ಕರಾವಳಿ

ಸಭಾಂಗಣ, ಕಲ್ಯಾಣ ಮಂಟಪ, ಸಿನಿಮಾ ಮಂದಿರ, ಹಾಲ್‍ಗಳಲ್ಲಿ ಸ್ಯಾನಿಟೈಸೇಷನ್‌ಗೆ ಸೂಚನೆ

Pinterest LinkedIn Tumblr

ಮಂಗಳೂರು, ಎಪ್ರಿಲ್ 20 : ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ, ಜಿಲ್ಲಾಡಳಿತವು ಸರ್ಕಾರದ ಆದೇಶದಲ್ಲಿ ಸೂಚಿಸಿರುವಂತೆ ಎಲ್ಲಾ ಅವಶ್ಯಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಪ್ರಸ್ತುತ ಕೋವಿಡ್ 19 ಸೋಂಕು ಹರಡುವಿಕೆ ಉಲ್ಬಣಗೊಂಡಿದ್ದು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವೆಂದು ಮನಗಂಡು ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ (34)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ರಾಜೇಂದ್ರ ಕೆ.ವಿ ಆದೇಶ ಹೊರಡಿಸಿರುತ್ತಾರೆ.

ಜಿಲ್ಲೆಯಾದ್ಯಂತ ಸಾರ್ವಜನಿಕ ಸಮಾರಂಭ, ಆಚರಣೆಗಳು, ಮನೋರಂಜನೆ ಕಾರ್ಯಕ್ರಮಗಳಿಗೆ ಜನರ ಒಗ್ಗೂಡುವಿಕೆಗೆ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಧಾರ್ಮಿಕ ಆಚರಣೆ ಹಾಗೂ ಸಮಾರಂಭಗಳನ್ನು ನಿಷೇಧಿಸಲಾಗಿದೆ.

ಜನರು ಕಡ್ಡಾಯವಾಗಿ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳು ಹೊರಡಿಸಿರುವ ಪ್ರಮಾಣಿತ ಕಾರ್ಯ ವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಸಭಾಂಗಣ, ಕಲ್ಯಾಣ ಮಂಟಪ, ಸಿನಿಮಾ ಮಂದಿರ, ಹಾಲ್‍ಗಳು ಮತ್ತು ಆಚರಣೆಗಾಗಿ ಜನಸೇರುವ ಇತರೆ ಪ್ರದೇಶಗಳ ಉಸ್ತುವಾರಿ ಹೊಂದಿರುವವರು ಕಡ್ಡಾಯವಾಗಿ ಸ್ಯಾನಿಟೈಸೇಷನ್ ಕ್ರಮಗಳನ್ನು ಅನುಸರಿಸಬೇಕು.

ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ.

ಆದೇಶ ಪಾಲನೆಯಲ್ಲಿ ಲೋಪವೆಸಗುವಂತವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಸೆಕ್ಷನ್ 51 ರಿಂದ 60 ಹಾಗೂ ಭಾರತೀಯ ದಂಡ ಸಂಹಿತೆ ಹಾಗೂ ಅನ್ವಯವಾಗಬಹುದಾದ ಇತರ ಕಾನೂನು ಉಪಬಂಧಗಳ ಅನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Comments are closed.