ಕರಾವಳಿ

ಟೂಲ್‌ಕಿಟ್ – ಹತಾಶ ಕಾಂಗ್ರೆಸ್‌ನಿಂದ ದೇಶದ ಪ್ರತಿಷ್ಠೆಗೆ ಧಕ್ಕೆ ತರುವ ಕಾರ್ಯತಂತ್ರ : ಕ್ಯಾ.ಕಾರ್ಣಿಕ್ ಆರೋಪ

Pinterest LinkedIn Tumblr

ಮಂಗಳೂರು, ಮೇ.20 : ರಾಜಕೀಯ ನೆಲೆ ಕಳೆದುಕೊಂಡು ಹತಾಶರಾಗಿರುವ ಕಾಂಗ್ರೆಸ್‌ನಿಂದ ದೇಶದ ಪ್ರತಿಷ್ಠೆಗೆ ಧಕ್ಕೆ ತರುವ ರಾಜಕೀಯ ದುರುದ್ದೇಶದ ದೇಶದ್ರೋಹಿ ಕಾರ್ಯತಂತ್ರವೇ ಟೂಲ್‌ಕಿಟ್ ಎಂದು ವಿಧಾನ ಪರಿಷತ್ ನ ಮಾಜಿ ಸದಸ್ಯ, ಬಿಜೆಪಿ ಮುಖ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆರೋಪಿಸಿದ್ದಾರೆ.

ತಮ್ಮ ಸ್ವಾರ್ಥದ ಅವಕಾಶವಾದಿ ರಾಜಕಾರಣಕ್ಕಾಗಿ ಕಾಂಗ್ರೆಸ್ ಪಕ್ಷವು ದೇಶದಲ್ಲಿ ಅರಾಜಕತೆಯನ್ನುಂಟು ಮಾಡುವ ದೇಶದ್ರೋಹಿ ಕಾರ್ಯತಂತ್ರವನ್ನು ರೂಪಿಸಲು ಬಳಸಿರುವ ಟೂಲ್‌ಕಿಟ್ ಎನ್ನುವ ಷಡ್ಯಂತ್ರವು ಈ ಸಂಕಷ್ಟದ ಸಮಯದಲ್ಲಿ ಕೋವಿಡ್ ಸಂತ್ರಸ್ತರ ಸಾವು ನೋವುಗಳಿಗೆ ಕಾರಣವಾಗಿದ್ದು, ದೇಶದಲ್ಲಿ ಆತಂಕ ಮತ್ತು ಭಯದ ವಾತಾವರಣ ಸೃಷ್ಟಿ ಮಾಡಿರುವುದು ಅತ್ಯಂತ ವಿಷಾದನೀಯ ಮತ್ತು ಖಂಡನೀಯ ಎಂದವರು ಬಣ್ಣಿಸಿದ್ದಾರೆ.

ಕಳೆದ ಸುಮಾರು ೬ ತಿಂಗಳಿಂದ ದೇಶದಾದ್ಯಂತ ಕಾಂಗ್ರೆಸ್‌ನ ಇಕೋ ಸಿಸ್ಟಮ್ ಕೋವಿಡ್ ಸಂಕ್ರಮಣದ ಈ ಕಾಲದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮೇಲೆ ಅವ್ಯಾಹತವಾಗಿ ನಡೆಸಿಕೊಂಡು ಬಂದಿರುವ ಟೀಕೆ ಟಿಪ್ಪಣಿಗಳನ್ನು ಗಮನಿಸಿದಾಗ ಈ ಟೂಲ್‌ಕಿಟ್ನ ಮಾರ್ಗದರ್ಶನದಂತೆ ಕಾಂಗ್ರೆಸ್‌ನ ಇಕೋ ಸಿಸ್ಟಮ್ ಕೆಲಸ ಮಾಡುತ್ತಿರುವುದು ಜಗಜ್ಜಾಹೀರಾಗಿದೆ. ಈ ಕಾರಣದಿಂದಲೇ ಕಾಂಗ್ರೆಸ್‌ನ ಪ್ರಭಾವಿ ರಾಜ್ಯ ನಾಯಕರುಗಳು ತಾವು ಆಯ್ಕೆಗೊಂಡ ಕ್ಷೇತ್ರಗಳಿಗೆ ಹೋಗದೆ ಬೆಂಗಳೂರಿನಲ್ಲಿ ನೆಲೆಸಿ ಕಾರ್ಯತಂತ್ರವನ್ನು ನಡೆಸುತ್ತಿರುವುದು ಸರ್ವವಿದಿತ.

