ದೇಶದ ನಾಗರಿಕ ವಿಮಾನಯಾನ ರಂಗ ಎಂದೂ ಮರೆಯದ ಮಂಗಳೂರು ವಿಮಾನ ದುರಂತ ಸಂಭವಿಸಿ ಇಂದಿಗೆ ಹನ್ನೊಂದು ವರ್ಷಗಳು ಪೂರ್ಣಗೊಂಡಿದೆ.

ಇಂದಿಗೆ ಸುಮಾರು 11 ವರ್ಷಗಳ ಹಿಂದೆ ಮಂಗಳೂರು ಘನಘೋರ ದುರಂತಕ್ಕೆ ಸಾಕ್ಷಿಯಾಗಿತ್ತು. ದುಬೈನಿಂದ ಬಂದ ಲೋಹದ ಹಕ್ಕಿ ಮಂಗಳೂರನ್ನು ಸ್ಪರ್ಶಿಸುತ್ತಲೇ ಪತನವಾಗಿ 158 ಮಂದಿ ದಾರುಣ ಸಾವನ್ನಪ್ಪಿದರು.

ಮಂಗಳೂರು ವಿಮಾನ ದುರಂತ ಸಂಭವಿಸಿ ಇಂದಿಗೆ 11 ವರ್ಷಗಳು ಸಂದ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತದ ವತಿಯಿಂದ ನಗರದ ಕೂಳೂರು ತಣ್ಣೀರು ಬಾವಿ ಬಳಿಯ ಉದ್ಯಾನವನದಲ್ಲಿ ದ.ಕ. ಜಿಲ್ಲಾಡಳಿತದ ವತಿಯಿಂದ ಶ್ರದ್ಧಾಂಜಲಿಯನ್ನು ಏರ್ಪಡಿಸಲಾಯಿತು.

ಕೂಳೂರಿನಲ್ಲಿರವ ಮಂಗಳೂರಿನ ವಿಮಾನ ದುರಂತದಲ್ಲಿ ಮಡಿದವರ ಸ್ಮಾರಕಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಉಪವಿಭಾಗಾಧಿಕಾರಿ ಮದನ್ ಮೋಹನ್, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಸೇರಿದಂತೆ ಹಲವರು ಪುಷ್ಪ ನಮನ ಸಲ್ಲಿಸಿ ಗೌರವಾರ್ಪಣೆ ಮಾಡಿದರು.

ಘನಘೋರ ದುರಂತಕ್ಕೆ ಸಾಕ್ಷಿಯಾದ ಮಂಗಳೂರು :

2010 ಮೇ 22ನೇ ತಾರೀಖು. ಅಂದು ಮುಂಜಾನೆ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನ ಮಂಗಳೂರು ವಾಯುಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆಯೇ ರನ್‌ವೇಯಲ್ಲಿ ನಿಲ್ಲಬೇಕಾದ ವಿಮಾನ ನೇರವಾಗಿ ಮುಂದಕ್ಕೆ ಚಲಿಸಿ ಸೂಚನಾ ಗೋಪುರ ಕಂಬಗಳಿಗೆ ಡಿಕ್ಕಿಯಾಗಿ ಆಳವಾದ ಪ್ರದೇಶಕ್ಕೆ ಬಿದ್ದು ಪತನವಾಗಿತ್ತು. ವಿಮಾನ ಬಿದ್ದ ತೀವ್ರತೆಗೆ ಸ್ಫೋಟವಾಗಿ 166 ಮಂದಿಯಲ್ಲಿ 158 ಮಂದಿ ಸುಟ್ಟು ಕರಲಾಗಿದ್ದರು.

ವಿಮಾನದ ಪೈಲಟ್, ಸಿಬ್ಬಂದಿ ಸಹಿತ 158 ಮಂದಿ ಮೃತರಾಗಿದ್ದರು. 135 ಮಂದಿ ವಯಸ್ಕರು, 19 ಮಕ್ಕಳು ಹಾಗೂ 6 ಮಂದಿ ಶಿಶುಗಳು, 6 ವಿಮಾನ ಸಿಬ್ಬಂದಿ ಸೇರಿ 166 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ 8 ಮಂದಿ ಬದುಕುಳಿದಿದ್ದರು.

ದುರ್ಘಟನೆಯಲ್ಲಿ ಮೃತದೇಹಗಳು ಸುಟ್ಟು ಕರಕಲಾದ್ದರಿಂದ 10 ಮಂದಿ ಮೃತರ ಗುರುತು ಪತ್ತೆ ಅಸಾಧ್ಯವಾಗಿತ್ತು. ಆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಗುರುತು ಸಿಗದ ಆ ಮೃತದೇಹಗಳನ್ನು ಕೂಳೂರು- ತಣ್ಣೀರುಬಾವಿ ಬಳಿ ಸರ್ವಧರ್ಮಗಳ ಶಾಸ್ತ್ರ ಪ್ರಕಾರ ಅಂತ್ಯ ಸಂಸ್ಕಾರ ನಡೆಸಿತ್ತು.

ಇದೀಗ ಪ್ರತೀ ವರ್ಷ ಮೇ 22ರಂದು ದ.ಕ. ಜಿಲ್ಲಾಡಳಿತದ ವತಿಯಿಂದ ಈ ಉದ್ಯಾನವನದಲ್ಲಿ ದುರಂತದ ಮೃತರ ನೆನಪಿನಲ್ಲಿ ಶ್ರದ್ಧಾಂಜಲಿಯನ್ನು ನಡೆಸಲಾಗುತ್ತಿದೆ. ಅದರಂತೆ ಇಂದು ಕೂಡ ವಿಮಾನ ದುರಂತದಲ್ಲಿ ಮಡಿದವರ ಸ್ಮಾರಕಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿ ಗೌರವಾರ್ಪಣೆ ಮಾಡಿದರು.

Comments are closed.