ಉಡುಪಿ: ತೌಖ್ತೆ ಚಂಡಮಾರುತದಿಂದ ಶನಿವಾರ ಕರಾವಳಿ ಜಿಲ್ಲೆಯಾದ ಉಡುಪಿ ಅಕ್ಷರಶಃ ನಲುಗಿದೆ. ಶುಕ್ರವಾರ ರಾತ್ರಿಯಿಂದ ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಹಾನಿಯಾಗಿದೆ. ಕಡಲ ಕಿನಾರೆಯುದ್ದಕ್ಕೂ ಭಾರೀ ಗಾತ್ರದ ಅಲೆಗಳು ದಡಕ್ಕೆ ಆಪ್ಪಳಿಸುತ್ತಿದೆ. ಭಾರೀ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಶನಿವಾರದಿಂದ ಜಿಲ್ಲೆಯ ಹಲವೆಡೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಮಳೆಯ ಜೊತೆಗೆ ವಿಪರೀತ ಪ್ರಮಾಣದ ಗಾಳಿಯೂ ಇದೆ. ಭಾನುವಾರವೂ ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ.

ಕಡಲಬ್ಬರ…..
ಉಡುಪಿ, ಬ್ರಹ್ಮಾವರ, ಕಾರ್ಕಳ, ಬೈಂದೂರು, ಕಾಪು ಭಾಗದಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಭಾರೀ ಮಳೆಯಾಗಿದೆ. ಮರವಂತೆ, ತ್ರಾಸಿ ಕಂಚುಗೋಡು, ಉಪ್ಪುಂದ, ಕೋಡಿ, ಹಳೆಅಳಿವೆ, ಬೀಜಾಡಿ, ಮಲ್ಪೆ ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಹಲವು ಮನೆಗಳು ಅಪಾಯದಲ್ಲಿವೆ. ಮರವಂತೆಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಕೆಲ ತಿಂಗಳ ಹಿಂದೆ ನಿರ್ಮಿಸಿದ್ದ ಮೀನುಗಾರಿಕೆ ರಸ್ತೆ ಕೊಚ್ಚಿ ಹೋಗಿದೆ. ಮಲ್ಪೆ ಬಂದರಿನಿಂದ ಹೊರಟಿದ್ದ ಮೀನುಗಾರಿಕೆ ಬೋಟು ಮುಳುಗಿದ್ದು, ಅದರಲ್ಲಿದ್ದ ಬಿಹಾರ ಮೂಲದ ಇಬ್ಬರು ಯುವಕರು ಮಟ್ಟು ಬೀಚಿನಲ್ಲಿ ಸುರಕ್ಷಿತವಾಗಿ ದಡ ಸೇರಿದ್ದಾರೆ.
ಇಂದು ರೆಡ್ ಅಲರ್ಟ್
ಕರಾವಳಿಯಲ್ಲಿ ಇನ್ನೂ 3 ದಿನಗಳ ಕಾಲ ಮಳೆ ಸುರಿಯಲಿದ್ದು, ಭಾರತೀಯ ಹವಾಮಾನ ಇಲಾಖೆಯು ಮೇ 16ರಂದು ರೆಡ್ ಅಲರ್ಟ್ ಘೋಷಿಸಿದೆ. ಮೇ 17ರಂದು ಆರೆಂಜ್ ಮತ್ತು ಮೇ 18ರಂದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ವೇಳೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರಲಿದೆ. ತಾಸಿಗೆ 30 ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
Comments are closed.