ಕರಾವಳಿ

ಸಾರ್ವಜನಿಕರು ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸದಿರುವುದೇ ಸೋಂಕು ಹೆಚ್ಚಳಕ್ಕೆ ಕಾರಣ -ಕಫ್ರ್ಯೂ ಮತ್ತಷ್ಟು ಬಿಗಿಗೊಳಿಸಿ : ಸಚಿವ ಪೂಜಾರಿ ಸೂಚನೆ

Pinterest LinkedIn Tumblr

ಮಂಗಳೂರು, ಮೇ 07 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕಫ್ರ್ಯೂವನ್ನು ಜಿಲ್ಲೆಯಲ್ಲಿ ಮತ್ತಷ್ಟು ಬಿಗಿಗೊಳಿಸಿ ಕಟ್ಟುನಿಟ್ಟಾಗಿ ಜಾರಿಗೊಳಿಸ ಬೇಕು. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ ಬೆಳಿಗ್ಗೆ 9 ಗಂಟೆಯವರೆಗೆ ಮಾತ್ರ ಅವಕಾಶ ನೀಡಿ 10 ಗಂಟೆಯೊಳಗೆ ಪ್ರತಿಯೊಬ್ಬರು ಮನೆ ಸೇರಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ 19 ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ವೃದ್ಧಿಸುತ್ತಿದ್ದು ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ನ್ನು ಜಾರಿಗೊಳಿಸುವ ಬಗ್ಗೆ ಚರ್ಚಿಸಲು ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕೊರೋನ ಕಫ್ರ್ಯೂ ಜಾರಿಗೆ ತಂದು 8 ದಿನಗಳಾದರೂ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ, ಸಾರ್ವಜನಿಕರು ಅನಗತ್ಯವಾಗಿ ಸಣ್ಣಪುಟ್ಟ ನೆಪಗಳನ್ನು ಹೇಳಿಕೊಂಡು ನಗರದ ತುಂಬೆಲ್ಲಾ ಅನಾವಶ್ಯಕವಾಗಿ ಓಡಾಡುತ್ತಿರುವುದು, ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸದೇ ಇರುವುದು ಇದಕ್ಕೆ ಕಾರಣವಾಗಿದೆ.

ಕಫ್ರ್ಯೂ ಅನುಷ್ಠಾನವನ್ನು ಸಮರ್ಪಕವಾಗಿ ಆಗುವಂತೆ ನೋಡಿಕೊಳ್ಳುವುದರ ಜೊತೆಗೆ ಕೊರೋನಾ ನಿಯಂತ್ರಣ ಮಾರ್ಗಸೂಚಿಗಳು ಪಾಲನೆಯಾಗುವಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕರು ದೈನಂದಿನ ಅಗತ್ಯ ವಸ್ತುಗಳನ್ನು ಅವಶ್ಯವಿದ್ದಲ್ಲಿ ಮಾತ್ರ ಖರೀದಿಗೆ ಮನೆಯಿಂದ ಹೊರಬರಬೇಕು, ಇಲ್ಲವಾದಲ್ಲಿ ಮನೆಯಲ್ಲೇ ಸುರಕ್ಷಿತವಾಗಿ ಇರಬೇಕು ಎಂದರು.

ಶನಿವಾರ ಮತ್ತು ಭಾನುವಾರ ಪೂರ್ಣ ಪ್ರಮಾಣದಲ್ಲಿ ಲಾಕ್‍ಡೌನ್ ಮಾಡಲು ಚಿಂತಿಸಲಾಗಿದೆ. ಕೊರೋನಾ ಪ್ರಕರಣಗಳು ಏರುಗತಿಯಲ್ಲಿ ಕಂಡುಬಂದಲ್ಲಿ ಅನಿವಾರ್ಯ. ಆ ದಿನಗಳಲ್ಲಿ ದಿನಸಿ ಅಂಗಡಿ ತೆರೆಯಲು ಅವಕಾಶವಿರುವುದಿಲ್ಲ ಹಾಪ್ ಕಾಮ್ಸ್, ಹಾಲಿನ ಅಂಗಡಿಗಳು, ತರಕಾರಿ, ಹಣ್ಣುಹಂಪಲು ತಳ್ಳುಗಾಡಿಗಳಿಗೆ ಅವಕಾಶ ನೀಡಲಾಗುವುದು ಎಂದರು.

