ಕರಾವಳಿ

ದ.ಕ. ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೊಳಿಸಲು ಸೆಕ್ಟರ್ ಮ್ಯಾಜಿಸ್ಟ್ರೇಟ್ ಗಳ ನೇಮಕ: ಜಿಲ್ಲಾಧಿಕಾರಿ

Pinterest LinkedIn Tumblr

ಮಂಗಳೂರು, ಮೇ 07 : ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೊಳಿಸಲು ಸೆಕ್ಟರ್ ಮ್ಯಾಜಿಸ್ಟ್ರೇಟ್ ಗಳನ್ನು ನೇಮಿಸಲಾಗುವುದು, ಇವರು ತಮಗೆ ನಿಗದಿಪಡಿಸಿದ ವ್ಯಾಪ್ತಿಯೊಳಗೆ ಸಂಚರಿಸಿ ಯಾವುದೇ ಲಾಕ್ ಡೌನ್ ನಿಯಮಗಳು ಉಲ್ಲಂಘನೆಯಾಗದಂತೆ ಹಾಗೂ ಜನಸಂದಣಿ ಆಗದಂತೆ ನೋಡಿಕೊಳ್ಳಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಸೂಚಿಸಿದ್ದಾರೆ.

ಸಾರ್ವಜನಿಕರ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಲು ನಗರದ ಆಯ್ದ ಪ್ರದೇಶಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ನಿರ್ಮಿಸಿ ಅವರನ್ನು ಪ್ರಶ್ನಿಸಬೇಕು ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.

ಔಷಧಿ ಅಂಗಡಿಗಳು ಮತ್ತು ಆಸ್ಪತ್ರೆಗಳನ್ನು ಹೊರತುಪಡಿಸಿ ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 6ರವರೆಗೆ ಎಲ್ಲಾ ರೀತಿಯ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿದೆ. ಸಾರ್ವಜನಿಕರು ಈ ಸೇವೆಗಳನ್ನು ತಮ್ಮ ಹತ್ತಿರದ ಅಂಗಡಿಗಳಿಂದ ಮಾತ್ರವೇ ಪಡೆಯತಕ್ಕದ್ದು ಎಂದು ಡಿಸಿ ತಿಳಿಸಿದ್ದಾರೆ.

ತುರ್ತು ಮತ್ತು ಅಗತ್ಯ ಸೇವೆಗಳೊಂದಿಗೆ ವ್ಯವಹರಿಸುವ ಮತ್ತು 24×7 ಕಾರ್ಯಾಚರಣೆಗಳ ಅಗತ್ಯವಿರುವ ಕೈಗಾರಿಕೆಗಳು/ಕಂಪನಿಗಳು/ಸಂಸ್ಥೆಗಳಿಗೆ ಮಾತ್ರ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಈ ಸಂದರ್ಭ ಯಾವುದೇ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶವಿಲ್ಲ. ನಿರ್ಮಾಣ ಚಟುವಟಿಕೆಗಳು ನಡೆಯುವ ಸ್ಥಳದಲ್ಲೇ ಕಾರ್ಮಿಕರು ಲಭ್ಯವಿದ್ದಲ್ಲಿ ಕಾಮಗಾರಿ ನಡೆಸಬಹುದಾಗಿದೆ. ಆದರೆ ಹೊರಗಿನ ಪ್ರದೇಶಗಳಿಂದ ಕಾರ್ಮಿಕರನ್ನು ಕರೆತರಲು ಅವಕಾಶವಿಲ್ಲ.

ರೋಗಿಗಳು ಮತ್ತು ಅವರ ಪರಿಚಾರಕರು/ವೈದ್ಯಕೀಯ ತುರ್ತು ಸಂದರ್ಭ ಜನರಿಗೆ ಕನಿಷ್ಠ ಪುರಾವೆಗಳೊಂದಿಗೆ ಸಂಚರಿಸಲು ಅನುಮತಿಸಲಾಗಿದೆ. ಶವಸಂಸ್ಕಾರ /ಅಂತ್ಯಕ್ರಿಯೆಗಳನ್ನು ಗರಿಷ್ಠ 5 ಜನರ ಪರಿಮಿತಿಗೊಳಪಟ್ಟು ಕೋವಿಡ್-19 ನಿಯಮ ಪಾಲಿಸಿ ನಡೆಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸ್ವಿಗ್ಗಿ, ಝೊಮೇಟೋ ಮುಂತಾದ ಆನ್ ಲೈನ್ ಆಹಾರ ಪೂರೈಕೆದಾರರು ರಾತ್ರಿ 12 ಗಂಟೆಯವರೆಗೆ ತಿರುಗಾಡುವುದು ಕಂಡು ಬಂದಿದೆ. ಇನ್ನು ಮುಂದೆ ಈ ರೀತಿ ತಿರುಗಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆನ್ ಲೈನ್ ಆಹಾರ ಪೂರೈಕೆದಾರರು ರಾತ್ರಿ 10 ಗಂಟೆಯೊಳಗೆ ಕಾರ್ಯನಿರ್ವಹಿಸಿ ತಮ್ಮ ಕೆಲಸವನ್ನು ನಿಲ್ಲಿಸಬೇಕು. ಅವರು 11 ಗಂಟೆಯೊಳಗೆ ಮನೆ ಸೇರಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ನಿರ್ಗತಿಕರು ಹಾಗೂ ಕೆಲವು ವಲಸೆ ಕಾರ್ಮಿಕರಿಗೆ ನಗರದ ನಿರಾಶ್ರಿತ ಕೇಂದ್ರಗಳಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಬೇಕು, ಅವರುಗಳ ಆರೋಗ್ಯ ತಪಾಸಣೆಗಳನ್ನು ಸಹ ಮಾಡಿ ಇದರಿಂದ, ಡೆಂಗ್ಯೂ ಮಲೇರಿಯಾದಂತಹ ಸಾಂಕ್ರಮಿಕ ರೋಗಗಳನ್ನು ಹರಡುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Comments are closed.