ಕರಾವಳಿ

ನಿವೃತ್ತ ವೈದ್ಯರು, ದಾದಿಯರಲ್ಲಿ ಸ್ವಇಚ್ಛೆಯಿಂದ ಸೇವಾ ಕಾರ್ಯಕ್ಕೆ ಕೈಜೋಡಿಸಲು ಶಾಸಕ ಕಾಮತ್ ಮನವಿ

Pinterest LinkedIn Tumblr

ಮಂಗಳೂರು: ಎಲ್ಲೆಡೆ ಕೋವಿಡ್‌ 2ನೇ ಅಲೆ ವ್ಯಾಪಕವಾಗಿದ್ದು, ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು ನಿವೃತ್ತ ವೈದ್ಯರು, ದಾದಿಯರಲ್ಲಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.

ಕೋವಿಡ್ ರೋಗಿಗಳ ಸೇವೆಗೆ ದ.ಕ ಜಿಲ್ಲೆಯಲ್ಲಿ ವೈದ್ಯರು, ದಾದಿಯರು, ಡಿ ಗ್ರೂಪ್ ನೌಕರರು, ಪ್ಯಾರಾ ಮೆಡಿಕಲ್ ಸಿಬ್ಬಂದಿಗಳ ಅವಶ್ಯಕತೆಯಿದೆ. ಈಗಾಗಲೇ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ನೀಡಿ ನಿವೃತ್ತರಾಗಿರುವ ಅಥವ ಸ್ವಯಂ ನಿವೃತ್ತಿ ಪಡೆದಿರುವ ವೈದ್ಯರು, ದಾದಿಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿಗಳು ಹಾಗೂ ಡಿ ನೌಕರರು ಸ್ವ ಇಚ್ಛೆಯಿಂದ ಸೇವಾ ಕಾರ್ಯಕ್ಕೆ ನಮ್ಮೊಂದಿಗೆ ಕೈ ಜೋಡಿಸಲು ವಿನಂತಿಸಿದ್ದಾರೆ.

ಒಂದು ವೇಳೆ ಕೋವಿಡ್ ರೋಗಿಗಳ ಸೇವೆಗೆ ವೈದ್ಯರು, ದಾದಿಯರು, ಡಿ ಗ್ರೂಪ್ ನೌಕರರು, ಪ್ಯಾರಾ ಮೆಡಿಕಲ್ ಸಿಬ್ಬಂದಿಗಳು ಮುಂದೆ ಬಂದಲ್ಲಿ, ನಿಮ್ಮ ಅಮೂಲ್ಯವಾದ ಸೇವೆಯನ್ನು ಜಿಲ್ಲಾಡಳಿತ ಗೌರವಿಸುತ್ತದೆ. ಮತ್ತು ಅದಕ್ಕಾಗಿ ತಮ್ಮ ಬೇಡಿಕೆಗಳೇನಾದರೂ ಇದ್ದಲ್ಲಿ ಪೂರೈಸಲು ಜಿಲ್ಲಾಡಳಿತ ಸಿದ್ಧವಿದೆ.

ಕಾಡುತ್ತಿರುವ ಈ ಕೋವಿಡ್ ಮಹಾಮಾರಿಯಿಂದ ಮಾನವಕುಲವನ್ನು ರಕ್ಷಿಸುವ ವೈದ್ಯರ ಅಗತ್ಯ ನಮಗೆಲ್ಲರಿಗೂ ಇದೆ. ಹಾಗಾಗಿ ನಮ್ಮೊಂದಿಗೆ ಕೈ ಜೋಡಿಸಿ, ನಮ್ಮ ಜಿಲ್ಲೆಯಲ್ಲಿ ಕೋವಿಡ್ ಹಿಮ್ಮೆಟ್ಟಿಸಲು ನಿಮ್ಮ ಸಹಕಾರದ ನಿರೀಕ್ಷೆಯಿದೆ ಎಂದು ಶಾಸಕ ಕಾಮತ್ ಮನವಿ ಮಾಡಿಕೊಂಡಿದ್ದಾರೆ.

ಕೋವಿಡ್ ಹಾವಳಿಯಿಂದ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ವೈದ್ಯಕೀಯ ರಂಗ ಈ ಮಹಾಮಾರಿಯನ್ನು ತಡೆಯಲು ಅವಿರತವಾಗಿ ಶ್ರಮಿಸುತ್ತಿದೆ.

ಈ ಸಂದರ್ಭದಲ್ಲಿ ಆರೋಗ್ಯ ರಂಗದ ಶಕ್ತಿ ಸಂಚಯ ಅತೀ ಅಗತ್ಯ. ಮಾನವ ಕುಲವನ್ನು ತನ್ನ ಕಬಂಧಬಾಹುಗಳಿಂದ ಬಂಧಿಸಿರುವ ಕೋವಿಡ್ ಮಹಾಮಾರಿಯನ್ನು ತಡೆಯುವ ನಿಟ್ಟಿನಲ್ಲಿ ಸೇವಾ ನಿರತ ವೈದ್ಯರು, ದಾದಿಯರು, ಡಿ ಗ್ರೂಪ್ ನೌಕರರು, ಪ್ಯಾರಾ ಮೆಡಿಕಲ್ ಸಿಬ್ಬಂದಿ ವರ್ಗ ಸೇರಿದಂತೆ ವಿವಿಧ ವರ್ಗಗಳ ನೌಕರರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಹರ್ನಿಶಿ ದುಡಿಯುತಿದ್ದಾರೆ. ವೈದ್ಯಕೀಯ ಸೌಲಭ್ಯಗಳಿದ್ದರೂ ಅದನ್ನು ಸಮರ್ಪಕವಾಗಿ ಬಳಸಲು ವೈದ್ಯಕೀಯ ಕ್ಷೇತ್ರದಲ್ಲಿ ಅನುಭವವಿರುವ ವ್ಯಕ್ತಿಗಳ ಅವಶ್ಯಕತೆಯಿದೆ ಎಂದು ಶಾಸಕ ಕಾಮತ್  ತಿಳಿಸಿದ್ದಾರೆ.

Comments are closed.