ಇತ್ತೀಚಿನ ಚುನಾವಣೆಗಳಲ್ಲಿ ಧೂಳೀಪಟವಾಗಿರುವ ಕಾಂಗ್ರೆಸ್, ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ರಾಷ್ಟ್ರವಿರೋಧಿ ಚಿಂತನೆಯೊಂದಿಗೆ ಭಾರತವನ್ನು ವಿರೋಧಿಸುವ ವಿದೇಶಿ ಮಾಧ್ಯಮ ಮಿತ್ರರ ಸಹಕಾರದೊಂದಿಗೆ ಬುದ್ಧಿಜೀವಿಗಳು, ಲೇಖಕರು, ಆಕ್ಟಿವಿಸ್ಟ್‌ಗಳು ಮತ್ತು ಆಯ್ದ ಕೆಲವು ಮಾಧ್ಯಮ ಮಿತ್ರರ ಸಹಕಾರದೊಂದಿಗೆ, ಈ ಸಂಕ್ರಮಣ ಕಾಲದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೋವಿಡ್ ನಿಗ್ರಹಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮಗಳಿಗೆ ತಮ್ಮ ಅಪಾರ ಅನುಭವದೊಂದಿಗೆ ರಚನಾತ್ಮಕ ಸಲಹೆ ನೀಡುವುದರ ಬದಲು ದೇಶವಿರೋಧಿ ಕೃತ್ಯಗಳ ಮೂಲಕ ರಾಜಕೀಯ ಅವಕಾಶಕ್ಕಾಗಿ ಹಪಹಪಿಸುತ್ತಾ ಈ ರೀತಿಯ ಟೂಲ್‌ಕಿಟ್ ಕಾರ್ಯತಂತ್ರ ರೂಪಿಸಿರುವುದು ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ಅತ್ಯಂತ ಕನಿಷ್ಠ ಮಟ್ಟದ ಮನಸ್ಥಿತಿಗೆ ಕೈಗನ್ನಡಿಯಾಗಿದೆ.

ಟೂಲ್‌ಕಿಟ್ ತಂತ್ರಗಾರಿಕೆ ಮೂಲಕ ರೂಪಿತವಾದ ಕಾಂಗ್ರೆಸ್ ಪಕ್ಷದ ಮತ್ತು ಅದರ ಇಕೋಸಿಸ್ಟಮ್ನ ಈ ಕಾರ್ಯತಂತ್ರ ನಮ್ಮ ದೇಶದ ಪ್ರತಿಷ್ಠೆಯ ವಿರುದ್ಧ ಮಾಡಿರುವ ಷಡ್ಯಂತ್ರವಲ್ಲದೆ ಇದರಿಂದಾಗಿ ಈ ಸಂಕ್ರಮಣ ಕಾಲದಲ್ಲಿ ದೇಶದ ಜನತೆ ಅಪಾರ ಸಂಕಷ್ಟವನ್ನು ಮತ್ತು ಸಾವು ನೋವನ್ನು ಅನುಭವಿಸುವಂತಾಗಿದ್ದು, ಇತ್ತೀಚಿನ ದಿನಗಳಲ್ಲಿ ದೇಶ ಕಂಡ ಆಮ್ಲಜನಕದ ಕೊರತೆ, ಬೆಡ್ ಬ್ಲಾಕಿಂಗ್ ದಂಧೆ, ರೆಮಿಡಿಸಿವಿರ್ ಮತ್ತು ಇತರ ಜೀವನಾವಶ್ಯಕ ಔಷಧಿಗಳ ಕಾಳಸಂತೆ, ಡುಪ್ಲಿಕೇಟ್ ಔಷಧಿಗಳ ಕಾರಸ್ಥಾನ ಮುಂತಾದವುಗಳ ಹಿಂದೆ ಈ ತಂತ್ರಗಾರಿಕೆಯ ಮೂಲಕ ಒಂದು ವ್ಯವಸ್ಥಿತ ಸಂಚು ಡೆಸಿರುವುದನ್ನು ಸಾಕ್ಷೀಕರಿಸುತ್ತದೆ

ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ಅಧಿಕೃತವಾಗಿ ಒಡಂಬಡಿಕೆ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷವು ಚೀನಾದಿಂದ ಜಗತ್ತಿನೆಲ್ಲೆಡೆಗೆ ರಫ್ತಾಗಿರುವ ಮತ್ತು ಜಗತ್ತಿನೆಲ್ಲೆಡೆ ಕೋವಿಡ್ ೧೯ ಸಾಂಕ್ರಾಮಿಕದಿಂದಾಗಿ ಲಕ್ಷಾಂತರ ಜನರ ಸಾವು ನೋವುಗಳಿಗೆ ಕಾರಣವಾಗಿದ್ದ ಚೀನಾವನ್ನು ಟೀಕಿಸುವಲ್ಲಾಗಲೀ, ಅಥವಾ ಕೋವಿಡ್ ೧೯ ವೈರಸ್ ಅನ್ನು ಚೀನಾ ವೈರಸ್/ ವುಹಾನ್ ವೈರಸ್ ಎಂದು ಕರೆಯಲು ಧೈರ್ಯ ತೋರದ ಕಾಂಗ್ರೆಸ್, ವೈದ್ಯಕೀಯ ಜಗತ್ತಿಗೇ ಸವಾಲಾಗಿರುವ ಕೋವಿಡ್‌ನ ಎರಡನೇ ಅಲೆಯ ಸಾಂಕ್ರಾಮಿಕವನ್ನು ಡಬ್ಲ್ಯು‌ಎಚ್‌ಒ ನಿರ್ದೇಶನಕ್ಕೆ ವಿರುದ್ಧವಾಗಿ ಇಂಡಿಯಾ ವೇರಿಯೆಂಟ್/ ಮೋದಿ ಸ್ಟ್ರೀನ್ ಎಂದು ಕರೆದು ದೇಶದ ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡುವ ನೀಚತನಕ್ಕೆ ಇಳಿದಿರುವುದು ಅತ್ಯಂತ ದುರಾದೃಷ್ಟಕರ ರಾಷ್ಟ್ರವಿರೋಧಿ ಚಿಂತನೆಯಾಗಿದೆ.

ಕಳೆದ ೭೩ ವರ್ಷಗಳ ಸ್ವತಂತ್ರ ಭಾರತದ ಕಾಲಘಟ್ಟದಲ್ಲಿ ಅತ್ಯಂತ ದೀರ್ಘ ಕಾಲ ಆಡಳಿತ ನಡೆಸಿ ದೇಶದ ಜನಸಂಖ್ಯೆಗೆ ಅನುಗುಣವಾಗಿ ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ಮತ್ತು ಸಿಬ್ಬಂದಿಗಳನ್ನು ಸೃಷ್ಟಿ ಮಾಡದ ಇದೇ ಕಾಂಗ್ರೆಸ್, ಇವತ್ತು ಕಾರಣಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರವನ್ನು ಟೀಕೆ ಮಾಡುತ್ತಿರುವುದು ಕೋತಿ ತಾನು ತಿಂದು ಮೇಕೆಯ ಮೂತಿಗೆ ಒರೆಸಿದಂತಾಗಿದೆ.

ಜಗತ್ತೇ ಮೆಚ್ಚಿಕೊಂಡು ಶ್ಲಾಘಿಸಿರುವ ಭಾರತದ ಲಸಿಕೆಯ ಅಭಿವೃದ್ಧಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಅಗತ್ಯತೆಗೆ ಅನುಗುಣವಾಗಿ ಔಷಧಿಗಳನ್ನು ಮತ್ತು ಅಗತ್ಯವಿರುವ ಸಣ್ಣ ರಾಷ್ಟ್ರಗಳಿಗೆ ಲಸಿಕೆಯನ್ನು ಉಚಿತವಾಗಿ ನೀಡಿರುವುದು ಹಾಗೂ ಜಗತ್ತಿನ ಅತ್ಯಂತ ದೊಡ್ಡ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿರುವುದು ಕಾಂಗ್ರೆಸ್‌ನಲ್ಲಿ ಅಸಹನೆಯನ್ನು ಉಂಟು ಮಾಡಿದ್ದು, ದೇಶದ ವಿಜ್ಞಾನಿಗಳು ಅಪಾರ ಬದ್ಧತೆಯೊಂದಿಗೆ ಕೈಗೊಂಡಿದ್ದ ಲಸಿಕಾ ಅಭಿಯಾನವನ್ನು ಅತ್ಯಂತ ಕಟುವಾಗಿ ಟೀಕಿಸಿ, ಲಸಿಕೆಯ ಸಾಮರ್ಥ್ಯವನ್ನು ಶಂಕಿಸಿ ನೀಡಿರುವ ಬೇಜವಾಬ್ದಾರಿ ಹೇಳಿಕೆಗಳಿಂದ ಸಾರ್ವಜನಿಕರಲ್ಲಿ ಭಯ, ಆತಂಕ ಮತ್ತು ಸಂದೇಹವನ್ನು ಸೃಷ್ಟಿ ಮಾಡಿರುವ ಕಾಂಗ್ರೆಸ್‌ನ ಮುಖಂಡರು ಈಗ ಅದೇ ಲಸಿಕಾ ಅಭಿಯಾನದ ಕುರಿತು ಮೊಸಳೆ ಕಣ್ಣೀರು ಸುರಿಸುತ್ತಿರುವುದು ಒಂದು ವಿಡಂಬನೆ.

