ಕರಾವಳಿ

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ ಅರಣ್ಯ ಬೆಳೆಸುವ ಹಾಗೂ ವನ್ಯಜೀವಿ ಸಂತತಿ ಹೆಚ್ಚಳಕ್ಕೆ ಕಾರ್ಯಕ್ರಮ

Pinterest LinkedIn Tumblr

ಮಂಗಳೂರು: ಧರ್ಮಸ್ಥಳ ಡಾ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ ಅರಣ್ಯ ಅಭಿವೃದ್ಧಿಗಾಗಿ ಮತ್ತು ವನ್ಯಜೀವಿಗಳ ಸಂತತಿ ಅಭಿವೃದ್ಧಿಗೆ ಅರಣ್ಯ ಇಲಾಖೆಯಿಂದ ಕಾರ್ಯಕ್ರಮ ರೂಪಿಸಲಾಗುವುದು ಎಂದು ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಅವರು ಶ್ರೀಕ್ಷೇತ್ರ ಧರ್ಮಸ್ಥಳದ ಸನ್ನಿಧಿ ಗೆಸ್ಟ್ ಹೌಸ್‍ನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ಶಾಸಕರು, ವಿಧಾನಪರಿಷತ್ ಸದಸ್ಯರು , ಹಿರಿಯ ಅರಣ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡುತ್ತಿದ್ದರು.

ಸಭೆಯಲ್ಲಿ ಮಾತನಾಡಿದ ವೀರೇಂದ್ರ ಹೆಗ್ಗಡೆ ಅವರು, ಅರಣ್ಯವನ್ನು ಹಾಗೂ ಅರಣ್ಯದಲ್ಲಿ ಹಣ್ಣು ಹಂಪಲುಗಳ ಲಭ್ಯತೆಯನ್ನು ಹೆಚ್ಚಿಸಿ, ಕಾಡು ಪ್ರಾಣಿಗಳ ಸಂತತಿಯನ್ನು ಹೆಚ್ಚಿಸುವುದು ಅಗತ್ಯ ಇದಕ್ಕೆ ಅರಣ್ಯ ಇಲಾಖೆ ಸಹಕಾರ ಅಗತ್ಯವೆಂದು ಸಚಿವರಿಗೆ ತಿಳಿಸಿದರು.

ಸಚಿವರು ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ, ಸಂಬಂಧಪಟ್ಟ ಅರಣ್ಯಾಧಿಕಾರಿಗಳು ಸಭೆ ನಡೆಸಿ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ “ಪೈಲೆಟ್ ಪ್ರಾಜೆಕ್ಟ್” ಕೈಗೊಳ್ಳಲು ಕೂಡಲೇ ಸಿದ್ಧತೆ ಆರಂಭಿಸಲು ಸೂಚಿಸಿದ ಅವರು ಈ ಕಾರ್ಯಕ್ರಮವು ಅರಣ್ಯ ಇಲಾಖೆ ಹಾಗೂ ಧರ್ಮಸ್ಥಳದ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜೂನ್ 05 ರಂದು ಈ ಕಾರ್ಯಕ್ರಮವನ್ನು ಉದ್ಘಾಟಿಸಲಾಗುವುದು ಎಂದ ಅವರು ಅದಕ್ಕೆ ಪೂರ್ವಭಾವಿಯಾಗಿ ಸ್ಥಳೀಯ ಸ್ವಯಂಸೇವಕರು, ಸಂಘ- ಸಂಸ್ಥೆಗಳನ್ನು ಗುರುತಿಸಬೇಕು, ಸಸಿಗಳನ್ನು ಕ್ರೋಡೀಕರಿಸುವುದು ಹಾಗೂ ಕನಿಷ್ಠ 100 ಎಕರೆ ಜಾಗವನ್ನು ಗುರುತಿಸಬೇಕು ಇದರಿಂದ ಪ್ರಾಣಿಗಳಿಗೆ ಆಹಾರ ಲಭ್ಯತೆ ಮತ್ರವಲ್ಲದೇ, ಮನುಷ್ಯರಿಗೆ ಆಮ್ಲಜನಕ ಲಭ್ಯವಾಗಲು ನೆರವಾಗುತ್ತದೆ ಎಂದರು.

ಸಭೆಯಲ್ಲಿ ಗಿಡ ನೆಡುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಸ್ಥಳೀಯರಿಗೆ ತರಬೇತಿ ನೀಡಲು ಸೂಚಿಸಿದರು.

ಸಭೆಯಲ್ಲಿ ಬೆಳ್ತಂಗಡಿ ಶಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.