ಕಫ್ರ್ಯೂ ಅವಧಿಯಲ್ಲಿ ವಾಹನಗಳಲ್ಲಿ ಸಂಚರಿಸುವವರನ್ನು ತಡೆದು ವಿಚಾರಿಸಬೇಕು. ನಕಲಿ ಗುರುತಿನ ಚೀಟಿ ತೋರಿಸುವವರು, ಅನಗತ್ಯವಾಗಿ ಸಕಾರಣವಿಲ್ಲದೆ ವಾಹನಗಳಲ್ಲಿ ಓಡಾಡುವುದು ಕಂಡುಬಂದರೆ ಅಂತಹ ವಾಹನಗಳನ್ನು ನಿರ್ಧಾಕ್ಷೀಣ್ಯವಾಗಿ ಸೀಝ್ ಮಾಡಬೇಕು ಎಂದರು.

ಕೋವಿಡ್ ನಿರೋಧಕ ಚುಚ್ಚು ಮದ್ದು ಪಡೆಯಲು ತೆರಳುವವರು, ವೈದ್ಯಕೀಯ ಚಿಕಿತ್ಸೆಗೆ, ಮತ್ತಿತರ ತುರ್ತು ಕೆಲಸ ಇರುವವರು ಕಂಡುಬಂದಲ್ಲಿ ಅವರುಗಳಿಗೆ ಅವಕಾಶ ಮಾಡಿಕೊಡಬೇಕು ಎಂದರು.

ಜಿಲ್ಲೆಯಾದ್ಯಂತ ಪೂರ್ವ ನಿಗದಿತವಾಗಿರುವ ಸಭೆ ಸಮಾರಂಭಗಳನ್ನು ಮಾಡಲು ಮೇ.15 ರವರೆಗೆ ಮಾತ್ರ ಅವಕಾಶ ನೀಡಬೇಕು, ಹೊಸದಾಗಿ ಯಾವುದೇ ಸಭೆ ಸಮಾರಂಭ ಮಾಡಲು ಅವಕಾಶ ನೀಡಬಾರದು ಎಂದರು.

ಸಭೆಯಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕರಾದ ಭರತ್. ವೈ ಶೆಟ್ಟಿ, ವೇದವ್ಯಾಸ್ ಕಾಮತ್, ಹರೀಶ್ ಪೂಂಜ, ರಾಜೇಶ್ ನಾಯಕ್.ಯು, ಸಂಜೀವ ಮಠಂದೂರು, ಉಮಾನಾಥ್.ಎ ಕೋಟ್ಯಾನ್, ಯು.ಟಿ ಖಾದರ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಮಂಗಳೂರು ಮಹಾನಗರ ಪಾಲಿಕೆ ಮಹಾಪೌರರಾದ ಪ್ರೇಮಾನಂದ ಶೆಟ್ಟಿ, ಉಪ ಮಹಾಪೌರರಾದ ಸುಮಂಗಲಾ ರಾವ್, ನಗರ ಪೋಲಿಸ್ ಆಯುಕ್ತ ಎನ್. ಶಶಿಕುಮಾರ್, ಜಿಲ್ಲಾ ಪೋಲಿಸ್ ಅಧೀಕ್ಷಕ ಸೋನವಣೆ ಋಷಿಕೇಶ್ ಭಗವಾನ್, ಸಹಾಯಕ ಪೊಲೀಸ್‍ಆಯುಕ್ತ ಪಿ.ಎ ಹೆಗ್ಡೆ, ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಡಾ. ಕುಮಾರ್, ಅಪರ ಜಿಲ್ಲಾಧಿಕಾರಿ ದಿನೇಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್, ಜಿಲ್ಲಾ ಶಸû್ರ ಚಿಕಿತ್ಸಕರು ಮತ್ತು ಅಧೀಕ್ಷಕರಾದ ಡಾ. ಸದಾಶಿವ ಶ್ಯಾನುಬೋಗ್, ಅಬಕಾರಿ ಇಲಾಖೆಯ ಉಪ ಆಯುಕ್ತರು, ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಮೀನುಗಾರಿಕೆ ಇಲಾಖೆಯ ಉಪನಿರ್ದೆಶಕರು. ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.