ಚಿತಾಗಾರಗಳ ಮುಂದಿರುವ ಶವಗಳ ಬಗ್ಗೆ ಮತ್ತು ಶವಸಂಸ್ಕಾರಗಳ ಬಗ್ಗೆ ಮಾಧ್ಯಮ, ಪತ್ರಕರ್ತರು, ಬುದ್ಧಿಜೀವಿಗಳು ಹಾಗೂ ವಿದೇಶದಲ್ಲಿರುವ ರಾಷ್ಟ್ರವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸಿ ನಿರಂತರವಾಗಿ ಭಾರತಕ್ಕೆ ಕೆಟ್ಟ ಹೆಸರು ತರುವ ಒಂದು ಪ್ರಯತ್ನ ಈ ಟೂಲ್‌ಕಿಟ್ ಕಾರ್ಯತಂತ್ರದಲ್ಲಿ ಸೇರಿಕೊಂಡಿರುವುದು ದೇಶದ ಜನರಲ್ಲಿ ಆತಂಕವನ್ನು ಮೂಡಿಸಿದ್ದು ಈ ಬೆಳವಣಿಗೆ ದೇಶದ ಹಿತದೃಷ್ಟಿಯಿಂದ ಅತ್ಯಂತ ಅಪಾಯಕಾರಿ.

ದೇಶದ ಜನಮಾನಸವನ್ನು ಮತೀಯ ಭಾವನೆಗಳಿಂದ ಪ್ರಚೋದಿಸಿ ಸಮುದಾಯಗಳ ನಡುವೆ ಬಿರುಕು ಉಂಟುಮಾಡಿ ತಮ್ಮ ರಾಜಕೀಯ ಸ್ವಾರ್ಥವನ್ನು ಈಡೇರಿಸಿಕೊಳ್ಳುವ ರಾಷ್ಟ್ರಘಾತುಕ ಚಿಂತನೆ ಈ ಟೂಲ್‌ಕಿಟ್ ಕಾರ್ಯತಂತ್ರದ ಒಂದು ಭಾಗವಾಗಿರುವುದು ಅತ್ಯಂತ ವಿಷಾದನೀಯ.

ರಾಜಕೀಯ ದುರುದ್ದೇಶದಿಂದ ದೇಶದ ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡುವ ಕಾಂಗ್ರೆಸ್‌ನ ಕಾರ್ಯತಂತ್ರವನ್ನು ವಿಫಲಗೊಳಿಸುವಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ರೀ ನರೇಂದ್ರ ಮೋದಿ ಅವರ ರಾಜತಾಂತ್ರಿಕ ನೇತೃತ್ವ, ನಮ್ಮ ರಾಷ್ಟ್ರದ ಬಗ್ಗೆ ಸಹಾನುಭೂತಿ ಇರುವ ಅಮೆರಿಕಾ, ಫ್ರಾನ್ಸ್, ಜರ್ಮನಿ, ರಷ್ಯಾ, ಇಸ್ರೇಲ್, ಸಿಂಗಾಪುರ ಮತ್ತು ಕೊಲ್ಲಿ ರಾಷ್ಟ್ರಗಳಂಥ ಅನೇಕ ದೇಶಗಳಿಂದ ಈ ಸಂಕಷ್ಟದ ಸಮಯದಲ್ಲಿ ನಮಗೆ ಅಗತ್ಯವಿರುವ ಆಕ್ಸಿಜನ್, ಔಷಧಿಗಳು, ರೆಮಿಡಿಸಿವಿರ್ ಇಂಜೆಕ್ಷನ್, ಆಕ್ಸಿಜನ್ ಕಾನ್ಸನ್‌ಟ್ರೇಟರ್ ಮತ್ತು ಅನೇಕ ವೈದ್ಯಕೀಯ ಸವಲತ್ತುಗಳನ್ನು ಸ್ವೀಕರಿಸುವಲ್ಲಿ ಯಶಸ್ವಿಯಾಗಿದ್ದು, ಕಾಂಗ್ರೆಸ್‌ನ ಟೂಲ್‌ಕಿಟ್ ಕಾರ್ಯತಂತ್ರಕ್ಕೆ ಜಾಗತಿಕ ಮಟ್ಟದಲ್ಲಿ ಯಾವುದೇ ಮನ್ನಣೆ ಸಿಗದಿರುವುದು ಬಹಿರಂಗವಾಗಿದೆ.

