ಕರಾವಳಿ

ಗಾಳಿ,ಮಳೆ, ನೆರೆ ಹಾವಳಿ ಸಂದರ್ಭ ಮುಂಜಾಗೃತೆ ಬಗ್ಗೆ ಸಂಸದರು, ಮೂರು ಶಾಸಕರು ಹಾಗೂ ಡಿಸಿ ಹೇಳಿದ್ದೇನು?

Pinterest LinkedIn Tumblr

ಮಂಗಳೂರು  : ಜಿಲ್ಲೆಯ ನೆರೆ ಹಾವಳಿ ಪ್ರದೇಶಗಳನ್ನು ಗುರುತಿಸಿ ಅಂತಹ ಸ್ಥಳಗಳಲ್ಲಿನ ಜನರನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಗುರುತಿಸದೇ ಇರುವ ಪ್ರದೇಶಗಳಲ್ಲಿ ನೆರೆ ಹಾವಳಿ ಉಂಟಾದಲ್ಲಿ ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್ ಹಾಗೂ ಪೊಲೀಸ್ ಇಲಾಖೆಯ ಸಹಕಾರದಿಂದ ತುರ್ತು ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದರು.ಅವರು ಜಿಲ್ಲಾ ಕಚೇರಿ ಸಭಾಂಗಣದಲ್ಲಿ ನಡೆದ ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆಗೆ ಸಂಬಂಧಿಸಿದ ಸಭೆಯಲ್ಲಿ ಮಾತನಾಡಿದರು.

ಗಾಳಿ-ಮಳೆಯಿಂದಾಗಿ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದು ವಿದ್ಯುತ್ ಸರಬರಾಜಿನಲ್ಲಿ ತೊಂದರೆಯುಂಟಾಗಬಹುದು ಆದ್ದರಿಂದ ಮೆಸ್ಕಾಂ ನ ಸಿಬ್ಬಂಧಿಗಳು ಅಂತಹ ಸಂದರ್ಭದಲ್ಲಿ ಸೂಕ್ತವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಸಮಸ್ಯೆಗಳನ್ನು ಆಗಿಂದ್ದಾಗೆ ಪರಿಹರಿಸಬೇಕು ಎಂದರು.

ಜಿಲ್ಲಾದಿಕಾರಿ ಡಾ.ರಾಜೇಂದ್ರ ಕೆವಿ ಮಾತನಾಡಿ, ಮಳೆ ಗಾಳಿಯಿಂದ ಮರಗಳು ಉರುಳಿ ನದಿಗಳಲ್ಲಿ ತೇಲಿ ಬಂದು ಅಣೆಕಟ್ಟುಗಳ ಪ್ರದೇಶಗಳಲ್ಲಿ ತಡೆದು ನಿಂತು ನೀರಿನ ಸಂಗ್ರಹ ಹೆಚ್ಚಾಗಿ , ನದಿಪಾತ್ರದ ಸಮೀಪವಿರುವ ಮನೆಗಳಿಗೆ ನುಗ್ಗುತ್ತವೆ ಇವುಗಳನ್ನು ತೆರವುಗೊಳಿಸುವ ಕಾರ್ಯವನ್ನು ಸಮೀಪದ ಗ್ರಾಮ ಪಂಚಾಯತಿ ಅಥವಾ ಸಣ್ಣ ನೀರಾವರಿ ಇಲಾಖೆ ಯವರು ತಪ್ಪಿದಲ್ಲಿ ತಾಲೂಕು ಆಡಳಿತದಿಂದ ತೆರವುಗೊಳಿಸುವ ಕಾರ್ಯ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಶಾಸಕ ವೇದವ್ಯಾಸ್ ಮಾತನಾಡಿ, ನೆರೆಯಿಂದ ಹಾನಿಗೊಳಗಾಗಿರುವ ಕುಟುಂಬಗಳಿಗೆ ಪರಿಹಾರ ಕೊಡಬೇಕು , ಸಂತ್ರಸ್ಥರಿಗೆ ಊಟದ ವ್ಯವಸ್ಥೆ, ಮೂಲ ಸೌಕರ್ಯಗಳನ್ನು ಸೂಕ್ತವಾಗಿ ಒದಗಿಸಬೇಕು , ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಹಲವಾರು ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಮಾನ್ಸೂನ್ ಮಳೆ ಮುಗಿಯುವ ತನಕ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದು ಸೂಕ್ತ ಎಂದು ಸೂಚಿಸಿದರು.

ಶಾಸಕ ಯು. ಟಿ ಖಾದರ್ ಮಾತನಾಡಿ, ಪ್ರಸ್ತುತ ಉಳ್ಳಾಲ ಮತ್ತು ಸೋಮೇಶ್ವರ ಭಾಗದಲ್ಲಿ ಪ್ರವಾಹದ ಭೀತಿ ಹೆಚ್ಚಿದ್ದು, ಅಗತ್ಯ ಮುಂಜಾಗೃತಾ ಕ್ರಮಗಳನ್ನು ಜಿಲ್ಲಾಡಳಿತ ತೆಗೆದುಕೊಳ್ಳಬೇಕು. ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದ ಅಣೆಕಟ್ಟು, ನದಿ ಹಾಗೂ ತೋಡುಗಳಲ್ಲಿ ಹೂಳೆತ್ತುವ ಕಾರ್ಯವಾಗಬೇಕು. ಹೂಳೆತ್ತುವುದರಿಂದ ಪ್ರವಾಹವನ್ನು ತಡೆಗಟ್ಟಬಹುದು ಎಂದರು.

ಶಾಸಕ ಹರೀಶ್ ಪೂಂಜಾ ಮಾತನಾಡಿ, ಬೆಟ್ಟ-ಗುಡ್ಡಗಳಂತಹ ಪ್ರದೇಶಗಳಲ್ಲಿ ಮರಗಳು ರಸ್ತೆಗೆ ಉರುಳಿ ಬೀಳುವುದರಿಂದ ರಸ್ತೆಮಾರ್ಗಗಳಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗಬಹುದು ಆದ್ದರಿಂದ ಅಂತಹ ಸಂದರ್ಭದಲ್ಲಿ ಜೆ.ಸಿ.ಬಿ ಮೂಲಕ ಅವುಗಳ ತೆರವುಗೊಳಿಸುವ ಕಾರ್ಯವನ್ನು ತುರ್ತಾಗಿ ಕೈಗೊಳ್ಳಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಶಾಸಕರುಗಳಾದ ಭರತ್ ಶೆಟ್ಟಿ. ವೈ, ಪ್ರತಾಪ್ ಸಿಂಹ ನಾಯಕ್, ರಾಜೇಶ್ ನಾಯ್ಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್, ಡಿಸಿಪಿ ಹರಿರಾಂ ಶಂಕರ್, ಮೇಯರ್ ಪ್ರೇಮಾನಂದ ಶೆಟ್ಟಿ, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Comments are closed.