
ಮಂಗಳೂರು : ಕೋವಿಡ್ ಲಸಿಕೆಯ ಕುರಿತು ಕೇವಲ ರಾಜಕೀಯ ದುರುದ್ಧೇಶದಿಂದ ಅಪಪ್ರಚಾರ ಮಾಡಿರುವ ಕಾಂಗ್ರೇಸ್ ಮುಖಂಡರೇ ಇಂದಿನ ಈ ಪರಿಸ್ಥಿತಿಗೆ ಮೂಲ ಕಾರಣ ಎಂದು ಶಾಸಕ ವೇದವ್ಯಾಸ್ ಕಾಮತ್ ಕಿಡಿಕಾರಿದ್ದಾರೆ.
ಭಾರತದಲ್ಲಿ ಲಸಿಕೆ ಕಂಡುಹಿಡಿದ ಸಂದರ್ಭದಲ್ಲಿ ಗುಣಮಟ್ಟದ ಕುರಿತು ತಾವೇ ತಜ್ಞರಂತೆ ಬೇಕಾಬಿಟ್ಟಿಯಾಗಿ ಹೇಳಿಕೆ ನೀಡಿದ್ದ ಕಾಂಗ್ರೇಸ್ ಮುಖಂಡರು ಅದರ ಪರಿಣಾಮದ ಕುರಿತು ಆಲೋಚಿಸುವಷ್ಟು ಪ್ರಬುದ್ಧರಾಗಿಲ್ಲವೇ.
ಮೊದಲ ಹಂತದಲ್ಲಿ ಡಿ ಗ್ರೂಪ್ ನೌಕರರಿಗೆ ಲಸಿಕೆ ನೀಡಿದಾಗ ಪ್ರಧಾನಿ ಮೊದಲು ಲಸಿಕೆ ಪಡೆಯಬೇಕಿತ್ತು ಎನ್ನುವ ಕಾಂಗ್ರೇಸ್ ಮುಖಂಡರು ಪ್ರಧಾನಿ ಲಸಿಕೆ ಪಡೆದಾಗ ಜನತೆಗೆ ಲಸಿಕೆ ನೀಡದೆ ಪ್ರಧಾನಿ ಲಸಿಕೆ ಪಡೆಯುತ್ತಿದ್ದಾರೆ ಎಂದು ಅಪ್ರಬುದ್ಧರಂತೆ ಹೇಳಿಕೆ ನೀಡುತ್ತಿದ್ದಾರೆ. ಲಸಿಕೆಯ ಬಗ್ಗೆ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿ ಈಗ ತೇಪೆ ಹಚ್ಚುವ ಕೆಲಸ ಮಾಡುತಿದ್ದಾರೆ ಎಂದಿದ್ದಾರೆ.
ಭಾರತದ ಲಸಿಕೆಯನ್ನು ಬೇರೆ ದೇಶಗಳಿಗೆ ನೀಡಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಂದೋಲನ ಪ್ರಾರಂಭಿಸುವ ಕಾಂಗ್ರೇಸ್ ಮುಖಂಡರು ಜನರು ಲಸಿಕೆ ಪಡೆಯಲು ಹಿಂದೇಟು ಹಾಕಲು ಮೂಲ ಕಾರಣ ಯಾರೆಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಈ ದೇಶದಲ್ಲಿ ಲಸಿಕೆ ಕಂಡುಹಿಡಿದ ಸಂದರ್ಭದಲ್ಲಿ ರಾಜಕೀಯ ದುರುದ್ಧೇಶದಿಂದ ಕಾಂಗ್ರೇಸಿಗರು ಮಾಡಿದ ಅಪಪ್ರಚಾರದಿಂದ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತಿದ್ದರು. ಆ ಸಂದರ್ಭದಲ್ಲಿ ಲಸಿಕೆಯ ಸಿಂಧುತ್ವ ಕೊನೆಗೊಳ್ಳುವ ಮೊದಲು ಅನ್ಯ ಮಾರ್ಗವಿಲ್ಲದೆ ಬೇಡಿಕೆಯಿರುವ ದೇಶಗಳಿಗೆ ನೀಡಲಾಗಿದೆ. ಇದನ್ನು ಅನೇಕ ವೈದ್ಯರು ಒಪ್ಪಿಕೊಂಡಿದ್ದಾರೆ. ಇವೆಲ್ಲದರ ನೈತಿಕ ಹೊಣೆಗಾರಿಕೆಯಿಂದ ಕಾಂಗ್ರೇಸಿಗರು ಜನತೆಯ ಬಳಿ ಕ್ಷಮೆಯಾಚಿಸಬೇಕು ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಜನರನ್ನು ಲಸಿಕಾ ಕೇಂದ್ರಗಳಿಗೆ ತೆರಳದಂತೆ ವಿವಿಧ ರೀತಿಯ ಹೇಳಿಕೆಯನ್ನು ನೀಡಿ, ಸ್ವತಃ ಕಾಂಗ್ರೇಸ್ ಮುಖಂಡರು ಲಸಿಕೆ ಪಡೆದಿದ್ದಾರೆ. ಕಂಡವರ ಮಕ್ಕಳನ್ನು ಬಾವಿಗೆಸೆದು ಆಳ ನೋಡುವ ಬದಲು ತಾವೇ ಯಾಕೆ ಬಾವಿಗೆ ಹಾರಬಾರದು ಎಂದು ಶಾಸಕ ಕಾಮತ್ ಹೇಳಿದ್ದಾರೆ.
Comments are closed.