ತಮ್ಮ ಸ್ವಾರ್ಥದ ರಾಜಕಾರಣಕ್ಕಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರತಿಷ್ಠೆಯನ್ನು ಮತ್ತು ನಮ್ಮ ನೆಚ್ಚಿನ ಪ್ರಧಾನಿಯವರ ವರ್ಚಸ್ಸನ್ನು ಕುಂಠಿತಗೊಳಿಸುವ ಕಾಂಗ್ರೆಸ್‌ನ ಟೂಲ್‌ಕಿಟ್ ಕಾರ್ಯತಂತ್ರ ಸಂಪೂರ್ಣ ವಿಫಲವಾಗಿರುವುದಕ್ಕೆ ಇದೇ ಸಾಕ್ಷಿ.

ಈ ಟೂಲ್‌ಕಿಟ್ ಕಾರ್ಯತಂತ್ರದ ಹಿಂದೆ ಕಾಂಗ್ರೆಸ್ ಪಕ್ಷದ ಅಧಿಕಾರದ ಹಪಾಹಪಿತನ, ಸ್ವಾರ್ಥದ ರಾಜಕಾರಣಕ್ಕಾಗಿ ಮತೀಯ ಒಡಕು ಮೂಡಿಸಿ ಅರಾಜಕತೆಯನ್ನು ಸೃಷ್ಟಿ ಮಾಡುವ ಹುನ್ನಾರ, ದೇಶದ ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡಲು ವೈಚಾರಿಕ ವಿರೋಧಿಗಳು, ತಥಾಕಥಿತ ಬುದ್ಧಿಜೀವಿಗಳು, ದೇಶ ವಿದೇಶಗಳ ಆಯ್ದ ಕಾಂಗ್ರೆಸ್ ಮನಸ್ಥಿತಿಯನ್ನು ಒಪ್ಪುವ ಕೆಲವು ಪತ್ರಿಕಾ ಮಾಧ್ಯಮಗಳ ಪ್ರತಿನಿಧಿಗಳು ಸೇರಿದಂತೆ ಇರುವ ಕಾಂಗ್ರೆಸ್ ಇಕೋ ಸಿಸ್ಟಮ್ ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ, ರಾಷ್ಟ್ರವಿರೋಧಿ ಚಟುವಟಿಕೆಗಳ ಮೂಲಕ ಈ ಟೂಲ್‌ಕಿಟ್ ಮಾರ್ಗದರ್ಶನದಂತೆ ಕಾರ್ಯತಂತ್ರ ಹಮ್ಮಿಕೊಂಡಿರುವುದನ್ನು ಅತ್ಯಂತ ಕಟುವಾದ ಶಬ್ದಗಳಿಂದ ಖಂಡಿಸುತ್ತಾ ಕಾಂಗ್ರೆಸ್ ಪಕ್ಷವೇ ಅಧಿಕೃತವಾಗಿ ನೀಡಿರುವ ದೂರಿನನ್ವುಯ ಅತ್ಯಂತ ಉನ್ನತ ಮಟ್ಟದ ತನಿಖೆ ನಡೆಸಿ ಈ ಟೂಲ್‌ಕಿಟ್ ಕಾರ್ಯತಂತ್ರದ ಹಿಂದೆ ಇರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಾನೂನಿನನ್ವಯ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಾ, ಹತಾಶ ಕಾಂಗ್ರೆಸ್ ಪಕ್ಷದ ದೇಶವಿರೋಧಿ ಟೂಲ್‌ಕಿಟ್ ಕಾರ್ಯತಂತ್ರವನ್ನು ಅತ್ಯಂತ ಕಟುವಾದ ಶಬ್ದಗಳಿಂದ ಖಂಡಿಸುತ್ತೇವೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ತಮ್ಮ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.