ಕರಾವಳಿ

ಕಟ್ಟಡ ಕಾರ್ಮಿಕರಿಗೆ ಮಾಸಿಕ 10 ಸಾವಿರ ಲಾಕ್ಡೌನ್ ಪರಿಹಾರಕ್ಕೆ ಒತ್ತಾಯಿಸಿ ಮನೆಮನೆಯಲ್ಲಿ CITU ಪ್ರತಿಭಟನೆ

Pinterest LinkedIn Tumblr

ಕುಂದಾಪುರ : ಕೋವಿಡ್ 2ನೇ ಅಲೆಯಿಂದಾಗಿ ನಿರುದ್ಯೋಗಿಯಾಗಿರುವ ಕಟ್ಟಡ ಕಾರ್ಮಿಕರಿಗೆ ಮುಂದಿನ ಮೂರು ತಿಂಗಳವರೆಗೆ ಪ್ರತಿ ತಿಂಗಳು 10,000 ನೀಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲು ರಾಜ್ಯ ಕಟ್ಟಡ ಕಾರ್ಮಿಕ ಸಂಘಟನೆ ನೀಡಿದ ಕರೆಯನ್ವಯ ಶನಿವಾರ ಕುಂದಾಪುರ ತಾಲ್ಲೂಕಿನಾದ್ಯಾಂತ ಕಾರ್ಮಿಕರು ತಮ್ಮ ತಮ್ಮ ಮನೆಯಲ್ಲಿ ಹಾಗೂ ಮನೆಯ ಪರಿಸರದಲ್ಲಿ ಭಿತ್ತಿ ಫಲಕಗಳನ್ನು ಹಿಡಿದು ಮನೆ ಮನೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಹಿಂದಿನ ವರ್ಷ ಕಾರ್ಮಿಕ ಕಲ್ಯಾಣ ಮಂಡಳಿ ಕೊರೊನಾ ಪರಿಹಾರವಾಗಿ ಐದು ಸಾವಿರ ಜಮೆ ಮಾಡುವಾಗ ನಿರ್ಲಕ್ಷ್ಯ ವಹಿಸಿದ ಪರಿಣಾಮ ಒಂದು ಲಕ್ಷದ ಇಪ್ಪತ್ತಾರು ಸಾವಿರ ಜನರಿಗೆ ಈ ಪರಿಹಾರ ಹಣ ಜಮೆಯಾಗಿರಲಿಲ್ಲ. ಬಾಕಿ ಇರುವ ಹಣವನ್ನು ಕೂಡಲೇ ಜಮೆ ಮಾಡುವಂತೆ ಒತ್ತಾಯಿಸಲಾಯಿತು. ಬಾಕಿ ಇರುವ ವಿದ್ಯಾರ್ಥಿ ವೇತನ, ಮದುವೆ ಧನಸಹಾಯ ಹಾಗೂ ಕಾರ್ಮಿಕರಿಗೆ ನೀಡಲಾಗುವ ಇನ್ನೀತರ ಸೌಲಭ್ಯಗಳನ್ನು ಈ ಕಷ್ಟದ ಕಾಲದಲ್ಲಾದರೂ ಬಿಡುಗಡೆ ಮಾಡಬೇಕು. ಲಾಕ್ ಡೌನ್ ನಿಂದ ಅರ್ಜಿ ಸಲ್ಲಿಸಲು ಬಾಕಿ ಇರುವ ಎಲ್ಲಾ ಅರ್ಜಿಗಳಿಗೆ ಮುಂದಿನ ಮೂರು ತಿಂಗಳ ವರೆಗೆ ಕಾಲಾವಕಾಶ ನೀಡುವಂತೆ ಆಗ್ರಹಿಸಲಾಯಿತು.

ಕೊರೊನಾ ತಡೆಗಟ್ಟುವ ಇಚ್ಛಾಶಕ್ತಿ ಸರ್ಕಾರಕ್ಕೆ ಇದ್ದರೆ ದಿನಗೂಲಿ ಕಾರ್ಮಿಕರಾದ ಕಟ್ಟಡ ಕಾರ್ಮಿಕರಿಗೆ ಹಾಗೂ ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ಖರೀದಿಸಲು ಈ ಪರಿಹಾರ ಅಗತ್ಯವೆಂದು ಮನಗಂಡು ಕೂಡಲೇ ಪರಿಹಾರ ಹಣ ಘೋಷಣೆ ಮಾಡಬೇಕು. ಲಾಕ್‌ಡೌನ್‌ ಕಾರಣದಿಂದಾಗಿ ರಾಜ್ಯದ ಮೂಲೆ ಮೂಲೆಯಲ್ಲಿ ಇನ್ನೂ ಮನೆಗೆ ತಲುಪದೇ ಇರುವ ಕಾರ್ಮಿಕರನ್ನು ಗುರುತಿಸಿ ಸರ್ಕಾರ ಅವರಿಗೆ ವಸತಿ ಹಾಗೂ ಆಹಾರದ ವ್ಯವಸ್ಥೆ ಮಾಡುವಂತೆ ಕಟ್ಟಡ ಕಾರ್ಮಿಕರು ಆಗ್ರಹಿಸಿದರು.

ತಾಲ್ಲೂಕಿನ ಬಸ್ರೂರು, ಹೆಮ್ಮಾಡಿ, ಹಾಲಾಡಿ, ಆಲೂರು, ಕೆರಾಡಿ, ಬಿದ್ಕಲ್ ಕಟ್ಟೆ, ಬೆಟ್ಟಾಗರ, ಕಾಳಾವರ ಮುಂತಾದ ಕಡೆಗಳಲ್ಲಿ ಪ್ರತಿಭಟನೆ ನಡೆಯಿತು.

Comments are closed.